Sunday, February 22, 2026

ಸತ್ಯ | ನ್ಯಾಯ |ಧರ್ಮ

ಚಿಕ್ಕಮಗಳೂರು: ಕಾಡಾನೆ ದಾಳಿ – ಏಳು ದಿನಗಳಲ್ಲಿ ಎರಡನೇ ಬಲಿ

ಚಿಕ್ಕಮಗಳೂರು ಜಿಲ್ಲೆಯ ಹುಣಸೆಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮತ್ತೊಂದು ಜೀವ ಬಲಿಯಾಗಿರುವ ದುರ್ಘಟನೆ ಸಂಭವಿಸಿದೆ. ಕೆಲವೇ ದಿನಗಳ ಹಿಂದೆ ಇದೇ ಕಾಫಿ ತೋಟದಲ್ಲಿ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದರೆ, ಇದೀಗ ಮಹಿಳಾ ಕಾರ್ಮಿಕೆಯೂ ದಾಳಿಗೆ ಬಲಿಯಾಗಿರುವುದು ಆತಂಕ ಹೆಚ್ಚಿಸಿದೆ.

ಕಾಫಿ ತೋಟದಲ್ಲೇ ಮತ್ತೊಂದು ದುರ್ಘಟನೆ
ತಾಲ್ಲೂಕಿನ ಹುಣಸೆಹಳ್ಳಿ ಗ್ರಾಮದಲ್ಲಿರುವ ನಾಗೇಶ್ ಗೌಡ ಅವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹೊಸಪೇಟೆ ಮೂಲದ ಬೋರಮ್ಮ (34) ಕಾಡಾನೆ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಕೆಲಸಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಕಾಡಾನೆ ಬೋರಮ್ಮ ಅವರಿಗೆ ಗಂಭೀರ ಗಾಯಗಳನ್ನುಂಟುಮಾಡಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ತೋಟದಲ್ಲಿ ಕಳೆದ ವಾರ 50 ವರ್ಷದ ಯಲ್ಲಪ್ಪ ಎಂಬ ಕಾರ್ಮಿಕ ಕೂಡ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಏಳು ದಿನಗಳ ಅಂತರದಲ್ಲಿ ಎರಡನೇ ಬಲಿ ಸಂಭವಿಸಿರುವುದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

ಆನೆ ಸೆರೆ ಕಾರ್ಯಾಚರಣೆ ಯಶಸ್ವಿ
ಘಟನೆ ಬಳಿಕ ಅರಣ್ಯ ಇಲಾಖೆ ತಕ್ಷಣ ಚುರುಕುಗೊಂಡಿದ್ದು, ಏಳು ಕುಮ್ಕಿ ಆನೆಗಳು ಹಾಗೂ ಸುಮಾರು 75 ಸಿಬ್ಬಂದಿಗಳೊಂದಿಗೆ ವ್ಯಾಪಕ ಕಾರ್ಯಾಚರಣೆ ಕೈಗೊಳ್ಳಲಾಯಿತು. ಮಹಿಳೆಗೆ ದಾಳಿ ನಡೆಸಿದ ಸ್ಥಳದ ಸಮೀಪದ ಕಾಫಿ ತೋಟದಲ್ಲೇ ಕಾಡಾನೆಯನ್ನು ಪತ್ತೆ ಹಚ್ಚಲಾಯಿತು.

ಅರವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ನಿತ್ರಾಣಗೊಳಿಸಿದ ನಂತರ ಕುಮ್ಕಿ ಆನೆಗಳ ಸಹಾಯದಿಂದ ನಿಯಂತ್ರಣಕ್ಕೆ ಪಡೆದು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಇದ್ದರೂ ದುರಂತ
ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಸೂಚನೆ ನೀಡಿದ್ದರೂ, ಜೀವನೋಪಾಯದ ಅನಿವಾರ್ಯತೆಯಿಂದ ಕಾರ್ಮಿಕರು ತೋಟಗಳಿಗೆ ತೆರಳುತ್ತಿದ್ದ ಹಿನ್ನೆಲೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಇದರ ಮಧ್ಯೆ, ಮೃತದೇಹವನ್ನು ಸಾಗಿಸುತ್ತಿದ್ದ ವಾಹನವನ್ನು ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ಸ್ಥಳೀಯರು ತಡೆದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ ನಡೆಸಿದ ನೂರಾರು ಗ್ರಾಮಸ್ಥರು ಸಂತ್ರಸ್ತ ಕುಟುಂಬಕ್ಕೆ ತಕ್ಷಣ ಸಮರ್ಪಕ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.

ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page