Saturday, March 14, 2026

ಸತ್ಯ | ನ್ಯಾಯ |ಧರ್ಮ

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಪರ ತೀರ್ಮಾನಕ್ಕೆ ಎಲ್ಲರೂ ಸಹಕರಿಸಿ: ಒಳಮೀಸಲಾತಿ ಹೋರಾಟ ಸಮಿತಿ ಮನವಿ

ಮಾರ್ಚ್ 14: ಒಳಮೀಸಲಾತಿ ಜಾರಿಗೊಳಿಸುವ ಪ್ರಕ್ರಿಯೆ ಕೊನೆಯ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಅದನ್ನು ಶೀಘ್ರವಾಗಿ ಜಾರಿಗೊಳಿಸಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಬೇಕೆಂದು ಆಗ್ರಹಿಸಿ ಒಳಮೀಸಲಾತಿ ಹೋರಾಟ ಸಮಿತಿಯ ಮುಖಂಡರು ಶನಿವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಕಳೆದ ಸುಮಾರು 35 ವರ್ಷಗಳಿಂದ ಒಳಮೀಸಲಾತಿ ಜಾರಿಗೊಳಿಸುವಂತೆ ನಿರಂತರವಾಗಿ ವಿವಿಧ ರೀತಿಯ ಹೋರಾಟಗಳನ್ನು ನಡೆಸುತ್ತಿದ್ದೇವೆ ಎಂದು ಹೋರಾಟ ಸಮಿತಿಯ ಮುಖಂಡರು ತಿಳಿಸಿದರು. ನಮ್ಮ ಹೋರಾಟಕ್ಕೆ ಮಾನ್ಯ ಸುಪ್ರೀಂ ಕೋರ್ಟ್ ಒಳಮೀಸಲಾತಿ ಪರವಾಗಿ ತೀರ್ಪು ನೀಡಿದ್ದರೂ, ತೀರ್ಪು ಬಂದು ಎರಡು ವರ್ಷಗಳಾದರೂ ಸಮಗ್ರವಾಗಿ ಜಾರಿಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಇದೇ ವೇಳೆ, 56,432 ಸರ್ಕಾರಿ ಹುದ್ದೆಗಳನ್ನು ಒಳಮೀಸಲಾತಿ ಇಲ್ಲದೆ ಭರ್ತಿ ಮಾಡಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಮಾರ್ಚ್ 12ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆ ಬಳಿಕ ಹೋರಾಟಗಾರರ ನಿಯೋಗವನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ಒಂದು ಹುದ್ದೆಯನ್ನೂ ಒಳಮೀಸಲಾತಿ ಇಲ್ಲದೆ ಭರ್ತಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದು ಹೋರಾಟ ಸಮಿತಿಯ ಮುಖಂಡ ಮಾರಸಂದ್ರ ಮುನಿಯಪ್ಪ ತಿಳಿಸಿದರು.

ಮಾರ್ಚ್ 13ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿದ ನಿಯೋಗ, DPAR ಸುತ್ತೋಲೆ ಹಾಗೂ ರಾಜ್ಯಪಾಲರ ಸಹಿಯಾದ ಕಾಯ್ದೆಯ ರಾಜ್ಯಪತ್ರ ಪ್ರಕಟಣೆ ವಿಳಂಬವಾಗುತ್ತಿರುವ ಕುರಿತು ಚರ್ಚಿಸಿತು. ಈ ಸಂದರ್ಭದಲ್ಲಿ ರಾಜ್ಯಪತ್ರವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿರುವುದಾಗಿ ಅವರು ಹೇಳಿದರು.

ಮಾರ್ಚ್ 27ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಪರವಾದ ತೀರ್ಮಾನ ಕೈಗೊಳ್ಳಲು ಎಲ್ಲಾ ಸಮುದಾಯಗಳು ಸಹಕರಿಸಬೇಕೆಂದು ಮನವಿ ಮಾಡಿದರು. ಭೂಮಿ ಹಕ್ಕು, ದೌರ್ಜನ್ಯ ತಡೆ ಹಾಗೂ SCSP-TSP ಅನುದಾನ ಹಂಚಿಕೆಯಲ್ಲಿ ಉಂಟಾಗುತ್ತಿರುವ ಅನ್ಯಾಯಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಒಳಮೀಸಲಾತಿ ಹೋರಾಟವು ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದ್ದು, ಇದು ಯಾವುದೇ ಸಮುದಾಯದ ವಿರುದ್ಧದ ಹೋರಾಟವಲ್ಲ ಎಂದು ಹೋರಾಟಗಾರರು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಹೋರಾಟಗಾರ ಅಂಬಣ್ಣ ಅರೋಲಿಕರ್, “ಮಾರ್ಚ್ 27ರಂದು ಒಳಮೀಸಲಾತಿಯನ್ನು ಎಲ್ಲಾ ಹಂತಗಳಲ್ಲಿ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೋರಾಟಗಾರರು ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದಾರೆ” ಎಂದು ಎಚ್ಚರಿಸಿದರು.

ಮತ್ತೊಬ್ಬ ಹೋರಾಟಗಾರ ಬಿ. ನರಸಪ್ಪ ಮಾತನಾಡಿ, “ಒಳಮೀಸಲಾತಿ ಹೋರಾಟವನ್ನು ಸರ್ಕಾರ ಕಡೆಗಣಿಸಿದರೆ ಸರ್ಕಾರವೇ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾರಸಂದ್ರ ಮುನಿಯಪ್ಪ, ಅಂಬಣ್ಣ ಅರೋಲಿಕರ್, ಬಿ. ನರಸಪ್ಪ, ಎಂ. ಗುರುಮೂರ್ತಿ, ಫರ್ನಾಂಡಿಸ್ ಇಪ್ಪಳಗಾಂವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page