ಎಫ್-35 ಸ್ಟೆಲ್ತ್ ಫೈಟರ್ ಪತನ: ವಿಮಾನ ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್!

ಟೆಹ್ರಾನ್: ಅಮೆರಿಕದ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಾಧುನಿಕ ಯುದ್ಧ ವಿಮಾನ ‘ಎಫ್-35 ಸ್ಟೆಲ್ತ್ ಫೈಟರ್’ ಅನ್ನು ಇರಾನ್ ಹೊಡೆದುರುಳಿಸಿದೆ. ಈ ಬೆಚ್ಚಿಬೀಳಿಸುವ ಘಟನೆಯನ್ನು ಇರಾನ್ ಅಧಿಕೃತವಾಗಿ ದೃಢೀಕರಿಸಿದ್ದು, ವಿಮಾನವನ್ನು ಹೊಡೆದುರುಳಿಸಿದ ಕ್ಷಣದ ವಿಡಿಯೋವನ್ನು ಇರಾನ್ ಮಾಧ್ಯಮಗಳು ಬಿಡುಗಡೆ ಮಾಡಿವೆ.

ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿರುವ ಈ ವಿಡಿಯೋದಲ್ಲಿ, ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯು (Air Defense System) ಎಫ್-35 ವಿಮಾನವನ್ನು ಗುರಿಯಾಗಿಸಿ ಹೊಡೆದುರುಳಿಸಿರುವುದು ಕಂಡುಬಂದಿದೆ. ಈ ದಾಳಿಯು ಮಧ್ಯ ಇರಾನ್ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ಇರಾನ್ ನಡೆಸಿದ ಗುಂಡಿನ ದಾಳಿಯಲ್ಲಿ ತಮ್ಮ ಎಫ್-35 ಯುದ್ಧ ವಿಮಾನ ಪತನಗೊಂಡಿರುವುದನ್ನು ಯುಎಸ್ ಸೆಂಟ್ರಲ್ ಕಮಾಂಡ್ ಕೂಡ ಒಪ್ಪಿಕೊಂಡಿದೆ. ಆದರೆ, ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪೈಲಟ್ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಎಂದು ಕ್ಯಾಪ್ಟನ್ ಟಿಮ್ ಹಾಕಿನ್ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಯುದ್ಧದಲ್ಲಿ ತೊಡಗಿದ್ದ ಈ ವಿಮಾನವನ್ನು ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯು ಲಾಕ್ ಮಾಡಿ ಹೊಡೆದಿದೆ. ವಿಡಿಯೋದಲ್ಲಿ ಕಂಡುಬರುವಂತೆ, ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟ ಸಂಭವಿಸಿ ವಿಮಾನವು ನಿಯಂತ್ರಣ ತಪ್ಪಿ ಪತನಗೊಂಡಿದೆ. ಸ್ಥಳೀಯ ಕಾಲಮಾನ ಗುರುವಾರ ಮಧ್ಯಾಹ್ನ 2:50ಕ್ಕೆ ಈ ಘಟನೆ ನಡೆದಿದೆ ಎಂದು ಇರಾನ್ ಗಾರ್ಡ್ಸ್ ಘೋಷಿಸಿದ್ದಾರೆ. ತಮ್ಮ ವಾಯು ರಕ್ಷಣಾ ಕ್ಷಿಪಣಿ ತಗುಲಿದ ಕಾರಣ ವಿಮಾನವು ತೀವ್ರವಾಗಿ ಹಾನಿಗೊಳಗಾಗಿದೆ ಎಂದು ಇರಾನ್ ಹೇಳಿಕೊಂಡಿದೆ.

ಇರಾನ್ ಜೊತೆ ನಡೆಯುತ್ತಿರುವ ಈ ಸಂಘರ್ಷದಲ್ಲಿ ಅಮೆರಿಕದ ಅತ್ಯಾಧುನಿಕ ವಿಮಾನವೊಂದು ಪತನಗೊಳ್ಳುತ್ತಿರುವುದು ಇದೇ ಮೊದಲು. ಈಗಾಗಲೇ ಅಮೆರಿಕವು ಈ ಸಮರದಲ್ಲಿ ಹಲವಾರು ವಿಮಾನಗಳನ್ನು ಕಳೆದುಕೊಂಡಿದೆ. ಇತ್ತೀಚೆಗಷ್ಟೇ ಕುವೈತ್ ಪಡೆಗಳು ನಡೆಸಿದ ‘ಫ್ರೆಂಡ್ಲಿ ಫೈರಿಂಗ್’ನಲ್ಲಿ ಅಮೆರಿಕದ ಮೂರು ಎಫ್-15 ವಿಮಾನಗಳು ಪತನಗೊಂಡಿದ್ದವು. ಅಲ್ಲದೆ, ಇರಾಕ್‌ನಲ್ಲಿ ಒಂದು ಕೆಸಿ-135 ರಿಫ್ಯುಯೆಲಿಂಗ್ ವಿಮಾನ ಕೂಡ ಪತನಗೊಂಡಿತ್ತು. ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ನಡೆಯುತ್ತಿರುವ ದಾಳಿಗಳಲ್ಲಿ ಇದುವರೆಗೆ ಸುಮಾರು 200 ಅಮೆರಿಕನ್ ಸೈನಿಕರು ಗಾಯಗೊಂಡಿದ್ದಾರೆ.

https://www.instagram.com/reel/DWEtjznK6P_/?utm_source=ig_web_copy_link&igsh=NTc4MTIwNjQ2YQ==

Related Articles

ಇತ್ತೀಚಿನ ಸುದ್ದಿಗಳು