Saturday, February 21, 2026

ಸತ್ಯ | ನ್ಯಾಯ |ಧರ್ಮ

‘ಎಪ್‌ಸ್ಟೀನ್’ ವ್ಯವಹಾರದಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಯನ್ನು ವಜಾಗೊಳಿಸಬೇಕು: ಸಿಪಿಐ(ಎಂ) ಡಿಮ್ಯಾಂಡ್

ದೆಹಲಿ: ಎಪ್‌ಸ್ಟೀನ್ ಫೈಲ್‌ಗಳಲ್ಲಿ ಹೆಸರು ಮತ್ತು ಪ್ರಸ್ತಾಪವಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿಯನ್ನು ತಕ್ಷಣವೇ ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.

ಈ ಕುರಿತು ಪೊಲಿಟ್‌ಬ್ಯೂರೋ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಎಪ್‌ಸ್ಟೀನ್ ಫೈಲ್‌ಗಳಲ್ಲಿ ತೀವ್ರ ಆಕ್ಷೇಪಾರ್ಹ ಮತ್ತು ಹೇಯವಾದ ಅಂಶಗಳು ಪ್ರತಿದಿನ ಹೊರಬರುತ್ತಿವೆ. ಅಮೆರಿಕದ ನ್ಯಾಯಾಂಗ ಇಲಾಖೆ ಮತ್ತು ಟ್ರಂಪ್ ಸರ್ಕಾರವು ಅವೆಲ್ಲವನ್ನೂ ಮಸಿ ಬಳಿದು ಮರೆಮಾಚಲು ಎಷ್ಟೇ ಪ್ರಯತ್ನಿಸುತ್ತಿದ್ದರೂ ಸತ್ಯಗಳು ಬೆಳಕಿಗೆ ಬರುತ್ತಲೇ ಇವೆ. ರಾಜಕೀಯ ನಾಯಕರು, ಆರ್ಥಿಕ ಶಕ್ತಿಗಳು, ಟೆಕ್ ದಿಗ್ಗಜರು ಮತ್ತು ಪ್ರಮುಖರು ಸೇರಿದಂತೆ ಅಧಿಕಾರ ಹಾಗೂ ಸಂಪತ್ತು ಉಳ್ಳವರೆಲ್ಲರ ಜೊತೆ ಬೆಸೆದುಕೊಂಡಿರುವ ಈ ನೆಟ್‌ವರ್ಕ್‌ನ ದಾರುಣವಾದ ಅಪರಾಧ ಸ್ವಭಾವ, ಅದರಲ್ಲೂ ಶಿಕ್ಷೆಯ ಭಯವಿಲ್ಲದಿರುವಿಕೆಯ ಬಗ್ಗೆ ಯಾರಿಗೂ ಯಾವುದೇ ಸಂಶಯವಿಲ್ಲ. ಈ ಕ್ರಿಮಿನಲ್ ನೆಟ್‌ವರ್ಕ್‌ನಲ್ಲಿ ಇವರೆಲ್ಲರೂ ಭಾಗಿಯಾಗಿದ್ದು, ಎಪ್‌ಸ್ಟೀನ್ ಇದರ ಮುಖ್ಯ ಸೂತ್ರಧಾರಿಯಾಗಿದ್ದಾನೆ.

ಇದಕ್ಕೆ ಸಂಬಂಧಿಸಿದಂತೆ ಬೆಳಕಿಗೆ ಬಂದ ಅನೇಕ ಅಂಶಗಳ ಮೇಲೆ ಹಲವಾರು ದೇಶಗಳಲ್ಲಿ ನಿರ್ದಿಷ್ಟ ಕಾನೂನುಬದ್ಧ ಮತ್ತು ಶಿಕ್ಷಾರ್ಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬ್ರಿಟನ್‌ನಲ್ಲಿ ರಾಜ ಚಾರ್ಲ್ಸ್ ಸಹೋದರ ಪ್ರಿನ್ಸ್ ಆಂಡ್ರ್ಯೂಗೆ ನೀಡಲಾಗಿದ್ದ ಎಲ್ಲಾ ರಾಜ ಬಿರುದುಗಳನ್ನು ತೆಗೆದುಹಾಕಲಾಗಿದೆ ಮತ್ತು ಅವರನ್ನು ಬಂಧಿಸಲಾಗಿದೆ. ಈ ಕಾರಣದಿಂದ ಇತರ ದೇಶಗಳಲ್ಲಿಯೂ ಅನೇಕ ಮಂದಿ ತಮ್ಮ ಪದವಿಗಳಿಗೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಉಂಟಾಗಿದೆ.

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಪ್ರಮುಖ ಉದ್ಯಮಿ ಅನಿಲ್ ಅಂಬಾನಿ ಅವರ ಹೆಸರುಗಳು ಈ ಫೈಲ್‌ಗಳಲ್ಲಿ ಇರುವ ಬಗ್ಗೆ ಸ್ಪಷ್ಟ ಪುರಾವೆಗಳಿದ್ದರೂ, ಅವರಿಗೆ ವಿವರಣೆ ನೀಡಲು ಅಥವಾ ಜವಾಬ್ದಾರರನ್ನಾಗಿ ಮಾಡಲು ಕೇಂದ್ರ ಸರ್ಕಾರವು ಒಂದೇ ಒಂದು ಪ್ರಯತ್ನವನ್ನೂ ಮಾಡಿಲ್ಲ. ಪಾರ್ಲಿಮೆಂಟ್ ವೇದಿಕೆಯಲ್ಲಿ ಎಪ್‌ಸ್ಟೀನ್ ಫೈಲ್ಸ್ ಬಗ್ಗೆ ಯಾವುದೇ ಚರ್ಚೆ ನಡೆಯಲು ಸಹ ಕೇಂದ್ರ ಸರ್ಕಾರವು ಅನುಮತಿ ನೀಡಿಲ್ಲ.

ಪ್ರಸ್ತುತ ಲಭ್ಯವಿರುವ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ಹರ್ದೀಪ್ ಸಿಂಗ್ ಪುರಿ ತಾವು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲೇ ಸುಳ್ಳು ಹೇಳುತ್ತಾ ಸಿಕ್ಕಿಬಿದ್ದಿದ್ದಾರೆ. ಆದರೂ, ಅವರನ್ನು ಸಚಿವ ಪದವಿಯಿಂದ ವಜಾಗೊಳಿಸುವ ಬದಲು, ಮೋಸದ ಹಾದಿಗಳ ಮೂಲಕ ಎಲ್ಲಾ ರೀತಿಯಿಂದಲೂ ಅವರನ್ನು ಕಾಪಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರದ ಪರಿಸ್ಥಿತಿಗಳನ್ನು ಮತ್ತು ಅವಮಾನವನ್ನು ತಪ್ಪಿಸಲು ಪ್ರಧಾನಿಯವರು ತಕ್ಷಣವೇ ಕೇಂದ್ರ ಸಚಿವ ಪುರಿಯನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಪೊಲಿಟ್‌ಬ್ಯೂರೋ ಒತ್ತಾಯಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page