ಸಂಚಾರ ದಟ್ಟಣೆ ಸರಿದೂಗಿಸಲು ಸರ್ಕಾರದ ಕಟ್ಟುನಿಟ್ಟಿನ ಕ್ರಮ: ಟೋಯಿಂಗ್ ಮರು ಜಾರಿ

ಸಂಚಾರ ದಟ್ಟಣೆ ಸಮಸ್ಯೆಯಿಂದ ಬೆಂಗಳೂರಿನ ಹೆಸರು ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ವಾಹನ ನಿಲುಗಡೆ ನೀತಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಈ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಪೂರ್ವ ಸಿದ್ಧತೆ ಕುರಿತು ನಗರ ಶಾಸಕರೊಂದಿಗೆ ಚರ್ಚೆ ನಡೆಸಿದ ಅವರು, ‘ನೋ ಪಾರ್ಕಿಂಗ್’ ಪ್ರದೇಶಗಳಲ್ಲಿ ನಿಯಮ ಉಲ್ಲಂಘನೆ ಮಾಡುವ ವಾಹನಗಳ ವಿರುದ್ಧ ಟೋಯಿಂಗ್ ಕ್ರಮವನ್ನು ಮರು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.

ನಗರದ ಐದು ಪಾಲಿಕೆಗಳಿಗೆ ತಲಾ ಎರಡು ಟೋಯಿಂಗ್ ವಾಹನಗಳನ್ನು ನೀಡಲಾಗುತ್ತಿದ್ದು, ಪೊಲೀಸರ ಸಹಯೋಗದಲ್ಲಿ ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲಿಸಿದ ವಾಹನಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ನಿಯಮಬಾಹಿರವಾಗಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದರಿಂದ ಹೊರತುಪಡಿಸಿ, ಪೊಲೀಸರು ಜಪ್ತಿ ಮಾಡಿದ ಹಳೆಯ ವಾಹನಗಳನ್ನು ರಸ್ತೆ ಬದಿಯಲ್ಲಿ ದೀರ್ಘಕಾಲ ನಿಲ್ಲಿಸುವುದೂ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ ಎಂಬ ಶಾಸಕರ ದೂರಿನ ಹಿನ್ನೆಲೆಯಲ್ಲಿ, ಅಂತಹ ವಾಹನಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಉದ್ದೇಶಕ್ಕಾಗಿ ನಗರದಲ್ಲಿ ನಾಲ್ಕು ಕಡೆ ವಿಶೇಷ ಜಾಗಗಳನ್ನು ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು