ಹೆಂಡತಿ ನಿಮ್ಮ ಆಳಲ್ಲ; ಗಂಡಸರೂ ಮನೆಗೆಲಸ ಮಾಡಬೇಕು: ಸುಪ್ರೀಂ ಕೋರ್ಟ್

ಪತ್ನಿಯು ಮನೆಯ ಕೆಲಸ ಅಥವಾ ಅಡುಗೆಯನ್ನು ಮಾಡದಿದ್ದ ತಕ್ಷಣ ಅದನ್ನು ಪತಿಯ ಮೇಲಿನ ‘ಕ್ರೌರ್ಯ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಒಬ್ಬ ಮಹಿಳೆಯನ್ನು ಮದುವೆಯಾಗುವುದು ಕೇವಲ ಮನೆಯ ಕೆಲಸಗಳನ್ನು ಮಾಡಿಸಿಕೊಳ್ಳಲು ಮಾತ್ರವಲ್ಲ ಎಂಬ ಮಹತ್ವದ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ಸುಪ್ರೀಂ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿ ಈ ಅಭಿಪ್ರಾಯ ನೀಡಿದೆ. ತನ್ನ ಪತ್ನಿ ಮನೆಯ ಕೆಲಸಗಳನ್ನು ಮಾಡುತ್ತಿಲ್ಲ, ನನ್ನನ್ನು ಮತ್ತು ಕುಟುಂಬದವರನ್ನು ನಿರ್ಲಕ್ಷಿಸುತ್ತಿದ್ದಾಳೆ ಎಂಬ ಕಾರಣ ನೀಡಿ ವ್ಯಕ್ತಿಯೊಬ್ಬರು ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್ ಮೊರೆ ಹೋಗಿದ್ದರು. 2017ರಲ್ಲಿ ಮದುವೆಯಾಗಿದ್ದ ಈ ದಂಪತಿಗೆ ಎಂಟು ವರ್ಷದ ಮಗನಿದ್ದಾನೆ. ಮದುವೆಯಾದ ಒಂದು ವಾರದ ನಂತರ ಪತ್ನಿಯ ನಡವಳಿಕೆಯಲ್ಲಿ ಬದಲಾವಣೆ ಬಂದಿದೆ, ಆಕೆ ಸರಿಯಾಗಿ ಅಡುಗೆ ಮಾಡುತ್ತಿಲ್ಲ ಮತ್ತು ಪೋಷಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾಳೆ ಎಂದು ಪತಿ ಆರೋಪಿಸಿದ್ದರು.

ಪತಿಯ ವಾದಕ್ಕೆ ಪ್ರತಿಕ್ರಿಯಿಸಿದ ಪತ್ನಿಯು, ಗರ್ಭಿಣಿಯಾಗಿದ್ದಾಗ ಪತಿ ಮತ್ತು ಅತ್ತೆ-ಮಾವಂದಿರ ಅನುಮತಿಯೊಂದಿಗೆ ತವರು ಮನೆಗೆ ಹೋಗಿದ್ದೆ ಎಂದು ತಿಳಿಸಿದರು. ಮಗನ ನಾಮಕರಣಕ್ಕೆ ಆಹ್ವಾನಿಸಿದರೂ ಅವರು ಬರಲಿಲ್ಲ ಮತ್ತು ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾರೆ ಎಂದು ದೂರಿದರು. ಆರಂಭದಲ್ಲಿ ಫ್ಯಾಮಿಲಿ ಕೋರ್ಟ್ ಇಬ್ಬರ ನಡುವೆ ಸಂಧಾನಕ್ಕೆ ಪ್ರಯತ್ನಿಸಿ ವಿಫಲವಾದಾಗ ಪತಿಗೆ ವಿಚ್ಛೇದನ ಮಂಜೂರು ಮಾಡಿತ್ತು. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆರೆ ಹೋಗಿದ್ದರು. ಹೈಕೋರ್ಟ್ ವಿಚ್ಛೇದನಕ್ಕೆ ತಡೆ ನೀಡಿದಾಗ, ಪತಿಯು ಸುಪ್ರೀಂ ಕೋರ್ಟ್ ಮೆರೆ ಹೋಗಿದ್ದರು.

ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, “ನೀವು ಮದುವೆಯಾಗಿರುವುದು ಜೀವನ ಸಂಗಾತಿಯನ್ನೇ ಹೊರತು ಕೆಲಸದಾಳನ್ನಲ್ಲ ಎಂಬುದು ನೆನಪಿರಲಿ” ಎಂದು ಪತಿಗೆ ಕಿವಿಮಾತು ಹೇಳಿತು. ಪತ್ನಿ ಮನೆಯ ಕೆಲಸ ಮಾಡದಿದ್ದರೆ ಅದನ್ನು ದೈಹಿಕ ಅಥವಾ ಮಾನಸಿಕ ಕ್ರೌರ್ಯ ಎನ್ನಲಾಗದು ಎಂದು ತಿಳಿಸಿತು. ಅಲ್ಲದೆ, “ಇದು ಹಳೆಯ ಕಾಲವಲ್ಲ, ಹೊಸ ತಲೆಮಾರು. ಪತಿಯಂದಿರು ಕೂಡ ಅಡುಗೆ ಮಾಡುವುದು, ಬಟ್ಟೆ ಒಗೆಯುವಂತಹ ಕೆಲಸಗಳಲ್ಲಿ ಪತ್ನಿಗೆ ಸಹಾಯ ಮಾಡಬೇಕು” ಎಂದು ನ್ಯಾಯಾಲಯ ಸೂಚಿಸಿತು. ಮುಂದಿನ ವಿಚಾರಣೆಗೆ ಇಬ್ಬರೂ ಖುದ್ದಾಗಿ ಹಾಜರಿರಬೇಕು ಎಂದು ಕೋರ್ಟ್ ಆದೇಶಿಸಿದೆ.

Related Articles

ಇತ್ತೀಚಿನ ಸುದ್ದಿಗಳು