ಎಟಿಎಂನಲ್ಲಿ ಹಣ ಬಾರದಿದ್ದರೂ ₹10,000 ಖಾತೆಯಿಂದ ಕಡಿತ: 9 ವರ್ಷಗಳ ಹೋರಾಟದ ನಂತರ ಬ್ಯಾಂಕ್‌ಗೆ ₹3.28 ಲಕ್ಷ ದಂಡ!

ಸೂರತ್: ಎಟಿಎಂ ಯಂತ್ರದಿಂದ ನಗದು ಬಾರದಿದ್ದರೂ ಗ್ರಾಹಕನ ಖಾತೆಯಿಂದ ಹಣ ಕಡಿತಗೊಳಿಸಿ, ಸತತ ಒಂಬತ್ತು ವರ್ಷಗಳ ಕಾಲ ಆತನನ್ನು ಅಲೆದಾಡಿಸಿದ ಬ್ಯಾಂಕ್ ಆಫ್ ಬರೋಡಾಗೆ ಗ್ರಾಹಕ ನ್ಯಾಯಾಲಯವು ಭಾರಿ ದಂಡ ವಿಧಿಸಿದೆ. ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕನಿಗೆ ಸೇವಾ ನ್ಯೂನತೆ ಎಸಗಿದ ಕಾರಣಕ್ಕಾಗಿ, ಮೂಲ ಮೊತ್ತ ₹10,000 ಜೊತೆಗೆ ಪ್ರತಿ ದಿನಕ್ಕೆ ₹100 ರಂತೆ ಒಟ್ಟು ₹3.28 ಲಕ್ಷಕ್ಕೂ ಅಧಿಕ ಮೊತ್ತವನ್ನು ಪರಿಹಾರವಾಗಿ ನೀಡುವಂತೆ ನ್ಯಾಯಾಲಯವು ಬ್ಯಾಂಕ್‌ಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ಈ ಘಟನೆಯು 2017ರ ಫೆಬ್ರವರಿ 18ರಂದು ಸೂರತ್‌ನಲ್ಲಿ ಸಂಭವಿಸಿತ್ತು. ಬ್ಯಾಂಕ್ ಆಫ್ ಬರೋಡಾದ ಗ್ರಾಹಕರೊಬ್ಬರು ಸ್ಥಳೀಯ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ₹10,000 ವಿತ್‌ಡ್ರಾ ಮಾಡಲು ತೆರಳಿದ್ದರು. ಕಾರ್ಡ್ ಬಳಸಿ ಪಿನ್ ನಮೂದಿಸಿದ ತಕ್ಷಣ ಅವರ ಮೊಬೈಲ್‌ಗೆ ಹಣ ಕಡಿತಗೊಂಡ ಸಂದೇಶ ಬಂದಿತ್ತಾದರೂ, ಎಟಿಎಂನಿಂದ ನಗದು ಹೊರಬರಲಿಲ್ಲ. ತಕ್ಷಣವೇ ಬ್ಯಾಂಕ್ ಶಾಖೆಗೆ ತೆರಳಿ ದೂರು ನೀಡಿದರೂ ಅಧಿಕಾರಿಗಳು ಸ್ಪಂದಿಸಲಿಲ್ಲ. ಸತತ ಇಮೇಲ್‌ಗಳು, ಆರ್‌ಟಿಐ ಅರ್ಜಿಗಳು ಮತ್ತು ಆರ್‌ಬಿಐ ಮೆಟ್ಟಿಲೇರಿದರೂ ಬ್ಯಾಂಕ್ ಮಾತ್ರ ಇದು ತಾಂತ್ರಿಕವಾಗಿ ಯಶಸ್ವಿ ವಹಿವಾಟು ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿತ್ತು.

ಬ್ಯಾಂಕ್ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಬೇಸತ್ತ ಗ್ರಾಹಕನು 2017ರ ಡಿಸೆಂಬರ್‌ನಲ್ಲಿ ಗ್ರಾಹಕ ವೇದಿಕೆಯ ಮೊರೆ ಹೋಗಿದ್ದನು. ವಿಚಾರಣೆಯ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡಾ, “ಎಟಿಎಂ ಎಸ್‌ಬಿಐಗೆ ಸೇರಿದ್ದು, ಅಲ್ಲಿ ವಹಿವಾಟು ಯಶಸ್ವಿಯಾಗಿದೆ ಎಂದು ದಾಖಲೆಗಳು ತೋರಿಸುತ್ತಿವೆ, ಹೀಗಾಗಿ ನಾವು ಹೊಣೆಯಲ್ಲ” ಎಂದು ವಾದಿಸಿತು. ಆದರೆ, ಗ್ರಾಹಕ ನ್ಯಾಯಾಲಯವು ಈ ವಾದವನ್ನು ತಳ್ಳಿಹಾಕಿತು. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ವಿಫಲವಾದ ಎಟಿಎಂ ವಹಿವಾಟಿನ ಹಣವನ್ನು ಐದು ಕೆಲಸದ ದಿನಗಳೊಳಗೆ ಬ್ಯಾಂಕ್‌ಗಳೇ ಸ್ವಯಂಪ್ರೇರಿತವಾಗಿ ಗ್ರಾಹಕನ ಖಾತೆಗೆ ಮರುಜಮೆ ಮಾಡಬೇಕು ಎಂಬ ನಿಯಮವನ್ನು ವೇದಿಕೆ ಎತ್ತಿ ತೋರಿಸಿತು.

ಸುದೀರ್ಘ ಒಂಬತ್ತು ವರ್ಷಗಳ ಕಾಲ ನಡೆದ ಈ ಕಾನೂನು ಹೋರಾಟದ ಅಂತಿಮ ತೀರ್ಪನ್ನು ನೀಡಿದ ನ್ಯಾಯಾಲಯವು, ಬ್ಯಾಂಕ್‌ನ ವಿಳಂಬ ಧೋರಣೆಯನ್ನು ತೀವ್ರವಾಗಿ ಖಂಡಿಸಿತು. ಫೆಬ್ರವರಿ 26, 2026ರ ಲೆಕ್ಕಾಚಾರದ ಪ್ರಕಾರ, ಗ್ರಾಹಕನು ತನ್ನ ಹಣವನ್ನು ಕಳೆದುಕೊಂಡು ಒಟ್ಟು 3,288 ದಿನಗಳಾಗಿವೆ. ನಿಯಮದಂತೆ ಪ್ರತಿ ದಿನದ ವಿಳಂಬಕ್ಕೆ ₹100 ರಂತೆ ದಂಡ ವಿಧಿಸಿದ ನ್ಯಾಯಾಲಯವು, ಬ್ಯಾಂಕ್ ಆಫ್ ಬರೋಡಾ ಗ್ರಾಹಕನಿಗೆ ₹3,28,800 ಪಾವತಿಸಬೇಕೆಂದು ಆದೇಶಿಸಿತು. ಇದರೊಂದಿಗೆ ₹10,000 ಅಸಲು ಮೊತ್ತಕ್ಕೆ ಶೇ. 9ರಷ್ಟು ಬಡ್ಡಿ ನೀಡುವಂತೆಯೂ ಸೂಚಿಸಿದೆ.

ಹೆಚ್ಚುವರಿಯಾಗಿ, ಗ್ರಾಹಕನು ಅನುಭವಿಸಿದ ಮಾನಸಿಕ ಕಿರುಕುಳಕ್ಕಾಗಿ ₹3,000 ಮತ್ತು ಕಾನೂನು ಹೋರಾಟದ ವೆಚ್ಚವಾಗಿ ₹2,000 ನೀಡುವಂತೆ ಬ್ಯಾಂಕ್‌ಗೆ ನಿರ್ದೇಶನ ನೀಡಲಾಗಿದೆ. ಈ ತೀರ್ಪು ಬ್ಯಾಂಕಿಂಗ್ ಗ್ರಾಹಕರಿಗೆ ದೊಡ್ಡ ಜಯ ತಂದುಕೊಟ್ಟಿದ್ದು, ತಾಂತ್ರಿಕ ನೆಪವೊಡ್ಡಿ ಗ್ರಾಹಕರನ್ನು ಶೋಷಿಸುವ ಬ್ಯಾಂಕ್‌ಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

Related Articles

ಇತ್ತೀಚಿನ ಸುದ್ದಿಗಳು