Thursday, March 19, 2026

ಸತ್ಯ | ನ್ಯಾಯ |ಧರ್ಮ

ಧರ್ಮಸ್ಥಳದಲ್ಲಿ ಸತ್ತವರು ಮಾತನಾಡಲಾರರು, ಬದುಕಿರುವವರು ಮಾತನಾಡಬೇಕು!

“..ಪಿಐಎಲ್ ಅರ್ಜಿಯನ್ನು ಓದುತ್ತಾ ಹೋದಂತೆ ಸತ್ಯಗಳ ಅನಾವರಣದೊಂದಿಗೆ ಎಲ್ಲರ ಅಂತಃಕರಣವೂ ಅನಾವರಣಗೊಳ್ಳಲೇಬೇಕು!

ಎಸ್ ಬಾಲನ್ ಬರೆದ ಈ ಪಿಐಎಲ್ ಅರ್ಜಿ ಓದಿಯೂ ಮಾತನಾಡಿಲ್ಲ ಎಂದರೆ ಅವರು ಬದುಕಿಲ್ಲ ಎಂದರ್ಥ!”

“ಹಿರಿಯ ವಕೀಲ ಎಸ್ ಬಾಲನ್ ಬರೆದಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೊದಲ ಮೂರು ಪುಟಗಳ ಸಾರಾಂಶ” ಪತ್ರಕರ್ತ ನವೀನ್ ಸೂರಿಂಜೆಯವರ ಪ್ರಸ್ತುತಿಯಲ್ಲಿ

‘ಸತ್ತವರು ಮಾತನಾಡುವುದಿಲ್ಲ! ಬದುಕಿರುವವರು ಮಾತನಾಡಬೇಕು’ ಇದು ಯಾವುದೋ ದೇಶದ ತತ್ವಜ್ಞಾನಿಯೋ, ಕವಿಯೋ ಬರೆದಿರುವ ವಾಕ್ಯವಲ್ಲ ! ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 74 ಅಸಹಜ ಸಾವುಗಳ ತನಿಖೆಗೆ ಕೋರಿ ಸೌಜನ್ಯ ತಾಯಿ ಕುಸುಮಾವತಿಯವರು ಹೈಕೋರ್ಟ್ ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಯಲ್ಲಿ ರಾಜ್ಯದ ಹಿರಿಯ ವಕೀಲ ಎಸ್ ಬಾಲನ್ ಅವರು ಉಲ್ಲೇಖಿಸಿರುವ ವಾಕ್ಯವಿದು ! 65 ಪುಟಗಳ ಪಿಐಎಲ್ ಅರ್ಜಿ ಮೊದಲ ಸಂಪುಟ ಪ್ರಾರಂಭವಾಗುವುದೇ ‘ಸತ್ತವರು ಮಾತನಾಡುವುದಿಲ್ಲ, ಬದುಕಿರುವವರು ಮಾತನಾಡಬೇಕು’ ಎಂಬ ಮಾತುಗಳಿಂದ ! ಅರ್ಜಿಯನ್ನು ಓದುತ್ತಾ ಹೋದಂತೆ ಸತ್ಯಗಳ ಅನಾವರಣದೊಂದಿಗೆ ನ್ಯಾಯಾಧೀಶರೂ ಸೇರಿದಂತೆ ಎಲ್ಲರ ಅಂತಃಕರಣವೂ ಅನಾವರಣಗೊಳ್ಳಲೇಬೇಕು ! ಬಾಲನ್ ಬರೆದ ಪಿಐಎಲ್ ಅರ್ಜಿ ಓದಿಯೂ ಮಾತನಾಡಿಲ್ಲ ಎಂದರೆ ಅವರು ಬದುಕಿಲ್ಲ ಎಂದರ್ಥ !

ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪೀಠದ ಮುಂದೆ ವಿಚಾರಣೆ ನಡೆದು ‘ಎಲ್ಲಾ 74 ಅಸಹಜ ಸಾವುಗಳ ತನಿಖೆಯ ವಿವರಗಳನ್ನು ಸಲ್ಲಿಸಿ’ ಎಂದು ಮಹತ್ವದ ಆದೇಶವನ್ನು ಪಡೆದುಕೊಂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯನ್ನು ಹಿರಿಯ ವಕೀಲ ಎಸ್ ಬಾಲನ್ ರೂಪಿಸಿದ ಬಗೆ ಹೀಗಿದೆ :

ಸತ್ತವರು ಮಾತನಾಡಲಾರರು, ಬದುಕಿರುವವರು ಮಾತನಾಡಬೇಕು!
ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯನ್ನು ‘ಕತ್ತಲು ಆವರಿಸಿದ ಲೋಕದಲ್ಲಿರುವ ತಾಯಿ’ಯೊಬ್ಬಳು ಸಲ್ಲಿಸಿದ್ದಾಳೆ. ಅರ್ಜಿದಾರಾಗಿರುವ ತಾಯಿ ಕುಸುಮಾವತಿ ಅವರ ಹದಿನೇಳು ವರ್ಷದ ಮಗಳು ಸೌಜನ್ಯ 09-10-2012 ರಂದು ಬೆಳಗ್ಗೆ ‘ಧಾರ್ಮಿಕ ಉಪವಾಸ’ ಪಾಲಿಸಿಕೊಂಡು ಕಾಲೇಜಿಗೆ ತೆರಳಿದಳು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ತರಗತಿಗಳಿಗೆ ಹಾಗೂ ಪರೀಕ್ಷೆಗಳಿಗೆ ಹಾಜರಾದಳು. ಮಧ್ಯಾಹ್ನ ಸುಮಾರು 4 ಗಂಟೆಗೆ ತನ್ನ ಸ್ನೇಹಿತರಿಗೆ ಟಾಟಾ ಬೈಬೈ  ಹೇಳಿ ಮನೆಯ ಕಡೆಗೆ ಹೋಗುವ ಬಸ್ಸಿನಲ್ಲಿ ಹತ್ತಿದಳು. ಧರ್ಮಸ್ಥಳ ಗ್ರಾಮದ ತನ್ನ ಮನೆಯ ಸಮೀಪದ ನೆತ್ರಾವತಿ ಸ್ನಾನಘಟ್ಟ ಬಸ್ ಸ್ಟಾಪ್ ನಲ್ಲಿ ಇಳಿದಳು. ಆಕೆಯನ್ನು ಇಬ್ಬರು ಮಾವಂದಿರು ನೋಡಿ ಕೈ ಬೀಸಿದರು. ಅವಳು ಕೂಡ ಕೈ ಬೀಸಿದಳು. ಸೌಜನ್ಯ ಜೀವಂತವಾಗಿ ಕಾಣಿಸಿಕೊಂಡ ಕೊನೆಯ ಕ್ಷಣಗಳು ಅವು.

ಮರುದಿನ ಬೆಳಿಗ್ಗೆ, ಆಕೆಯ ಶವ ನೇತ್ರಾವತಿ ನದಿಯ ಸಮೀಪ ತೋಡಿನ ಬದಿಯ ಕಾಡಿನಂತಹ ಜಾಗದಲ್ಲಿ ಪತ್ತೆಯಾಯಿತು. ತನ್ನದೇ ಚೂಡಿದಾರದ ಶಾಲುಗಳಿಂದ ಕೈಗಳನ್ನು ಮರಕ್ಕೆ ಕಟ್ಟಿ ಹಾಕಲಾಗಿದ್ದು, ಕ್ರೂರವಾಗಿ ಅತ್ಯಾಚಾರ ಮಾಡಲಾಗಿತ್ತು. ಮೃತ ದೇಹವನ್ನು ನೋಡಿದಾಗ ಕೊಲೆಯ ಸ್ಪಷ್ಟ ಗುರುತುಗಳು ಕಂಡುಬರುತ್ತಿದ್ದವು. ಆ ನಂತರ ಈವರೆಗೆ  ಹದಿಮೂರು ವರ್ಷಗಳಿಂದ ಅರ್ಜಿದಾರೆಯು ‘ತನ್ನ ಮಗಳನ್ನು ಕೊಂದವರು ಯಾರು ?’ ಎಂಬ ಸತ್ಯ ತಿಳಿದುಕೊಳ್ಳಲು ಹೋರಾಡುತ್ತಲೇ ಇದ್ದಾಳೆ. ಆದರೆ, ನ್ಯಾಯ ದೊರಕಲಿಲ್ಲ.

ಮಾನಸಿಕ ಅಸ್ವಸ್ಥನಾಗಿರುವ ನಿರಪರಾಧಿ ವ್ಯಕ್ತಿ ಸಂತೋಷ್ ರಾವ್ ಎಂಬವರನ್ನು ಬಂಧಿಸಿ, ವಿಚಾರಣೆ ನಡೆಸಲಾಯಿತು. ಸಂತೋಷ್ ರಾವ್ನನ್ನು ಪೊಲೀಸರು ಜೈಲಿನಲ್ಲಿರಿಸಿದರು. ಹಲವು ವರ್ಷಗಳ ಬಂಧನದ ನಂತರ 2023ರಲ್ಲಿ ಸಿಬಿಐ ನ್ಯಾಯಾಲಯವು ಅವರನ್ನು ನಿರ್ದೋಷಿ ಎಂದು ಘೋಷಿಸಿತು.ಆ ತೀರ್ಪಿನಲ್ಲಿ ತನಿಖೆಯನ್ನು ತೀವ್ರವಾಗಿ ಟೀಕಿಸಿ, ಅಮಾಯಕ ಸಂತೋಷ್ ರಾವ್ ರನ್ನು ಸೌಜನ್ಯ ಪ್ರಕರಣದಲ್ಲಿ ಅನ್ಯಾಯವಾಗಿ ಸಿಲುಕಿಸಲಾಗಿದೆ ಎಂದು ಹೇಳಿತು. ನಿಜವಾದ ಅಪರಾಧಿಗಳು ಸ್ವತಂತ್ರವಾಗಿ ಓಡಾಡಿಕೊಂಡಿದ್ದಾರೆ.

ಅರ್ಜಿದಾರೆಯಾಗಿರುವ ಸೌಜನ್ಯ ತಾಯಿ ಕುಸುಮಾವತಿಯವರ ಪತಿ ಚಂದ್ರಪ್ಪ ಗೌಡ ಅವರು ಹನ್ನೆರಡು ವರ್ಷಗಳ ಕಾಲ ವಿವಿಧ ನ್ಯಾಯಾಲಯಗಳಿಗೆ ಅರ್ಜಿಗಳನ್ನು ಸಲ್ಲಿಸಿ, ಎಲ್ಲಾ ಸಂವಿಧಾನಾತ್ಮಕ ಅಧಿಕಾರಿಗಳನ್ನು ಸಂಪರ್ಕಿಸಿ, ಶಾಂತಿಯುತ ಪ್ರತಿಭಟನೆಗಳನ್ನು ನಡೆಸಿ, ಸತ್ಯಕ್ಕಾಗಿ ಹೋರಾಡಿದರು. ತನ್ನ ಮಗಳ ಸಾವಿನ ಪ್ರಶ್ನೆಗೆ ಅವರಿಗೆ ಉತ್ತರ ಬೇಕಾಗಿತ್ತು. ಆದರೆ ಅವರಿಗೆ ಉತ್ತರ ಸಿಗದೇ 2025 ಜನವರಿ 19ರಂದು ಅವರು ನಿಧನರಾದರು.

ತಾಯಿ ಹಾಗೂ ವಿಧವೆಯಾಗಿ ಅರ್ಜಿದಾರೆ ಕುಸುಮಾವತಿ ಈಗ ಈ ಮಾನ್ಯ ನ್ಯಾಯಾಲಯದ ಮುಂದೆ ಕೇವಲ ತನ್ನ ಮಗಳಿಗಾಗಿ ಮಾತ್ರವಲ್ಲ, ಧರ್ಮಸ್ಥಳ ಗ್ರಾಮದಲ್ಲಿ ಸತ್ತು ಇದೇ ರೀತಿಯ ದುಃಖ ಅನುಭವಿಸಿದ ರಾಜ್ಯದ ನೂರಾರು ಕುಟುಂಬಗಳ ಪರವಾಗಿ ಬಂದಿದ್ದಾಳೆ ! ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ತಮ್ಮ ಪ್ರೀತಿಯ ಜನರನ್ನು ಕಳೆದುಕೊಂಡ ಕುಟುಂಬಗಳು, ದಶಕಗಳ ಕಾಲ ಹುಡುಕಾಟ ನಡೆಸಿದರೂ ಉತ್ತರ ಸಿಗದವರು ಮತ್ತು ಸಂಸ್ಥೆಗಳ ನಿರ್ಲಕ್ಷ್ಯ ಹಾಗೂ ತಡೆಗಳಿಗೆ ಒಳಗಾದವರ ಪರವಾಗಿ ಕುಸುಮಾವತಿಯವರು ಈ ಅರ್ಜಿಯನ್ನು ಸಲ್ಲಿಸಿ ನ್ಯಾಯ ಕೇಳುತ್ತಿದ್ದಾರೆ.

ಸರ್ಕಾರಕ್ಕೂ ಅರ್ಥವಾಗದ ಪ್ರದೇಶದ ಅಸಾಮಾನ್ಯ ಘಟನೆಗಳು
ಸೌಜನ್ಯ ಪ್ರಕರಣವು ನಿರಂತರ ಸಾರ್ವಜನಿಕ ಗಮನ, ಮಾಧ್ಯಮ ವರದಿ ಮತ್ತು ಹಲವು ತನಿಖಾ ಸಂಸ್ಥೆಗಳ ಭಾಗವಹಿಸುವಿಕೆಯ ಬಳಿಕವೂ ನ್ಯಾಯವನ್ನು ಒದಗಿಸಲು ವಿಫಲವಾಯಿತು. ಇದರಿಂದ ಒಂದು ಭೀತಿದಾಯಕ ಪ್ರಶ್ನೆ ಉದ್ಭವಿಸಿತು: ಇಷ್ಟು ಗಮನ ಸೆಳೆದ ಪ್ರಕರಣಕ್ಕೂ ನ್ಯಾಯ ದೊರಕದಿದ್ದರೆ, ಯಾವುದೇ ಗಮನಕ್ಕೂ ಒಳಗಾಗದ ಧರ್ಮಸ್ಥಳದ ನೂರಾರು ಅಸಹಜ ಸಾವುಗಳಿಗೆ ನ್ಯಾಯ ದೊರಕಲು ಸಾಧ್ಯವೇ ? ಎಂಬ ಪ್ರಶ್ನೆ ಉದ್ಭವಿಸಿತು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದ ನಡೆದ ಸಾವುಗಳ ಅಂಕಿಅಂಶಗಳು ವಿಚಿತ್ರತೆಯನ್ನು ಪ್ರದರ್ಶಿಸುತ್ತದೆ. 2001ರಿಂದ 2012ರವರೆಗೆ ಮಾತ್ರ ಈ ಗ್ರಾಮ ಮತ್ತು ಅದರ ಸಮೀಪದ ಉಜಿರೆಯಲ್ಲಿ ಒಟ್ಟು 424 ಅಸಹಜ ಸಾವುಗಳು ಅಧಿಕೃತವಾಗಿ ದಾಖಲಾಗಿವೆ. ಒಂದು ಹಂತದಲ್ಲಿ ಇದು ರಾಷ್ಟ್ರೀಯ ಕ್ರೈಂ ಸರಾಸರಿಗಿಂತ 28 ಪಟ್ಟು ಹೆಚ್ಚಿತ್ತು !. ವರ್ಷದಿಂದ ವರ್ಷಕ್ಕೆ ಬೆಳ್ತಂಗಡಿ ತಾಲ್ಲೂಕು ಕರ್ನಾಟಕ ರಾಜ್ಯದಲ್ಲೇ ಅತಿ ಹೆಚ್ಚು ಯುಡಿಆರ್ (Unnatural Death Reports) ದಾಖಲಾದ ಪ್ರದೇಶವಾಗಿತ್ತು. ಇದು ದೊಡ್ಡ ನಗರವಲ್ಲ, ಬದಲಾಗಿ ಯಾತ್ರಿಕರ ಸಂಚಾರದ ದೇವಾಲಯವಿರುವ ಒಂದು ಸಣ್ಣ ಗ್ರಾಮ. ಸಾವಿನ ಈ ಅಂಕಿಅಂಶಗಳನ್ನು ಯಾವುದೇ ಸಮಾಜಶಾಸ್ತ್ರೀಯ, ಆರ್ಥಿಕ ಅಥವಾ ಮಾನಸಿಕ ಕಾರಣಗಳಿಂದ ಸಮರ್ಥಿಸಲು ಸಾಧ್ಯವಿಲ್ಲ.

2012ರಲ್ಲಿ ಸೌಜನ್ಯ ಹತ್ಯೆ ಪ್ರಕರಣವು ಸಾರ್ವಜನಿಕ ಗಮನ ಸೆಳೆದ ನಂತರ, ಆ ಪ್ರದೇಶದಲ್ಲಿ ದಾಖಲಾಗುವ ಸಾವುಗಳು ಮತ್ತು ಆತ್ಮಹತ್ಯೆಗಳ ಸಂಖ್ಯೆ ಏಕಾಏಕಿ ಕಡಿಮೆಯಾಯಿತು.ಜನಪರ ಪ್ರತಿಭಟನೆಯನಂತರ ಧರ್ಮಸ್ಥಳ  ಗ್ರಾಮದಲ್ಲಿ  ಸಾವುಗಳ ಸಂಖ್ಯೆಯ ತೀವ್ರ ಕುಸಿತವು ಈ ಹಿಂದೆನಡೆದ ಸಾವುಗಳು ಸಹಜವಲ್ಲ ಎಂಬ ಸಂಕೇತವನ್ನು ನೀಡುತ್ತದೆ. ಇದು ಪರಿಶೀಲನೆ ಹೆಚ್ಚಾದಾಗ ಪರಿಸ್ಥಿತಿಗೆ ಹೊಂದಿಕೊಂಡು ಅಪರಾಧಿಗಳು  ಮರೆಯಾಗುವ ಸಂಕೇತವಾಗಿದೆ.

ಅಧಿಕೃತ ದಾಖಲೆಗಳು ಬಹಿರಂಗಪಡಿಸಿದ ಹತ್ಯೆಗಳ ವ್ಯವಸ್ಥಿತ ಮುಚ್ಚಿಡುವಿಕೆ !
2025ರ ನಂತರದ ನಿರಂತರ ಹೋರಾಟ ಮತ್ತು ಸಾವಿನ ಚರ್ಚೆಯನ್ನು ಬಿಟ್ಟುಬಿಡಲು ನಿರಾಕರಿಸಿದ ನಾಗರಿಕರು ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳ ಮೂಲಕ, ಸರ್ಕಾರದ ಅಧಿಕೃತ ಮೂಲಗಳಿಂದ ಕೆಲವು ದಾಖಲೆಗಳು ಹೊರಬಂದವು. ಇವು ಜನರ ಅನುಮಾನವನ್ನು ಸ್ಪಷ್ಟ ಸಾಕ್ಷ್ಯವಾಗಿ ಪರಿವರ್ತಿಸಿದವು. ಹತ್ಯೆಗಳು ನಡೆದಿದ್ದು ಹಾಗೂ ಅವುಗಳನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಗಿದೆ ಎಂಬುದಕ್ಕೆ ದಾಖಲೆಗಳ ಆಧಾರ ದೊರಕಿತು. ಈ ದಾಖಲೆಗಳಲ್ಲಿ ಪೊಲೀಸ್ ಇಲಾಖೆಯ ಅಧಿಕೃತ ಪತ್ರಗಳು, ಅಸಹಜ ಸಾವುಗಳ (UDR) ನೋಂದಣಿ ಪುಸ್ತಕಗಳು, ಶವ ಸಂಸ್ಕಾರ ವೆಚ್ಚಗಳ ಪಾವತಿ ರಶೀದಿಗಳು ಮತ್ತು ಧರ್ಮಸ್ಥಳ ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯತ್ ನಡುವಿನ ಆಡಳಿತಾತ್ಮಕ ಪತ್ರ ವ್ಯವಹಾರಗಳು ಸೇರಿವೆ. ಇವೆಲ್ಲಾ ದಾಖಲೆಗಳು ಧರ್ಮಸ್ಥಳದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಸಾವುಗಳು ಮತ್ತು ಸಾವುಗಳ ಕ್ರಮಬದ್ಧ ಮುಚ್ಚಿಡುವಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ, ಇದನ್ನು ಕೇವಲ ಆಡಳಿತದ ನಿರ್ಲಕ್ಷ್ಯ ಅಥವಾ ಕಣ್ತಪ್ಪಿನ ದೋಷ ಎಂದು ಸ್ಪಷ್ಟನೆ ನೀಡಲು ಸಾಧ್ಯವಿಲ್ಲ.

1990ರಿಂದ 2021ರವರೆಗೆ ಒಟ್ಟು 31 ವರ್ಷಗಳ ಅವಧಿಯಲ್ಲಿ ಧರ್ಮಸ್ಥಳದಲ್ಲಿ ಸತ್ತ ಅಥವಾ ಸತ್ತ ಸ್ಥಿತಿಯಲ್ಲಿ ಪತ್ತೆಯಾದ ಕನಿಷ್ಠ 74 ಮಂದಿಯನ್ನು “ಪತ್ತೆಯಾಗದ ಪ್ರಕರಣ/ಅನಾಥ ವ್ಯಕ್ತಿಗಳು” ಎಂದು ಸತ್ತ  ದಿನವೇ ಹೂಳಲಾಗಿದೆ. ಇವರಲ್ಲಿ ಬಹುಪಾಲು ಶವಗಳನ್ನು ಪತ್ತೆಯಾದ ಅದೇ ದಿನವೇ ಸಮಾಧಿ ಮಾಡಲಾಗಿದ್ದು, ಉಳಿದವುಗಳನ್ನು ಮರುದಿನವೇ ಹೂಳಲಾಗಿದೆ. ಹತ್ಯೆ ನಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಡ್ಡಾಯವಾಗಿ ಅನುಸರಿಸಬೇಕಾದ ತನಿಖಾ ಪ್ರಕ್ರಿಯೆಗಳನ್ನಾದರೂ ಭಾಗಶಃ ಅನುಸರಿಸಿದ್ದರೆ, ಇಂತಹ ತುರ್ತು ಅಂತ್ಯಸಂಸ್ಕಾರ ಸಾಧ್ಯವೇ ಆಗುತ್ತಿರಲಿಲ್ಲ.

74 ಪ್ರಕರಣಗಳ ಪೈಕಿ ಪ್ರತಿ ಪ್ರಕರಣದಲ್ಲೂ (ಒಂದನ್ನು ಹೊರತುಪಡಿಸಿ), ಶವ ಹೂತ ಸ್ಥಳವನ್ನು ಯಾವುದೇ ಅಧಿಕೃತ ದಾಖಲೆಯಲ್ಲಿ ದಾಖಲಿಸಲಾಗಿಲ್ಲ. ಈ “ಗುರುತಿಲ್ಲದ” ವ್ಯಕ್ತಿಗಳು ಎಲ್ಲಿ ಹೂಳಲ್ಪಟ್ಟಿದ್ದಾರೆ ಎಂಬುದು ಇಂದಿಗೂ ಯಾರಿಗೂ ತಿಳಿದಿಲ್ಲ. ಈ ರೀತಿ ಪೊಲೀಸರು ಮತ್ತು ಗ್ರಾಮಪಂಚಾಯಿತಿಯಿಂದ ಹೂಳಲ್ಪಟ್ಟ ಮತ್ತು ಸುಡಲ್ಪಟ್ಟ ಪ್ರತಿಯೊಂದು ಪ್ರಕರಣವೂ ‘ಕೊಲೆ’ ನಡೆದಿರಬಹುದು ಎಂಬ ಅನುಮಾನಕ್ಕೆ ದಾರಿ ಮಾಡಿಕೊಡುತ್ತದೆ. ಇಂತಹ ಅನುಮಾನ ತೀರಾ ಸಮಂಜಸ ಮತ್ತು ಸಹಜವಾಗಿದೆ. ಹಾಗಾಗಿ 74 ಸಾವುಗಳಿಗೂ ಪ್ರತ್ಯೇಕ ಎಫ್ಐಆರ್ ಮೂಲಕ ತನಿಖೆ ಅಗತ್ಯವಿದೆ.

ಧರ್ಮಸ್ಥಳದಲ್ಲಿ ಬಲಿಯಾಗಿರುವ ಅಮಾಯಕರು ಸರಳವಾಗಿ ಕಾಣೆಯಾಗಿದ್ದಾರೆ. ಅವರು ಮೊದಲು ಸಾವಿನ ಮೂಲಕ ಕಾಣೆಯಾದರೆ, ನಂತರ ಸಮಾಧಿಯ ಮೂಲಕ ಕಾಣೆಯಾಗಿದ್ದಾರೆ. ಅಂತಿಮವಾಗಿ ಸರ್ಕಾರವೇ ದಾಖಲೆಗಳನ್ನು ಅಳಿಸುವ ಮೂಲಕ ಸತ್ತವರನ್ನು ಕಾಣೆಯಾಗಿಸಿದ್ದಾರೆ. ಇದರಿಂದಾಗಿ ಕಾಣೆಯಾಗಿರುವ ತಮ್ಮ ಬಂಧುಗಳನ್ನು ಹುಡುಕುವುದು ಯಾವುದೇ ಕುಟುಂಬಕ್ಕೂ ಸಾಧ್ಯವಾಗುತ್ತಿಲ್ಲ. ಹಾಗಾಗಿ ಸತ್ತವರು ಎಲ್ಲಿದ್ದಾರೆ ? ಯಾರವರು ಎಂಬ ಬಗ್ಗೆ ಬದುಕಿರುವವರು ಮಾತನಾಡಬೇಕಿದೆ, ಯಾಕೆಂದರೆ ಸತ್ತವರು ಮಾತನಾಡಲಾರರು! ಅದಕ್ಕಾಗಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಘನ ನ್ಯಾಯಾಲಯದ ಮುಂದೆ ಮಂಡಿಸಲಾಗುತ್ತಿದೆ.

(ಹಿರಿಯ ವಕೀಲ ಎಸ್ ಬಾಲನ್ ಬರೆದಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೊದಲ ಸಂಪುಟವೇ ದಾಖಲೆಗಳನ್ನು ಹೊರತುಪಡಿಸಿ 65 ಪುಟಗಳಿವೆ. 19 ಸಾವಿರ ಪದಗಳ ಮೊದಲ ಸಂಪುಟದ ಅರ್ಜಿಯ ಮೊದಲ ಮೂರು ಪುಟಗಳ ಸಾರಾಂಶವನ್ನು ಮಾತ್ರ ಇಲ್ಲಿ ನೀಡಲಾಗಿದೆ – ನವೀನ್ ಸೂರಿಂಜೆ)

Related Articles

ಇತ್ತೀಚಿನ ಸುದ್ದಿಗಳು

You cannot copy content of this page