Monday, February 23, 2026

ಸತ್ಯ | ನ್ಯಾಯ |ಧರ್ಮ

ಮಾಜಿ ಕೇಂದ್ರ ಸಚಿವ, ಬಂಗಾಳ ರಾಜಕೀಯದ ‘ಚಾಣಕ್ಯ’ ಮುಕುಲ್ ರಾಯ್ ನಿಧನ

ಪಶ್ಚಿಮ ಬಂಗಾಳದ ಹಿರಿಯ ರಾಜಕಾರಣಿ, ಮಾಜಿ ರೈಲ್ವೆ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಪ್ರಮುಖ ನಾಯಕ ಮುಕುಲ್ ರಾಯ್ (71) ಅವರು ಸೋಮವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಮುಂಜಾನೆ ಅವರಿಗೆ ಕಾರ್ಡಿಯಾಕ್ ಅರೆಸ್ಟ್ (Cardiac arrest) ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಸುಬ್ರಾಂಶು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮುಕುಲ್ ರಾಯ್ ಅವರ ನಿಧನಕ್ಕೆ ಪಶ್ಚಿಮ ಬಂಗಾಳದ ಹಲವು ರಾಜಕೀಯ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ರಾಯ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅತ್ಯಂತ ಆಪ್ತ ಮತ್ತು ನಂಬಿಕಸ್ತ ನಾಯಕರಾಗಿದ್ದರು. ಟಿಎಂಸಿಯಲ್ಲಿ ಎರಡನೇ ಅತ್ಯಂತ ಶಕ್ತಿಶಾಲಿ ನಾಯಕ ಎಂದು ಗುರುತಿಸಿಕೊಂಡಿದ್ದ ಅವರು, 2017ರಲ್ಲಿ ಪಕ್ಷ ತೊರೆದು ಅಚ್ಚರಿ ಮೂಡಿಸಿದ್ದರು.

ಬಳಿಕ 2019ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಅವರು, ಬಂಗಾಳದಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆಲ್ಲುವಲ್ಲಿ ಅವರ ಕಾರ್ಯತಂತ್ರ ಮಹತ್ವದ್ದಾಗಿತ್ತು. 2021ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದರೂ, ಅದೇ ವರ್ಷ ಮತ್ತೆ ತೃಣಮೂಲ ಕಾಂಗ್ರೆಸ್‌ಗೆ ಮರಳಿದ್ದರು. ಅವರನ್ನು ಬಂಗಾಳ ರಾಜಕೀಯದ ‘ಚಾಣಕ್ಯ’ ಎಂದು ಕರೆಯಲಾಗುತ್ತಿತ್ತು. ಯುಪಿಎ-2 ಸರ್ಕಾರದ ಅವಧಿಯಲ್ಲಿ ಅವರು ಕೇಂದ್ರ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

2023ರಲ್ಲಿ ಡಿಮೆನ್ಶಿಯಾ (Dementia) ಕಾಯಿಲೆಗೆ ತುತ್ತಾದ ನಂತರ ಅವರು ಸಕ್ರಿಯ ರಾಜಕಾರಣದಿಂದ ದೂರವಿದ್ದರು. ಈ ಕಾಯಿಲೆಯ ಕಾರಣದಿಂದಾಗಿ ಕಳೆದ ವರ್ಷ ಕಲ್ಕತ್ತಾ ಹೈಕೋರ್ಟ್ ಅವರ ವಿಧಾನಸಭಾ ಸದಸ್ಯತ್ವವನ್ನು ರದ್ದುಗೊಳಿಸಿತ್ತು.


Related Articles

ಇತ್ತೀಚಿನ ಸುದ್ದಿಗಳು

You cannot copy content of this page