Wednesday, February 18, 2026

ಸತ್ಯ | ನ್ಯಾಯ |ಧರ್ಮ

AI ಶೃಂಗಸಭೆಯಲ್ಲಿ ಗೊಂದಲ: ಕ್ಷಮೆಯಾಚಿಸಿದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಐಟಿ ಸಮ್ಮೇಳನದಲ್ಲಿ ಉಂಟಾದ ಅವ್ಯವಸ್ಥೆ ಮತ್ತು ಗೊಂದಲಗಳ ಹಿನ್ನೆಲೆಯಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಅತಿಥಿಗಳ ಕ್ಷಮೆಯಾಚಿಸಿದ್ದಾರೆ. ಸೋಮವಾರದಿಂದ ಆರಂಭವಾಗಿರುವ ಈ ಸಮ್ಮೇಳನದಲ್ಲಿ ಅತಿಥಿಗಳು ಎದುರಿಸಿದ ಅನಾನುಕೂಲತೆಗಳಿಗೆ ವಿಷಾದ ವ್ಯಕ್ತಪಡಿಸಿದ ಸಚಿವರು, ಸರ್ಕಾರವು ಮುಕ್ತ ಮನಸ್ಸಿನಿಂದ ಕಾರ್ಯನಿರ್ವಹಿಸುತ್ತಿದ್ದು, ಸಮ್ಮೇಳನವನ್ನು ಇನ್ನಷ್ಟು ಉತ್ತಮಗೊಳಿಸಲು ಬರುವ ಎಲ್ಲಾ ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸಮ್ಮೇಳನವು ವಿಶ್ವದ ಅತಿದೊಡ್ಡ ಮತ್ತು ಮೊದಲ AI ಶೃಂಗಸಭೆಯಾಗಿದ್ದು, ಇದಕ್ಕೆ ಲಭಿಸುತ್ತಿರುವ ಪ್ರತಿಕ್ರಿಯೆ ಅದ್ಭುತವಾಗಿದೆ ಎಂದು ಸಚಿವರು ಬಣ್ಣಿಸಿದ್ದಾರೆ. ಮೊದಲ ದಿನ ಎದುರಾದ ಸಮಸ್ಯೆಗಳನ್ನು ಸರಿಪಡಿಸಲು ಈಗಾಗಲೇ ವಾರ್ ರೂಮ್ ಸ್ಥಾಪಿಸಲಾಗಿದೆ ಮತ್ತು ಹಗಲು-ರಾತ್ರಿ ತಂಡಗಳು ಕೆಲಸ ಮಾಡುತ್ತಿವೆ ಎಂದು ಅವರು ಭರವಸೆ ನೀಡಿದ್ದಾರೆ. ಫೆಬ್ರವರಿ 16 ರಿಂದ 20 ರವರೆಗೆ ನಡೆಯುತ್ತಿರುವ ‘ಇಂಡಿಯಾ AI ಇಂಪ್ಯಾಕ್ಟ್ ಸಮಿಟ್ 2026’ ರಲ್ಲಿ ಅಂತರರಾಷ್ಟ್ರೀಯ ಟೆಕ್ ಕಂಪನಿಗಳ ಸಿಇಒಗಳು, ಸ್ಟಾರ್ಟ್‌ಅಪ್‌ಗಳ ಪ್ರತಿನಿಧಿಗಳು ಮತ್ತು ಸಾವಿರಾರು ತಜ್ಞರು ಭಾಗವಹಿಸುತ್ತಿದ್ದಾರೆ.

ಸಮ್ಮೇಳನದ ಮೊದಲ ದಿನ ಸುಮಾರು 70,000 ಅತಿಥಿಗಳು ಆಗಮಿಸಿದ್ದರು ಎಂದು ಅಂದಾಜಿಸಲಾಗಿದ್ದು, ಇಷ್ಟು ದೊಡ್ಡ ಮಟ್ಟದ ಜನಸಂದಣಿಯಿಂದಾಗಿ ಅನೇಕ ನಿರ್ವಹಣಾ ಲೋಪಗಳು ಕಂಡುಬಂದಿವೆ. ಭದ್ರತಾ ತಪಾಸಣೆಗಾಗಿ ಅತಿಥಿಗಳು ದೀರ್ಘಕಾಲ ಕ್ಯೂನಲ್ಲಿ ನಿಲ್ಲಬೇಕಾಯಿತು ಮತ್ತು ಸಂಚಾರ ದಟ್ಟಣೆಯಿಂದಾಗಿ ಅನೇಕ ಪ್ರತಿನಿಧಿಗಳು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ದೂರುಗಳು ಕೇಳಿಬಂದಿವೆ. ಸರಿಯಾದ ಮಾರ್ಗದರ್ಶನದ ಕೊರತೆ, ಸ್ಟಾಲ್‌ಗಳ ತೆರವು ಮತ್ತು ಕೆಲವು ಕಡೆ ಕಳವು ಪ್ರಕರಣಗಳ ಬಗ್ಗೆಯೂ ಅತಿಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page