Monday, February 23, 2026

ಸತ್ಯ | ನ್ಯಾಯ |ಧರ್ಮ

ಅನಿಲ್ ಅಂಬಾನಿಗೆ ಬಾಂಬೆ ಹೈಕೋರ್ಟ್‌ನಲ್ಲಿ ಹಿನ್ನಡೆ: ಬ್ಯಾಂಕ್ ಖಾತೆಗಳನ್ನು ‘ಫ್ರಾಡ್’ ಎಂದು ವರ್ಗೀಕರಿಸಲು ಇದ್ದ ತಡೆ ರದ್ದುಪಡಿಸಿದ ನ್ಯಾಯಾಲಯ

ಮುಂಬೈ: ಕೈಗಾರಿಕೋದ್ಯಮಿ ಅನಿಲ್ ಅಂಬಾನಿಗೆ ಹಿನ್ನಡೆಯುಂಟಾಗಿದ್ದು, ಅವರ ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಬ್ಯಾಂಕ್ ಖಾತೆಗಳನ್ನು ‘ಮೋಸ’ (Fraud) ಎಂದು ವರ್ಗೀಕರಿಸಲು ಕೈಗೊಂಡಿರುವ ಕ್ರಮಗಳಿಗೆ ತಡೆ ನೀಡಿದ್ದ ಏಕಸದಸ್ಯ ಪೀಠದ ಮಧ್ಯಂತರ ಆದೇಶವನ್ನು ಬಾಂಬೆ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಖಾಡ್ ಅವರಿದ್ದ ವಿಭಾಗೀಯ ಪೀಠವು, ಮೂರು ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಆಡಿಟರ್ ಸಂಸ್ಥೆ ಬಿಡಿಒ ಇಂಡಿಯಾ ಎಲ್‌ಎಲ್‌ಪಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ಪುರಸ್ಕರಿಸಿ ಈ ತೀರ್ಪು ನೀಡಿದೆ. ಡಿಸೆಂಬರ್ 2025 ರಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ನೀಡಿದ್ದ ಮಧ್ಯಂತರ ಆದೇಶವು “ಅಕ್ರಮ ಮತ್ತು ದೋಷಪೂರಿತ” ಎಂದು ವಿಭಾಗೀಯ ಪೀಠವು ಅಭಿಪ್ರಾಯಪಟ್ಟಿದೆ.

ವಿಭಾಗೀಯ ಪೀಠದ ಈ ಆದೇಶಕ್ಕೆ ತಡೆ ನೀಡುವಂತೆ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕಾಲಾವಕಾಶ ನೀಡುವಂತೆ ಅಂಬಾನಿ ಪರ ವಕೀಲರು ಮಾಡಿದ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: ಕಳೆದ ತಿಂಗಳು ಬ್ಯಾಂಕುಗಳು ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿದ್ದವು. ಈ ಹಿಂದೆ ಏಕಸದಸ್ಯ ಪೀಠವು ಆರ್‌ಬಿಐ ನಿಯಮಗಳ ಉಲ್ಲಂಘನೆಯಾಗಿದೆ ಮತ್ತು ಬ್ಯಾಂಕುಗಳು ವರ್ಷಗಳ ನಂತರ ಎಚ್ಚೆತ್ತುಕೊಂಡಿವೆ ಎಂದು ಹೇಳಿ ಅಂಬಾನಿ ಮತ್ತು ಅವರ ಕಂಪನಿಗೆ ಮಧ್ಯಂತರ ಪರಿಹಾರ ನೀಡಿತ್ತು. ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಐಡಿಬಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಕೈಗೊಂಡಿದ್ದ ಕ್ರಮಗಳು ಕಾನೂನುಬದ್ಧವಾಗಿ ದೋಷಪೂರಿತ ಫೋರೆನ್ಸಿಕ್ ಆಡಿಟ್ ಮೇಲೆ ಆಧಾರಿತವಾಗಿವೆ ಎಂದು ಏಕಸದಸ್ಯ ಪೀಠವು ಈ ಹಿಂದೆ ಕ್ರಮಗಳಿಗೆ ತಡೆ ನೀಡಿತ್ತು.

ಆದರೆ, ಫೋರೆನ್ಸಿಕ್ ಆಡಿಟ್ ಕಾನೂನುಬದ್ಧವಾಗಿ ಸಿಂಧುವಾಗಿದೆ ಮತ್ತು ಹಣ ದುರುಪಯೋಗಕ್ಕೆ ಸಂಬಂಧಿಸಿದ ಗಂಭೀರ ಸಂಶೋಧನೆಗಳನ್ನು ಆಧರಿಸಿದೆ ಎಂದು ಬ್ಯಾಂಕುಗಳು ತಮ್ಮ ಮೇಲ್ಮನವಿಯಲ್ಲಿ ವಾದಿಸಿವೆ. ಆಡಿಟ್ ಸಂಸ್ಥೆ ಬಿಡಿಒ ಎಲ್‌ಎಲ್‌ಪಿ ಸಲ್ಲಿಸಿದ ವರದಿಯಲ್ಲಿ ಇದು ದಾಖಲಾಗಿದೆ ಎಂದು ಬ್ಯಾಂಕುಗಳು ಪ್ರತಿಪಾದಿಸಿವೆ.

ಬಿಡಿಒ ಎಲ್‌ಎಲ್‌ಪಿ ಸಂಸ್ಥೆಯು ಚಾರ್ಟರ್ಡ್ ಅಕೌಂಟೆಂಟ್ ಅಲ್ಲದವರ ಹಸ್ತಾಕ್ಷರವನ್ನು ಹೊಂದಿರುವುದರಿಂದ ಅದು ಆಡಿಟ್ ಮಾಡಲು ಅರ್ಹವಲ್ಲ ಎಂದು ಅಂಬಾನಿ ಈ ಹಿಂದೆ ವಾದಿಸಿದ್ದರು. ಆದರೆ ಈಗ ವಿಭಾಗೀಯ ಪೀಠವು ಏಕಸದಸ್ಯ ಪೀಠದ ತಡೆಯಾಜ್ಞೆಯನ್ನು ರದ್ದುಗೊಳಿಸಿರುವುದರಿಂದ, ಬ್ಯಾಂಕುಗಳು ಅಂಬಾನಿ ಖಾತೆಗಳನ್ನು ವಂಚನೆ ಎಂದು ವರ್ಗೀಕರಿಸುವ ಪ್ರಕ್ರಿಯೆಯನ್ನು ಮುಂದುವರಿಸಬಹುದಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page