Thursday, March 12, 2026

ಸತ್ಯ | ನ್ಯಾಯ |ಧರ್ಮ

ಜಮ್ಮುವಿನಲ್ಲಿ ಫಾರೂಕ್ ಅಬ್ದುಲ್ಲಾ ಮೇಲೆ ಹತ್ಯೆಯತ್ನ: ದಾಳಿಕೋರನ ಬಂಧನ, ಪವಾಡಸದೃಶವಾಗಿ ಪಾರಾದ ಮಾಜಿ ಸಿಎಂ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (NC) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಮೇಲೆ ಬುಧವಾರ ಜಮ್ಮುವಿನಲ್ಲಿ ಹತ್ಯೆಯತ್ನ ನಡೆದಿದೆ. ನಗರದಲ್ಲಿ ಆಯೋಜಿಸಲಾಗಿದ್ದ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ವೇಳೆ ವ್ಯಕ್ತಿಯೊಬ್ಬ ಫಾರೂಕ್ ಅಬ್ದುಲ್ಲಾ ಅವರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾನೆ.

ಈ ಘಟನೆಯು ಇಡೀ ರಾಜ್ಯದ ಭದ್ರತಾ ವ್ಯವಸ್ಥೆಯಲ್ಲಿ ತಲ್ಲಣ ಮೂಡಿಸಿದ್ದು, ಸಿ‌ಸಿ‌ಟಿವಿ ದೃಶ್ಯಾವಳಿಗಳಲ್ಲಿ ಆರೋಪಿಯು ಫಾರೂಕ್ ಅಬ್ದುಲ್ಲಾ ಅವರ ಮೇಲೆ ಗನ್ ಗುರಿಪಡಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ದಾಳಿಯ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಉಪಮುಖ್ಯಮಂತ್ರಿ ಸುರೇಂದರ್ ಚೌಧರಿ ಅವರು ಫಾರೂಕ್ ಅಬ್ದುಲ್ಲಾ ಅವರ ಜೊತೆಯಲ್ಲಿದ್ದರು. ಆರೋಪಿಯು ಗುಂಡು ಹಾರಿಸಿದ ತಕ್ಷಣವೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕೃತ್ಯದ ವೇಳೆ ಉಪಮುಖ್ಯಮಂತ್ರಿ ಸುರೇಂದರ್ ಚೌಧರಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಫಾರೂಕ್ ಅಬ್ದುಲ್ಲಾ ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಬಂಧಿತ ಆರೋಪಿಯನ್ನು ಜಮ್ಮು ನಿವಾಸಿ ಹಾಗೂ ಗಣಿ ಉದ್ಯಮಿ ಕಮಲ್ ಸಿಂಗ್ ಜನ್ವಾಲ್ ಎಂದು ಗುರುತಿಸಲಾಗಿದೆ. ಆತ ಇಷ್ಟು ದೊಡ್ಡ ಮಟ್ಟದ ನಾಯಕರ ಮೇಲೆ ದಾಳಿ ನಡೆಸಲು ಪ್ರೇರಣೆ ಏನು ಅಥವಾ ಇದರ ಹಿಂದೆ ಯಾವುದಾದರೂ ಸಂಘಟನೆಯ ಕೈವಾಡವಿದೆಯೇ ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮದುವೆಯಂತಹ ಸಾರ್ವಜನಿಕ ಸಮಾರಂಭದಲ್ಲಿ ಇಂತಹ ಘಟನೆ ನಡೆದಿರುವುದು ಅಲ್ಲಿನ ಭದ್ರತಾ ಲೋಪವನ್ನು ಎತ್ತಿ ತೋರಿಸಿದೆ.

ತಮ್ಮ ತಂದೆಯ ಮೇಲಿನ ಹತ್ಯೆಯತ್ನದ ಬಗ್ಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಝಡ್ ಪ್ಲಸ್ (Z+) ಮತ್ತು ಎನ್‌ಎಸ್‌ಜಿ (NSG) ಭದ್ರತೆ ಹೊಂದಿರುವ ಮಾಜಿ ಮುಖ್ಯಮಂತ್ರಿಯೊಬ್ಬರ ಮೇಲೆ ಇಂತಹ ಹಲ್ಲೆ ನಡೆದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page