Monday, March 16, 2026

ಸತ್ಯ | ನ್ಯಾಯ |ಧರ್ಮ

ಕೇರಳದಲ್ಲಿ ಕಾಂಗ್ರೆಸ್ಸಿಗೆ ಕೈಕೊಟ್ಟ ತೇಜಸ್ವಿ: ಎಲ್​​ಡಿಎಫ್ ಜೊತೆ ಆರ್​​ಜೆಡಿ ಮೈತ್ರಿ ಘೋಷಣೆ

ಪಟ್ನಾ: ಬಿಹಾರದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಹೊಂದಿರುವ ರಾಷ್ಟ್ರೀಯ ಜನತಾ ದಳ (RJD), ಕೇರಳದಲ್ಲಿ ಮಾತ್ರ ಕಾಂಗ್ರೆಸ್ ವಿರುದ್ಧವೇ ಅಖಾಡಕ್ಕಿಳಿಯಲು ಸಜ್ಜಾಗಿದೆ. ಕೇರಳ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಆಡಳಿತಾರೂಢ ಎಲ್‌ಡಿಎಫ್ (LDF) ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಲಿದೆ ಎಂದು ತೇಜಸ್ವಿ ಯಾದವ್ ಭಾನುವಾರ ಪ್ರಕಟಿಸಿದ್ದಾರೆ.

ಬಿಹಾರದಲ್ಲಿ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪಕ್ಷಗಳು ಆರ್‌ಜೆಡಿ ನೇತೃತ್ವದ ‘ಮಹಾಗಟಬಂಧನ್’ನ ಮಿತ್ರಪಕ್ಷಗಳಾಗಿವೆ. ಆದರೆ, ಕೇರಳದಲ್ಲಿ ಎಡರಂಗ ಮತ್ತು ಕಾಂಗ್ರೆಸ್ ಪರಸ್ಪರ ಕಡು ವೈರಿಗಳಾಗಿದ್ದು, ತೇಜಸ್ವಿ ಯಾದವ್ ಈಗ ಎಡರಂಗದ ಪರ ನಿಂತಿದ್ದಾರೆ. “ಕೇರಳದಲ್ಲಿ ನಮ್ಮ ಪಕ್ಷಕ್ಕೆ ಮೊದಲಿನಿಂದಲೂ ಅಸ್ತಿತ್ವವಿದೆ. ಅಲ್ಲಿ ಎಡರಂಗವು ಅಧಿಕಾರ ಉಳಿಸಿಕೊಳ್ಳಲು ನಾವು ಸಹಾಯ ಮಾಡುತ್ತೇವೆ,” ಎಂದು ತೇಜಸ್ವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಹಾರದ 5 ರಾಜ್ಯಸಭಾ ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ತೇಜಸ್ವಿ ಅವರು ಮಹಾಗಟಬಂಧನದ ಶಾಸಕರೊಂದಿಗೆ ಸಭೆ ನಡೆಸಿದರು. ಆರ್‌ಜೆಡಿ ಅಭ್ಯರ್ಥಿ ಅಮರೇಂದ್ರ ಧಾರಿ ಸಿಂಗ್ ಅವರ ಗೆಲುವಿಗಾಗಿ ಆರ್‌ಜೆಡಿಯ 25 ಶಾಸಕರ ಜೊತೆಗೆ ಮಿತ್ರಪಕ್ಷಗಳು, ಎಐಎಂಐಎಂ (AIMIM) ಮತ್ತು ಬಿಎಸ್ಪಿ (BSP) ಶಾಸಕರ ಬೆಂಬಲವನ್ನು ಅವರು ಕೋರಿದ್ದಾರೆ. ಕುದುರೆ ವ್ಯಾಪಾರ ತಪ್ಪಿಸಲು ಶಾಸಕರನ್ನು ಪಟ್ನಾದ ಹೋಟೆಲೊಂದರಲ್ಲಿ ಇರಿಸಲಾಗಿದೆ.

ಚುನಾವಣೆಗೂ ಮುನ್ನ ಬಿಹಾರದ ಆರು ಕಾಂಗ್ರೆಸ್ ಶಾಸಕರ ಪೈಕಿ ನಾಲ್ವರು ‘ನಾಪತ್ತೆಯಾಗಿದ್ದಾರೆ’ ಎಂಬ ವದಂತಿ ಹಬ್ಬಿತ್ತು. ಇದು ಕ್ರಾಸ್ ವೋಟಿಂಗ್ ಭೀತಿ ಮೂಡಿಸಿತ್ತು. ಆದರೆ, ಕಾಂಗ್ರೆಸ್ ನಾಯಕ ಅಖಿಲೇಶ್ ಪ್ರಸಾದ್ ಸಿಂಗ್ ಈ ವದಂತಿಯನ್ನು ತಳ್ಳಿಹಾಕಿದ್ದು, “ಎಲ್ಲಾ ಶಾಸಕರು ನನ್ನ ಮನೆಯಲ್ಲಿದ್ದಾರೆ. ಎನ್‌ಡಿಎ (NDA) ತನ್ನ 20 ಶಾಸಕರ ಬಗ್ಗೆ ಚಿಂತಿಸಲಿ,” ಎಂದು ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಕೂಡ ಕಣದಲ್ಲಿರುವುದರಿಂದ ಬಿಹಾರದ ಈ ರಾಜಕೀಯ ಬೆಳವಣಿಗೆ ಭಾರೀ ಕುತೂಹಲ ಮೂಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page