Tuesday, March 3, 2026

ಸತ್ಯ | ನ್ಯಾಯ |ಧರ್ಮ

ಪ್ರಜ್ವಲ್ ರೇವಣ್ಣ ಜೈಲು ಪಾಲಾಗಲು ಎಚ್.ಡಿ. ಕುಮಾರಸ್ವಾಮಿಯೇ ಕಾರಣ: ಮದ್ದೂರು ಶಾಸಕ ಕೆ. ಎಂ. ಉದಯ ಆರೋಪ

ಮದ್ದೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಜೈಲು ಪಾಲಾಗಲು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೇ ನೇರ ಹೊಣೆ ಎಂದು ಮದ್ದೂರು ಶಾಸಕ ಕೆ. ಎಂ. ಉದಯ ಸೋಮವಾರ ಗಂಭೀರ ಆರೋಪ ಮಾಡಿದ್ದಾರೆ.

ಸೋಮವಾರ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ, ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದಾಗ ಜನರು ಅವರನ್ನು ಮೂರು ಬಾರಿ ತಿರಸ್ಕರಿಸಿದ್ದಾರೆ. ನಿಖಿಲ್ ಅವರಿಗೆ ರಾಜಕೀಯ ಯಶಸ್ಸು ಸಿಗದ ಕಾರಣ, ಕುಮಾರಸ್ವಾಮಿ ಅವರು ತಮ್ಮ ಸಹೋದರ ಎಚ್.ಡಿ. ರೇವಣ್ಣ ಅವರ ಮಗ ಪ್ರಜ್ವಲ್ ಅವರ ರಾಜಕೀಯ ಜೀವನವನ್ನು ಕೊನೆಗಾಣಿಸಿ, ಅವರನ್ನು ಜೈಲಿಗೆ ಕಳುಹಿಸುವಂತೆ ಮಾಡಿದ್ದಾರೆ,” ಎಂದು ದೂರಿದರು.

ಪ್ರಜ್ವಲ್ ರೇವಣ್ಣ ಅವರ ಜನಪ್ರಿಯತೆಯನ್ನು ಸಹಿಸಲು ಕುಮಾರಸ್ವಾಮಿ ಅವರಿಗೆ ಸಾಧ್ಯವಾಗಲಿಲ್ಲ. ಹಾಗಾಗಿಯೇ ಚುನಾವಣೆ ಸಮಯದಲ್ಲಿ ಅವರೇ ಪೆನ್ ಡ್ರೈವ್‌ಗಳನ್ನು ಸೃಷ್ಟಿಸಿ ಪ್ರಜ್ವಲ್ ಅವರನ್ನು ಜೈಲಿಗೆ ಕಳುಹಿಸಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮನಸ್ಸು ಮಾಡಿದ್ದರೆ ಅವರನ್ನು ಹೊರಗೆ ತರಬಹುದಿತ್ತು. ಆದರೆ ಕುಮಾರಸ್ವಾಮಿ ಅವರ ಕಾರಣದಿಂದಾಗಿಯೇ ಪ್ರಜ್ವಲ್ ಅವರಿಗೆ ಜೈಲಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಅವರು ಆರೋಪಿಸಿದರು.

ಇದೇ ವೇಳೆ ಗೆಜ್ಜಲಗೆರೆಯಲ್ಲಿ ನಡೆದ ಪ್ರತಿಭಟನೆಯ ಬಗ್ಗೆ ಪ್ರಸ್ತಾಪಿಸಿದ ಶಾಸಕರು, “ಕುಮಾರಸ್ವಾಮಿ ಅವರು ಮದ್ದೂರಿಗೆ ಬಂದು ಗೆಜ್ಜಲಗೆರೆ ಜನರನ್ನು ಪ್ರತಿಭಟನೆಗೆ ಪ್ರಚೋದಿಸುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page