Tuesday, March 3, 2026

ಸತ್ಯ | ನ್ಯಾಯ |ಧರ್ಮ

ನಮ್ಮದು ಹಾಲು-ಜೇನಿನಂತಹ ಸಂಬಂಧ, ಹುಳಿ ಹಿಂಡುವ ಪ್ರಯತ್ನ ಬಿಡಿ: ಅಶೋಕ್-ಕುಮಾರಸ್ವಾಮಿಗೆ ಸಿಎಂ ತಿರುಗೇಟು

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಚಟುವಟಿಕೆಗಳ ಮೇಲೆ ಕಣ್ಣಿಡಲು ಸರ್ಕಾರವೇ ಫೋನ್ ಕದ್ದಾಲಿಕೆ ನಡೆಸುತ್ತಿದೆ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದ್ದಾರೆ. ಈ ಕುರಿತು ಸುದೀರ್ಘ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿರೋಧ ಪಕ್ಷದ ನಾಯಕರ ನಡೆ ‘ತಾ ಕಳ್ಳ ಇತರರ ನಂಬ’ ಎಂಬಂತಿದೆ ಮತ್ತು ಇದು ಅತೃಪ್ತ ಆತ್ಮಗಳ ಹತಾಶ ಹೇಳಿಕೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ತಮ್ಮ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿಗಳು, “ನಮ್ಮದು ಹಾಲು-ಜೇನಿನಂತಹ ಸಂಬಂಧ. ಈ ನಿರುದ್ಯೋಗಿ ವಿರೋಧ ಪಕ್ಷದ ನಾಯಕರು ನಮ್ಮ ನಡುವೆ ಹುಳಿ ಹಿಂಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಅವರಲ್ಲಿರುವ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಸಂಬಂಧಕ್ಕೆ ಏನೂ ಆಗದು,” ಎಂದು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದ್ದು, ಶಾಸಕರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ ಅಂತಿಮವಾಗಿ ನಾವೆಲ್ಲರೂ ಹೈಕಮಾಂಡ್ ಆದೇಶಕ್ಕೆ ತಲೆಬಾಗುವವರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಫೋನ್ ಕದ್ದಾಲಿಕೆಯ ಇತಿಹಾಸವನ್ನು ಕೆದಕಿರುವ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಆದಿಚುಂಚನಗಿರಿ ಸ್ವಾಮೀಜಿ ಸೇರಿದಂತೆ ಏಳು ಜನ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿದ್ದರು ಎಂದು ಬಿಜೆಪಿಯ ಬಿ.ವೈ. ವಿಜಯೇಂದ್ರ ಅವರೇ ಆರೋಪ ಮಾಡಿದ್ದನ್ನು ನೆನಪಿಸಿದ್ದಾರೆ. ರಾಜ್ಯ ರಾಜಕೀಯದಲ್ಲಿ ಆಪರೇಷನ್ ಕಮಲ, ರೆಸಾರ್ಟ್ ರಾಜಕಾರಣ ಮತ್ತು ವಚನಭಂಗದಂತಹ ಅನಿಷ್ಟಗಳನ್ನು ತಂದಿದ್ದೇ ಬಿಜೆಪಿ ಮತ್ತು ಜೆಡಿಎಸ್ ನಾಯಕರು. ಇವರೊಳಗೆ ಇರುವ ಪರಸ್ಪರ ಅಪನಂಬಿಕೆ ಮತ್ತು ದ್ವೇಷದ ಕಾರಣಕ್ಕಾಗಿಯೇ ಕಳೆದ ದಶಕದಲ್ಲಿ ರಾಜ್ಯವು ಅತಿ ಹೆಚ್ಚು ಮುಖ್ಯಮಂತ್ರಿಗಳನ್ನು ಕಾಣುವಂತಾಯಿತು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧವೂ ಕಿಡಿಕಾರಿರುವ ಮುಖ್ಯಮಂತ್ರಿಗಳು, ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ದಿನದಿಂದಲೇ ಇಡಿ, ಐಟಿ ಮತ್ತು ಸಿಬಿಐಗಳಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿಯವರಿಗೆ ಗೂಢಚರ್ಯೆಯ ಪಾಠವನ್ನು ಅವರ ತಂದೆಯೇ ಹೇಳಿಕೊಟ್ಟಿರಬಹುದು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅಂದು ತಮಗೆ ಬೆಂಬಲ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಅವರ ಮೇಲೆಯೇ ಗೂಢಚರ್ಯೆ ನಡೆಸಿದ್ದರು ಎಂದು ಅವರು ಇತಿಹಾಸದ ಪುಟಗಳನ್ನು ಸ್ಮರಿಸಿದ್ದಾರೆ.

ಅಂತಿಮವಾಗಿ, ವಿರೋಧ ಪಕ್ಷದ ನಾಯಕರು ಕುಟಿಲ ರಾಜಕೀಯ ಬಿಟ್ಟು ರಚನಾತ್ಮಕವಾಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿರುವ ಸಿದ್ದರಾಮಯ್ಯ, ರಾಜ್ಯದ ಮತದಾರರು ನಮಗೆ ಐದು ವರ್ಷಗಳ ಜನಾದೇಶ ನೀಡಿದ್ದಾರೆ. ವಿರೋಧ ಪಕ್ಷಗಳ ಎಲ್ಲ ಕುತಂತ್ರಗಳ ನಡುವೆಯೂ ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಪೂರೈಸಲಿದೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಯೇ ಮುಂದುವರಿಯಲಿದ್ದಾರೆ ಎಂದು ದೃಢವಾಗಿ ಹೇಳಿದ್ದಾರೆ.


Related Articles

ಇತ್ತೀಚಿನ ಸುದ್ದಿಗಳು

You cannot copy content of this page