Saturday, February 14, 2026

ಸತ್ಯ | ನ್ಯಾಯ |ಧರ್ಮ

ಅಮೇರಿಕಾದೊಂದಿಗಿನ ಒಪ್ಪಂದದಿಂದ ಹತ್ತಿ ರೈತರು ಹಾಗೂ ಜವಳಿ ವಲಯದ ಮೇಲೆ ಪ್ರತಿಕೂಲ ಪರಿಣಾಮ: ರಾಹುಲ್ ಗಾಂಧಿ

ಭಾರತವು ಅಮೆರಿಕದೊಂದಿಗೆ ಮಾಡಿಕೊಂಡಿರುವ ವಾಣಿಜ್ಯ ಒಪ್ಪಂದದ ಸುಂಕದ ನಿಯಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ದೇಶವನ್ನು ದಾರಿ ತಪ್ಪಿಸಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಒಪ್ಪಂದವು ಭಾರತದ ಹತ್ತಿ ರೈತರು ಮತ್ತು ಜವಳಿ ರಫ್ತುದಾರರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕದೊಂದಿಗೆ ಬಾಂಗ್ಲಾದೇಶ ಮತ್ತು ಭಾರತ ಎರಡೂ ದೇಶಗಳು ಒಪ್ಪಂದ ಮಾಡಿಕೊಂಡಿವೆ. ಆದರೆ ಬಾಂಗ್ಲಾದೇಶಕ್ಕೆ ಶೂನ್ಯ ಶೇಕಡಾ ಸುಂಕ ಮತ್ತು ಭಾರತಕ್ಕೆ 18 ಶೇಕಡಾ ಸುಂಕ ಏಕೆ? ಎಂದು ರಾಹುಲ್ ತಮ್ಮ ‘ಎಕ್ಸ್’ (ಟ್ವಿಟರ್) ಪೋಸ್ಟ್‌ನಲ್ಲಿ ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಶನಿವಾರ ರಾಹುಲ್ ಗಾಂಧಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ: “18 ಶೇಕಡಾ ಸುಂಕ ವಿರುದ್ಧ ಶೂನ್ಯ (0) ಶೇಕಡಾ.. ತೆರಿಗೆಗಳ ವಿಷಯದಲ್ಲಿ ಸುಳ್ಳು ಹೇಳುವಲ್ಲಿ ನಿಪುಣರಾದ ಪ್ರಧಾನಿ ಮತ್ತು ಅವರ ಸಂಪುಟವು ಈ ವಿಷಯದ ಬಗ್ಗೆ ಹೇಗೆ ಗೊಂದಲ ಹರಡುತ್ತಿದೆ ಎಂಬುದನ್ನು ನಾನು ವಿವರಿಸುತ್ತೇನೆ. ಭಾರತ-ಅಮೆರಿಕ ವಾಣಿಜ್ಯ ಒಪ್ಪಂದದ ಮೂಲಕ ಭಾರತದ ಹತ್ತಿ ರೈತರನ್ನು ಮತ್ತು ಜವಳಿ ರಫ್ತುದಾರರನ್ನು ಹೇಗೆ ವಂಚಿಸುತ್ತಿದ್ದಾರೆಂದು ತಿಳಿಸುತ್ತೇನೆ. ಅಮೆರಿಕಕ್ಕೆ ಮಾಡುವ ಜವಳಿ ರಫ್ತಿನ ಮೇಲೆ ಬಾಂಗ್ಲಾದೇಶಕ್ಕೆ ಶೂನ್ಯ ಶೇಕಡಾ ಸುಂಕ ವಿಧಿಸಲಾಗುತ್ತಿದೆ. ಅಮೆರಿಕ ಮತ್ತು ಬಾಂಗ್ಲಾದೇಶ ನಡುವಿನ ವಾಣಿಜ್ಯ ಒಪ್ಪಂದದಿಂದ ಬಾಂಗ್ಲಾದೇಶಕ್ಕೆ ಈ ಪ್ರಯೋಜನ ಲಭಿಸಿದೆ. ಆದರೆ ಈ ಒಪ್ಪಂದದಲ್ಲಿರುವ ಏಕೈಕ ಷರತ್ತು ಎಂದರೆ ಅಮೆರಿಕದಿಂದ ಹತ್ತಿಯನ್ನು ಆಮದು ಮಾಡಿಕೊಳ್ಳಬೇಕು.”

“ಭಾರತೀಯ ಜವಳಿಗಳ ಮೇಲೆ 18 ಶೇಕಡಾ ಸುಂಕ ಘೋಷಿಸಿದ ನಂತರ ಬಾಂಗ್ಲಾದೇಶಕ್ಕೆ ನೀಡುತ್ತಿರುವ ವಿಶೇಷ ರಿಯಾಯಿತಿ ಬಗ್ಗೆ ನಾನು ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದಾಗ, ಮೋದಿ ಸರ್ಕಾರದ ಸಚಿವರೊಬ್ಬರು ಹೀಗೆ ಉತ್ತರಿಸಿದರು: ‘ನಮಗೂ ಅದೇ ಪ್ರಯೋಜನ ಬೇಕೆಂದರೆ, ನಾವು ಕೂಡ ಅಮೆರಿಕದಿಂದ ಹತ್ತಿಯನ್ನು ಆಮದು ಮಾಡಿಕೊಳ್ಳಬೇಕು.’ ಹಾಗಾದರೆ ಈ ವಿಷಯವನ್ನು ಇದುವರೆಗೆ ದೇಶದ ಮುಂದೆ ಏಕೆ ಮುಚ್ಚಿಟ್ಟಿದ್ದೀರಿ?” ಎಂದು ರಾಹುಲ್ ಪ್ರಶ್ನಿಸಿದ್ದಾರೆ. ಮೋದಿ ಸರ್ಕಾರ ಮಾಡಿಕೊಂಡಿರುವ ಈ ಒಪ್ಪಂದವು ಲಕ್ಷಾಂತರ ಜನರನ್ನು ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟಕ್ಕೆ ತಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕದೊಂದಿಗೆ ಕೇಂದ್ರ ಸರ್ಕಾರ ನಡೆಸಿದ ಮಾತುಕತೆಗಳನ್ನೂ ರಾಹುಲ್ ಟೀಕಿಸಿದ್ದಾರೆ. “ಇದು ಎಂತಹ ನೀತಿ? ಇದು ಎಂತಹ ಆಯ್ಕೆ? ಮುಂದೆ ಹಳ್ಳ ಹಿಂದೆ ಕೆರೆ ಎಂಬಂತೆ ರೂಪಿಸಿದ ಉರುಳೇ? ಅಮೆರಿಕದ ಹತ್ತಿಯನ್ನು ಆಮದು ಮಾಡಿಕೊಂಡರೆ ನಮ್ಮ ದೇಶದ ರೈತರು ನಾಶವಾಗುತ್ತಾರೆ. ನಾವು ಅಮೆರಿಕದ ಹತ್ತಿಯನ್ನು ಆಮದು ಮಾಡಿಕೊಳ್ಳಬಾರದು. ಆಮದು ಮಾಡಿಕೊಂಡರೆ ನಮ್ಮ ಜವಳಿ ಉದ್ಯಮ ಹಿಂದುಳಿದು ನಾಶವಾಗುತ್ತದೆ. ಅಮೆರಿಕದೊಂದಿಗೆ ಮಾಡಿಕೊಂಡಿರುವ ಈ ಒಪ್ಪಂದದ ಕಾರಣದಿಂದ ಭಾರತದಿಂದ ಹತ್ತಿ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುವ ಸಂಕೇತಗಳನ್ನು ಬಾಂಗ್ಲಾದೇಶ ನೀಡುತ್ತಿದೆ” ಎಂದು ರಾಹುಲ್ ತಿಳಿಸಿದ್ದಾರೆ.

“ಭಾರತದಲ್ಲಿ ಜವಳಿ ಉದ್ಯಮ ಮತ್ತು ಹತ್ತಿ ವ್ಯವಸಾಯವು ಜೀವನೋಪಾಯದ ಬೆನ್ನೆಲುಬು. ಈ ರಂಗಗಳ ಮೇಲೆ ಆಧಾರಿತವಾಗಿರುವ ಕಾರಣದಿಂದಲೇ ಕೋಟ್ಯಂತರ ಜನರ ಹಸಿವು ನೀಗುತ್ತಿದೆ. ಈ ವಲಯಗಳ ಮೇಲೆ ದಾಳಿ ಮಾಡುವುದೆಂದರೆ ಲಕ್ಷಾಂತರ ಕುಟುಂಬಗಳನ್ನು ನಿರುದ್ಯೋಗ ಮತ್ತು ಆರ್ಥಿಕ ಬಿಕ್ಕಟ್ಟಿಗೆ ತಳ್ಳುವುದು ಎಂದರ್ಥ” ಎಂದು ಅವರು ತೀವ್ರವಾಗಿ ಟೀಕಿಸಿದ್ದಾರೆ. ಅಲ್ಲದೆ, ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಯೋಚಿಸುವ ದೂರದೃಷ್ಟಿಯ ಸರ್ಕಾರವಾಗಿದ್ದರೆ, ಹತ್ತಿ ರೈತರು ಮತ್ತು ಜವಳಿ ರಫ್ತುದಾರರ ಶ್ರೇಯೋಭಿವೃದ್ಧಿಯನ್ನು ರಕ್ಷಿಸಿ ಒಪ್ಪಂದ ಮಾಡಿಕೊಳ್ಳುತ್ತಿತ್ತು. ಆದರೆ ಮೋದಿ ಸರ್ಕಾರ ಹಾಗೆ ಮಾಡದೆ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ. ನರೇಂದ್ರ ಮೋದಿ ಅಮೆರಿಕಕ್ಕೆ ಶರಣಾಗಿದ್ದಾರೆ. ಮೋದಿ ಮತ್ತು ಅವರ ಸಚಿವರು ಹತ್ತಿ ಹಾಗೂ ಜವಳಿ ವಲಯಕ್ಕೆ ತೀವ್ರ ನಷ್ಟ ಉಂಟುಮಾಡುವ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಗಂಭೀರವಾಗಿ ಆರೋಪಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page