Thursday, February 26, 2026

ಸತ್ಯ | ನ್ಯಾಯ |ಧರ್ಮ

ಎಸ್ಸಿ ಒಳಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ: 6-6-5 ಮಾದರಿ ಜಾರಿಗೆ ದಾರಿ

ಬೆಂಗಳೂರು: ಕರ್ನಾಟಕದ ಬಹು ನಿರೀಕ್ಷಿತ ಎಸ್ಸಿ ಒಳಮೀಸಲಾತಿ ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ರೂಪಿಸಿದ 6-6-5 ಉಪವರ್ಗೀಕರಣ ಮಾದರಿ ಜಾರಿಗೆ ದಾರಿ ತೆರೆದಿದೆ. ಮಸೂದೆಗೆ ಶೀಘ್ರ ಅಂಕಿತ ಹಾಕುವಂತೆ ಸಚಿವರ ನಿಯೋಗವು ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಮಾಡಿದ್ದನ್ನು ಸ್ಮರಿಸಬಹುದು. ಒಳಮೀಸಲಾತಿ ಗೊಂದಲದಿಂದ ಸರ್ಕಾರಿ ನೇಮಕಾತಿಗಳು ವಿಳಂಬವಾಗುತ್ತಿರುವುದಾಗಿ ಮನವರಿಕೆ ಮಾಡಿಕೊಟ್ಟಿದ್ದ ಸಚಿವರು, ತ್ವರಿತ ನಿರ್ಧಾರಕ್ಕೆ ಒತ್ತಾಯಿಸಿದ್ದರು.

ಯಾರಿಗೆ ಎಷ್ಟು ಮೀಸಲಾತಿ?
ರಾಜ್ಯದಲ್ಲಿ ಎಸ್ಸಿ ಸಮುದಾಯಗಳಿಗೆ ಈಗಾಗಲೇ 17% ಮೀಸಲಾತಿ ಇದೆ. ಈ 17% ಅನ್ನು ಉಪವರ್ಗೀಕರಣ ಮಾಡಿ ಹಂಚಿಕೆ ಮಾಡುವಂತೆ ಮಸೂದೆ ಪ್ರಸ್ತಾಪಿಸುತ್ತದೆ:
ಕ್ಯಾಟಗರಿ–ಎ (6%): ಮುಖ್ಯವಾಗಿ ಮಾದಿಗ ಸಂಬಂಧಿತ 16 ಜಾತಿಗಳು
ಕ್ಯಾಟಗರಿ–ಬಿ (6%): ಮುಖ್ಯವಾಗಿ ಹೊಲೆಯ ಸಂಬಂಧಿತ 19 ಜಾತಿಗಳು
ಕ್ಯಾಟಗರಿ–ಸಿ (5%): ಲಂಬಾಣಿ, ಭೋವಿ, ಕೊರಚ, ಕೊರಮ, ಅಲೆಮಾರಿ ಸೇರಿದಂತೆ 63 ಜಾತಿಗಳು
ಅವರ್ಗೀಕೃತ 3 ಜಾತಿಗಳು — ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ — ಇವುಗಳಿಗೆ ಕ್ಯಾಟಗರಿ–ಎ ಅಥವಾ ಬಿ ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ.

ನಾಗಮೋಹನ್ ದಾಸ್ ಆಯೋಗದ ಶಿಫಾರಸು
ಎಸ್ಸಿ ಒಳಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರ ರಚಿಸಿದ ಜಸ್ಟಿಸ್ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಒನ್-ಮ್ಯಾನ್ ಆಯೋಗವು 2025ರ ಆಗಸ್ಟ್ 4ರಂದು ವರದಿ ಸಲ್ಲಿಸಿತ್ತು. ಮೂಲ ಶಿಫಾರಸು 1-6-5-4-1 ಮಾದರಿಯಲ್ಲಿದ್ದರೂ, ಸರ್ಕಾರ ಅದನ್ನು 6-6-5 ರೂಪಕ್ಕೆ ಪರಿಷ್ಕರಿಸಿತು.

ಈ ಬೆಳವಣಿಗೆಗೆ ಪೂರಕವಾಗಿ, 2024ರ ಆಗಸ್ಟ್ 1ರಂದು ಸುಪ್ರೀಂಕೋರ್ಟ್ (ಸಿವಿಲ್ ಅಪೀಲ್ ನಂ.2317/2011) ನೀಡಿದ ತೀರ್ಪಿನಲ್ಲಿ ಎಸ್ಸಿ ಒಳಗಿನ ಉಪವರ್ಗೀಕರಣವು ಸಂವಿಧಾನ ಸಮ್ಮತವೆಂದು ಹೇಳಿ, ರಾಜ್ಯಗಳಿಗೆ ಈ ಹಕ್ಕು ಇದೆ ಎಂದು ಸ್ಪಷ್ಟಪಡಿಸಿತ್ತು.

2023ರ ಕಾಯ್ದೆ ಹಿನ್ನೆಲೆ
“The Karnataka Scheduled Castes and Scheduled Tribes (Reservation of Seats in Educational Institutions and of Appointments or Posts in the Services under the State) Act, 2023” ಮೂಲಕ ಎಸ್ಸಿ ಮೀಸಲಾತಿಯನ್ನು 15%ರಿಂದ 17%ಕ್ಕೆ ಹಾಗೂ ಎಸ್ಟಿ ಮೀಸಲಾತಿಯನ್ನು 3%ರಿಂದ 7%ಕ್ಕೆ ಹೆಚ್ಚಿಸಲಾಗಿತ್ತು. ಈ ಮೀಸಲಾತಿ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ನೇಮಕಾತಿಗಳಿಗೆ ಅನ್ವಯಿಸುತ್ತದೆ.

ನೇಮಕಾತಿ ಸ್ಥಗಿತಕ್ಕೆ ಅಂತ್ಯ?
2024ರ ಅಕ್ಟೋಬರ್‌ನಿಂದ ಎಸ್ಸಿ ಒಳಮೀಸಲಾತಿ ವರದಿ ಬರುವವರೆಗೆ ಸರ್ಕಾರವು ಎಲ್ಲಾ ಸರ್ಕಾರಿ ನೇಮಕಾತಿಗಳನ್ನು — ಹೊಸ ಹುದ್ದೆಗಳು, ಬ್ಯಾಕ್‌ಲಾಗ್ ಹುದ್ದೆಗಳು ಮತ್ತು ಪ್ರಮೋಷನ್‌ಗಳು ಸೇರಿದಂತೆ — ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಈಗ ಮಸೂದೆಗೆ ರಾಜ್ಯಪಾಲರ ಅಂಕಿತ ಸಿಕ್ಕಿರುವ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಗಳು ಮರುಾರಂಭವಾಗುವ ಸಾಧ್ಯತೆ ಹೆಚ್ಚಿದೆ.

ಒಟ್ಟು 101 ಜಾತಿಗಳಲ್ಲಿ 98 ಜಾತಿಗಳನ್ನು ಸ್ಪಷ್ಟವಾಗಿ ವರ್ಗೀಕರಿಸಲಾಗಿದ್ದು, 3 ಜಾತಿಗಳಿಗೆ ಆಯ್ಕೆ ಸ್ವಾತಂತ್ರ್ಯ ನೀಡಲಾಗಿದೆ. ಶಿಕ್ಷಣ, ಸರ್ಕಾರಿ ಸೇವೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ನಿಗಮಗಳಿಗೆ ಈ ಉಪವರ್ಗೀಕೃತ ಮೀಸಲಾತಿ ಅನ್ವಯವಾಗಲಿದೆ.

ರಾಜ್ಯದ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾದ ಈ ಒಳಮೀಸಲಾತಿ ಕ್ರಮವು, ಸಮುದಾಯಗಳ ನಡುವೆ ಸಮನ್ಯಾಯ ವಿತರಣೆಗೆ ನೆರವಾಗಲಿದೆ ಎಂದು ಸರ್ಕಾರ ವಾದಿಸುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page