Friday, March 6, 2026

ಸತ್ಯ | ನ್ಯಾಯ |ಧರ್ಮ

ಸಿಎಂ ಸಿದ್ದರಾಮಯ್ಯರಿಂದ 17ನೇ ಬಜೆಟ್ ಮಂಡನೆ – 4.48 ಲಕ್ಷ ಕೋಟಿ ಆಯವ್ಯಯ, ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡ ಹೆಸರು ಮರುನಾಮಕರಣ

ಕರ್ನಾಟಕದ ಮುಖ್ಯಮಂತ್ರಿ Siddaramaiah ಅವರು 2026-27ನೇ ಸಾಲಿನ ರಾಜ್ಯ ಬಜೆಟ್ ಅನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದರು. ಇದು ಅವರು ಮಂಡಿಸಿದ ದಾಖಲೆಯ 17ನೇ ಬಜೆಟ್ ಆಗಿದ್ದು, ಈ ಬಾರಿಯ ಒಟ್ಟು ಆಯವ್ಯಯದ ಗಾತ್ರ 4.48 ಲಕ್ಷ ಕೋಟಿ ರೂ.ಗಳಾಗಿರುವುದಾಗಿ ಘೋಷಿಸಲಾಗಿದೆ.

ಕೃಷಿ, ಉದ್ಯೋಗ ಸೃಷ್ಟಿ, ಯುವಜನತೆ ಮತ್ತು ಸ್ಥಳೀಯ ಸಂಸ್ಕೃತಿಗೆ ಒತ್ತು ನೀಡಿರುವ ಈ ಬಜೆಟ್‌ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಸರ್ಕಾರ ಮಾಡಿದೆ. ಅದರಲ್ಲೂ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವ ಪ್ರಸ್ತಾವ ಪ್ರಮುಖ ಗಮನ ಸೆಳೆದಿದೆ.

ಬಜೆಟ್ ಮಂಡನೆಗೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜನರಿಗೆ ತಲುಪುತ್ತಿದ್ದು, ಕೋಟ್ಯಂತರ ಕುಟುಂಬಗಳ ಬದುಕಿಗೆ ನೆರವಾಗಿವೆ ಎಂದು ಹೇಳಿದರು. ಜನಸಾಮಾನ್ಯರ ಆರ್ಥಿಕ ಭದ್ರತೆ ಮತ್ತು ಅಭಿವೃದ್ಧಿಯೇ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ತಿಳಿಸಿದರು.

ಬಜೆಟ್‌ನ ಪ್ರಮುಖ ಅಂಶಗಳು
ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಯಂತ್ರಣ:
ಮಕ್ಕಳ ಮಾನಸಿಕ ಆರೋಗ್ಯ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಯಂತ್ರಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ.

ಬಜೆಟ್ ಗಾತ್ರ ಮತ್ತು ಸಾಲದ ಪ್ರಮಾಣ:
2026-27ನೇ ಸಾಲಿನ ಒಟ್ಟು ಆಯವ್ಯಯದ ಗಾತ್ರ 4.48 ಲಕ್ಷ ಕೋಟಿ ರೂ.ಗಳಾಗಿದ್ದು, ರಾಜ್ಯದ ಒಟ್ಟು ಸಾಲದ ಪ್ರಮಾಣ 8,24,389 ಕೋಟಿ ರೂ.ಗಳಷ್ಟಿದೆ ಎಂದು ಅಂದಾಜಿಸಲಾಗಿದೆ.

ಯುವಕರಿಗೆ ಅವಕಾಶ
ನೇಮಕಾತಿ ವಯೋಮಿತಿ ಸಡಿಲಿಕೆ:
ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ನೆರವಾಗುವ ಉದ್ದೇಶದಿಂದ ನೇಮಕಾತಿಯ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.

ಹುದ್ದೆಗಳ ಭರ್ತಿ:
ವಿವಿಧ ಸರ್ಕಾರಿ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಲಾಗಿದ್ದು, ನೇಮಕಾತಿ ಪ್ರಕ್ರಿಯೆ ಹಂತ ಹಂತವಾಗಿ ನಡೆಯಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ರೈತರಿಗೆ ವಿವಿಧ ಯೋಜನೆಗಳು
ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ:
ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ 100 ಕೋಟಿ ರೂ. ವೆಚ್ಚದಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರಲಾಗುತ್ತದೆ.

ಮಣ್ಣು ಮತ್ತು ಬೆಳೆ ಸಂರಕ್ಷಣೆ:
ಮಣ್ಣಿನ ಗುಣಮಟ್ಟ ಸುಧಾರಣೆಗೆ ‘ವಸುಧಾಮೃತ ಯೋಜನೆ’ ಮತ್ತು ‘ಸಸ್ಯ ಸಂಜೀವಿ ಯೋಜನೆ’ಗಳನ್ನು ಜಾರಿಗೆ ತರಲಾಗುತ್ತದೆ.

ಕೃಷಿ ಸೌಲಭ್ಯಗಳು:
ರಾಜ್ಯದ ಸುಮಾರು 3 ಲಕ್ಷ ರೈತರಿಗೆ ಕೃಷಿ ಯಂತ್ರೋಪಕರಣ ವಿತರಣೆ ಮಾಡಲಾಗುತ್ತದೆ. ಜೊತೆಗೆ 7 ಲಕ್ಷ ರೈತರಿಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ.

ಕೃಷಿ ಹೊಂಡ ಯೋಜನೆ:
ಮಳೆನೀರಿನ ಸಂಗ್ರಹ ಮತ್ತು ನೀರಿನ ಸಮರ್ಪಕ ಬಳಕೆಗೆ 363 ಕೋಟಿ ರೂ. ವೆಚ್ಚದಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲು ಯೋಜಿಸಲಾಗಿದೆ.

ಸಂಸ್ಕೃತಿ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ
ರಾಜ್ಯದ ವಿಶಿಷ್ಟ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಗುರುತನ್ನು ಹೆಚ್ಚಿಸಲು 50ಕ್ಕೂ ಹೆಚ್ಚು ಉತ್ಪನ್ನಗಳಿಗೆ ಭೌಗೋಳಿಕ ಸೂಚ್ಯಂಕ (GI) ಮಾನ್ಯತೆ ಪಡೆಯಲು ಕ್ರಮ ಕೈಗೊಳ್ಳಲಾಗುತ್ತದೆ.
ಖ್ಯಾತ ಕವಿ ಸಿದ್ದಲಿಂಗಯ್ಯ ಅವರ ಸ್ಮರಣಾರ್ಥ ಹೊಸ ಟ್ರಸ್ಟ್ ಸ್ಥಾಪನೆ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಇದಲ್ಲದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಹೆಸರನ್ನು ಸಾಮಾಜಿಕ ಚಿಂತಕ, ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡ ಅವರ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ತಿಳಿಸಲಾಗಿದೆ.

ಇದೇ ವೇಳೆ ರಾಜ್ಯದ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ನೀಡುವ ಯೋಜನೆಯನ್ನು ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page