Wednesday, June 19, 2024

ಸತ್ಯ | ನ್ಯಾಯ |ಧರ್ಮ

ವಯಸ್ಸು ನಲವತ್ತು, ನೆನಪೇ ಸವಲತ್ತು

ಜೀವನವನ್ನು ಆದಷ್ಟು ಬದುಕಿಯೇ ಬಿಡಬೇಕೆನ್ನುವ ಧಾವಂತಕ್ಕೆ ಬಿದ್ದು, ತಿಂದುಂಡು ಕುಣಿದಾಡಿಕೊಳ್ಳುತ್ತಾ ಮೋಜು ಮಸ್ತಿ ನಡೆಸುವುದೇ ಬದುಕೆಂದುಕೊಂಡ ಈ ತಲೆಮಾರಿಗೆ ಬದುಕಲ್ಲಿ ಅಲ್ಲಲ್ಲಿ ಕೈ ಕೊಡುವ ಸಮಸ್ಯೆಗಳು ಬದುಕಿನ ವಸಂತಗಳನ್ನು ಕನಿಷ್ಠವನ್ನಾಗಿಸಿ ಬಿಡುತ್ತವೆ ಎನ್ನುತ್ತಾರೆ ಸಾರಾ ಅಲಿ ಪರ್ಲಡ್ಕ.

ಮಳೆಯ ಹನಿಗಳಿಂದ ಮೂಡುವ ನೀರ ಗುಳ್ಳೆಗಳು ಕ್ಷಣ ಮಾತ್ರದಲ್ಲಿ ಅದೇ ನೀರಿನೊಂದಿಗೆ ಲೀನವಾಗಿ ಕಣ್ಮರೆಯಾಗುವಷ್ಟೇ ಈ ಮಾನವ ಬದುಕೆಂಬುದು ನಿರರ್ಗಳವಾಗಿ ಒಪ್ಪಿಕೊಳ್ಳುವಂತದ್ದು. ಜೀವನವನ್ನು ಆದಷ್ಟು ಬದುಕಿಯೇ ಬಿಡಬೇಕೆನ್ನುವ ಧಾವಂತಕ್ಕೆ ಬಿದ್ದು, ತಿಂದುಂಡು ಕುಣಿದಾಡಿಕೊಳ್ಳುತ್ತಾ ಮೋಜು ಮಸ್ತಿ ನಡೆಸುವುದೇ ಬದುಕೆಂದುಕೊಂಡ ಈ ತಲೆಮಾರಿಗೆ  ಬದುಕಲ್ಲಿ ಅಲ್ಲಲ್ಲಿ ಕೈ ಕೊಡುವ ಸಮಸ್ಯೆಗಳು  ಬದುಕಿನ ವಸಂತಗಳನ್ನು ಕನಿಷ್ಠವನ್ನಾಗಿಸಿಬಿಡುತ್ತವೆ.

ನಲವತ್ತು ದಾಟಿದೊಡನೆ ವೈದ್ಯಕೀಯ ಪರೀಕ್ಷೆಗಳಿಗೆ ದೇಹವನ್ನು ಒಡ್ಡಬೇಕೆನ್ನುವಂತಹ ಸಿದ್ಧಾಂತವು ಸಾರ್ವತ್ರಿಕವಾಗಿ ಪ್ರಚಲಿತದಲ್ಲಿದೆ. ವರ್ಷ ನಲವತ್ತು ಆಗುತ್ತಿದ್ದಂತೆ ಏನೋ ನಡೆಯಬಾರದ್ದು ನಡೆದಿರುವಂತೆ ಗಡಗಡ ನಡುಗಬೇಕಿಲ್ಲ.

ವೈದ್ಯಕೀಯ ತಪಾಸಣಾಕೇಂದ್ರಗಳಲ್ಲಿ, ಪ್ರಯೋಗಾಲಯದಲ್ಲಿ ದುಂಬಾಲು ಬಿದ್ದು ರೋಗಗಳೇನಾದರೂ ಭಾದಿಸಿದೆಯೋ ಎಂದು ಚಾತಕ ಪಕ್ಷಿಯಂತೆ ಕಾಯುತ್ತ ಇರಬೇಕಾಗಿಯೂ ಇಲ್ಲ. ಅಂತಹ ಚಿಂತನೆಗಳಿಂದ  ಶರೀರವನ್ನು ರೋಗಗಳು ಪ್ರವೇಶಿಸುವ ಸಾಧ್ಯತೆಗಳು ಹೆಚ್ಚಾಗಿರುವುದು. ನಕಾರಾತ್ಮಕ ಚಿಂತನೆಗಳಿಂದ ಮನಸ್ಸನ್ನು ಮುಕ್ತವಾಗಿರಿಸಬೇಕು. ನಲವತ್ತು ಕಳೆಯುತ್ತಿದ್ದಂತೆಯೇ ಮೊದಲಿನಂತೆ ಬದುಕಲು ಮುಜುಗರ ಪಡುವವರಿದ್ದಾರೆ. ಅವರನ್ನು ಸಮಾಜವು ಪರೋಕ್ಷವಾಗಿ ಮುಪ್ಪಿಗೆ ಒಗ್ಗಲು ತಾಕೀತು ಮಾಡುತ್ತಲಿರುತ್ತದೆ. ಮೊದಲಿನಂತೆ ಬಟ್ಟೆ ಬರೆ ತೊಡುವುದನ್ನೋ, ಮುಂಚಿನ ಹುಡುಗಾಟಿಕೆಗಳ ತೊರೆಯಬೇಕೆನ್ನುವುದನ್ನು  ನಿರ್ಲಕ್ಷಿಸಿಕೊಂಡು ತಮ್ಮ ಬಯಕೆಯಂತೆ  ಬದುಕು ನಡೆಸುವುದರಲ್ಲೇನೂ ತಪ್ಪಿಲ್ಲ. ವಯಸ್ಸನ್ನು ವ್ಯಂಗ್ಯವಾಡುವವರಿಗೆ ನೀವು ನೀಡಬೇಕಾದ ಉತ್ತರ ಈ  ಫೋರ್ಟಿ ಎನ್ನುವುದು ಜಸ್ಟ್ ನಂಬರಲ್ಲವೇ ಎಂದು. ಮನಸ್ಸು ಇಚ್ಚಿಸಿದಂತೆ ಶರೀರದ ಬೆಳವಣಿಗೆಯು ನಲವತ್ತು ಆಗುವುದರಲ್ಲಿ ಸಂಪೂರ್ಣತೆ ಹೊಂದುತ್ತದೆ ಅಷ್ಟೇ. ಬದುಕಿನ ಪ್ರಾಥಮಿಕ ಹಂತದಲ್ಲಿ ಒಳ್ಳೆಯ ಅಥವಾ ಕೆಟ್ಟ ಅಭ್ಯಾಸಗಳು ಬಲು ಬೇಗನೆ ಜೀವನ ಶೈಲಿಯಾಗಿ ಮಾರ್ಪಾಡು ಆಗುತ್ತವೆ. ನಲವತ್ತರ ನಂತರದಲ್ಲಿ ಹೊಸ ಅಭ್ಯಾಸಗಳನ್ನು ಪರಿಪಾಠ ಗೊಳಿಸಿಕೊಳ್ಳುವುದು ವಿರಳ. ಆದರೆ ತನ್ನಲ್ಲಿನ ತಪ್ಪುಗಳನ್ನು ತಿದ್ದಿ ಸುಂದರ ಬದುಕು ಕಟ್ಟಲು ಅಥವಾ ಜ್ಞಾನೋದಯಕ್ಕೆ ನಲವತ್ತನೇ ವಯಸ್ಸು ಪ್ರೋತ್ಸಾಹಿಸುತ್ತದೆ. ನಲವತ್ತರಲ್ಲಿ ತಿದ್ದಿ ಬಾಳದವನು ಮತ್ತೆ ತನ್ನ ಜೀವನದಲ್ಲಿ ಬದಲಾವಣೆಗೆ ಪ್ರಯತ್ನಿಸಲಾರ ಎನ್ನುವ ಮಾತೊಂದನ್ನು ಹಿರಿಯರು ಹೇಳುತ್ತಿರುತ್ತಾರೆ.

ಮನುಷ್ಯನ ಆಯುಷ್ಯವು ಶತವರ್ಷಕ್ಕೆ ಪರಿಮಿತವಾಗಿರುತ್ತದೆ. ಆದರೆ ಅಷ್ಟು ಸುದೀರ್ಘ ಆಯುಷ್ಯವನ್ನು ಗಳಿಸಿ ಸವಿದು ಸವೆಸಿ ಗತಿಸುವವರು ಮಾತ್ರ ಬಹಳ ವಿರಳ. ಆ ಆಯುಷ್ಯದ ಅರ್ಧದಷ್ಟನ್ನು ಇರುಳಿನ ನಿದ್ರೆಗಳಲ್ಲಿ ಕಳೆದರೆ, ಅದರ ಇನ್ನರ್ಧವು ಶೈಶವ ಕೌಮಾರ್ಯದಲ್ಲಿ ಮತ್ತು ಮುಪ್ಪಿನಲ್ಲಿ ಕಳೆದು ಹೋಗುತ್ತದೆ. ಇನ್ನು ಉಳಿದುದರಲ್ಲಿ ಬಹು ಪಾಲು ಬದುಕಿನ ಮಜಲುಗಳಲ್ಲಿ  ಗಳಿಸಿಕೊಂಡ ಯಶಸ್ಸೋ, ತೋರಿದ ಹುಂಬತನಗಳೋ ಆಗಿರಬಹುದು. ಕೆಲವೊಮ್ಮೆ ವಯಸ್ಸಿನ್ನೂ ಪಕ್ವಗೊಂಡಿಲ್ಲವೆಂದು ವಯಸ್ಸನ್ನು  ಆರೋಪಿಸಿಯೇ ವರ್ಷಗಳನ್ನು ಸವೆಸಿರುತ್ತೇವೆ. ಬದುಕಿನುದ್ದಕ್ಕು ಪಾಠ ಕಲಿಯುವುದರಲ್ಲೇ ಬದುಕು ಕೊನೆಯಾಗಿಸುವ  ವಿಚಿತ್ರ ಓಟವೇನು ಈ ಬದುಕಿನ ಆಟ!?

ಬದುಕಿನ ನಲವತ್ತರ ವಸಂತಗಳನ್ನು ದಾಟಿದವರು ತನ್ನ ಹಾಗೂ ಇತರರ ಬದುಕಿನ ಚಿತ್ರಣಗಳನ್ನು ಸಮೀಪದಿಂದ ಅಲ್ಲ, ಹೃದಯದಿಂದ ಕಂಡವರಾಗಿದ್ದಾರೆ. ಅನುಭವಗಳನ್ನು ಹೇಳಿಕೊಳ್ಳುವಾಗಲೆಲ್ಲ ತಮಗರಿವಿಲ್ಲದೆ ತತ್ವಗಳೊಂದಿಗೆ ಅವರು ಪೋಣಿಸುತ್ತಾರೆ. ಎಲ್ಲೆಲ್ಲಿ ಹೇಗೆಲ್ಲಾ ಎಚ್ಚರಿಕೆ ವಹಿಸಬೇಕೆಂದು ಇವರಲ್ಲೇ ಕೇಳಿ ಕಲಿತುಕೊಳ್ಳಬೇಕೆಂದು ಹಲವು ಘಟನೆಗಳು ಘಟಿಸಿದಾಗಲೆಲ್ಲ ಇವರು ನೀಡಿದ ಸಲಹೆ, ಎಚ್ಚರಿಕೆಯ ಅರಿವಾಗುತ್ತದೆ. ಈ ನಲವತ್ತು ಹಾಗೆಯೇ, ಬದುಕಿನ ಅನುಭವಗಳ ಆಗರ. ಮಾತುಗಳ ಮಧ್ಯೆ ಮಾರ್ಮಿಕವಾಗಿ ಅವರದ್ದೇ ಆದಂತಹ ಜಿಜ್ಞಾಸೆಗಳನ್ನು ಹೊರಗೆಡಹುತ್ತಾ ನಿಮ್ಮ ದಾರಿಯನ್ನು ಸುಭದ್ರಗೊಳಿಸಿರೆನ್ನುವ ಸಂದೇಶ ನೀಡುತ್ತಾರೆ.

ಇಂದು ನಲವತ್ತು ವಸಂತಗಳನ್ನು ದಾಟಿ ನಿಂತವರು, ಅಂದಿನ ತಮ್ಮ ಬಾಲ್ಯಾವಸ್ಥೆಯ ಕನಸು ತುಂಬಿದ ಪುಟ್ಟ ಕಣ್ಣುಗಳಾಗಿದ್ದವರು. ಅಂದು ಆ ಮಕ್ಕಳು  ಕುಟುಂಬ ಬಳಗದ ಕೆಲವು ಯುವ  ಉತ್ಸಾಹಿಗಳನ್ನು ನೋಡುತ್ತಾ, ಅವರ ಮಾತುಗಳನ್ನು ಆಲಿಸುತ್ತಿದ್ದವರು. ಅವರ ಅಂದ ಚಂದ, ಹುರುಪು, ಪರೋಪಕಾರ, ಸಂಪತ್ತು, ಸವಲತ್ತು, ಮಾತುಗಾರಿಕೆ ಇತ್ಯಾದಿ ವೈವಿಧ್ಯಮಯ ವ್ಯಕ್ತಿತ್ವಗಳಿಗೆ ಮೂಕ ವಿಸ್ಮಿತರಾಗಿದ್ದವರು. ಅಂದು ಯಾರೂ ಆ ಮಕ್ಕಳ ಕಡೆ ಗಮನ ಹರಿಸಿರಲಿಕ್ಕಿಲ್ಲ. ಆದರೆ ಅಂದಿನ ಆ ಯುವ ಹುರುಪುಗಳಿಗೆ ಇಂದು ನಲವತ್ತನ್ನು ದಾಟಿರುವ ಅಂದಿನ ಆ ಮಕ್ಕಳೇ ದೊಡ್ಡ ಅಭಿಮಾನಿಗಳಾಗಿದ್ದರು. ಆ ಉತ್ಸಾಹಿ ಯುವಕ ಯುವತಿಯರು ಜೀವನದಲ್ಲಿ ವಯಸ್ಸಿನೊಂದಿಗೆ ರಾಜಿಯಾಗುತ್ತಾ ಮುಪ್ಪನ್ನು ಅಪ್ಪಿಕೊಳ್ಳುವ ಚಿತ್ರಣಗಳ ಸಂಪೂರ್ಣ ದೃಶ್ಯಾವಳಿಗಳನ್ನು ಕಂಡ ಇಂದಿನ ಪಕ್ವಗೊಂಡ ನಲವತ್ತರವರೇ ಅಂದೊಮ್ಮೆ ಪುಟ್ಟ ಬೆರಗುಗಣ್ಣಿನ ಮುಗ್ಧ ವೀಕ್ಷಕರಾಗಿದ್ದವರು.

ಜೀವನದ ಕೊನೆಯ ಹಂತದಲ್ಲಿ  ಮರೆವಿನ ಸುಳಿಗೆ ಸಿಕ್ಕು ನಿಷ್ಕ್ರಿಯರಾದವರು, ಯಾವುದಾದರು ರೋಗಕ್ಕೆ ತುತ್ತಾಗಿರುವವರು  ತಮ್ಮ ಜೀವನದ ಅನುಭವಗಳನ್ನು  ವೃದ್ಧಾಪ್ಯದಲ್ಲಿ ನಿರಾಳವಾಗಿ ಹಂಚಿಕೊಳ್ಳುವಷ್ಟು ಶಕ್ತರಾಗಿರುವುದಿಲ್ಲ. ಅಂತಹವರಿಂದ ಯುವ ಪೀಳಿಗೆಗೆ ಸಾಕಷ್ಟು ಹಳೆಯ ಕಾಲದ ಮಾಹಿತಿ ಸಿಗುವುದು ವಿರಳ. ಆದರೆ ಇಂದಿನ ನಲವತ್ತರವರು ತಮ್ಮ ಸ್ಮರಣೆಯಲ್ಲಿ ಸೆರೆ ಹಿಡಿದಿಟ್ಟ ಅಂದಿನ ಅವರ ಯುವ ಬದುಕಿನಿಂದ ಇಂದಿನವರೆಗಿನ ಚಿತ್ರಣಗಳನ್ನು ನಿರಾಯಾಸವಾಗಿ ಬಿಡಿಸಬಲ್ಲರು. ಆದ್ದರಿಂದಲೇ ಅವರು ಪದೇ ಪದೇ ಬದುಕು ಬಲು ಚಿಕ್ಕದು ಎನ್ನುತ್ತಿರುತ್ತಾರೆ. ಅಂದು ತಮ್ಮ ಮನೆಗಳಲ್ಲಿ ಇದ್ದ ಹಿರಿ ಮುದಿ ಜೀವಗಳು ಬದುಕಿ ಬಂದ ದಾರಿ, ಉಳಿಸಿಕೊಟ್ಟ ಸಂಸ್ಕೃತಿ, ಕಲಿಸಿಕೊಟ್ಟ ಆದರ್ಶಗಳನ್ನು ತಂದೆ ತಾಯಿಯರು ಹೇಳಿಕೊಟ್ಟಿರುವುದನ್ನು ಆಲಿಸಿ ಕೊಂಡಿರುವುದರಿಂದಲೇ ಇಂದಿಗೂ ತಮ್ಮ ಪೂರ್ವಜರು ಏನಾಗಿದ್ದರು, ಹೇಗಿದ್ದರು ಎಂಬುದರ ಬಗೆಗಿನ ವಿಸ್ಮಯಗಳು ಇವರಿಂದ ಲಭ್ಯವಾಗುವುದು. ನಲವತ್ತು ದಾಟಿದವರು ಅಂದಿನಿಂದ ಇಂದಿನವರೆಗೂ  ಕುಟುಂಬದವರೊಂದಿಗೆ ಇರಿಸಿಕೊಂಡ  ಒಡನಾಟದ ಪ್ರತಿಫಲವಾಗಿ ಇಂದು ಬಲು ದೂರದ ಕುಟುಂಬಸ್ಥರೆನಿಸಿಕೊಂಡವರ ತಲೆಮಾರುಗಳ ಪರಿಚಯ ಹಿಡಿದು  ನಮಗೆ ಅದೆಷ್ಟು ಸಮೀಪದ ಬಂಧುಗಳಾಗಿದ್ದರು  ಎನ್ನುವುದನ್ನು ನಿಖರವಾಗಿ  ತಿಳಿಸಬಲ್ಲರು.

ಇಂದು ನಲವತ್ತು ಕಳೆದಿರುವವರು  ಮೊಬೈಲ್ ಇಲ್ಲದೇ ಇದ್ದ ಕಾಲವನ್ನು ಮನೋಹರವಾಗಿ ದಾಟಿ ಬಂದವರೇ ಆಗಿದ್ದರು. ಈ ಮೊಬೈಲ್ ಇಂದು  ಹಿರಿ ಕಿರಿಯರೆನ್ನದೆ ಎಲ್ಲರ ಕೈ, ಕಣ್ಣ್ಮನಸ್ಸುಗಳನ್ನು ಸಂಪೂರ್ಣವಾಗಿ ವಶೀಕರಿಸಿ ಪರಸ್ಪರರಲ್ಲಿ ಅಂತರ ಮೂಡಿಸಿದೆ. ಇಂದಿಗಿಂತ ಅಂದಿನ ತಮ್ಮ ಕೌಮಾರ್ಯವು ಅತೀ ಸುಂದರವಾಗಿ ಇತ್ತೆಂದು ಇಂದಿಗೂ  ಹಲವು ಸಂದರ್ಭಗಳಲ್ಲಿ ಹೇಳುತ್ತಾರೆ. ಕಪ್ಪು ಬಿಳುಪು ದೂರದರ್ಶನದ ಮನೋರಂಜನೆಯನ್ನು ಸವಿಯುವವರನ್ನು ಹತ್ತಿರದಿಂದ ಕಂಡು, ಆಗ ತಾನೆ ನವೀಕರಣಗೊಂಡ ಬಣ್ಣದ ಚಿತ್ರಗಳುಳ್ಳ ಟಿವಿ ವೀಕ್ಷಣೆಯನ್ನು  ಹೊಸತನದೊಂದಿಗೆ ಖುಷಿಯಿಂದ ಅನುಭವಿಸಿದ ಆ ಅನುಭವಗಳ ಖುಷಿ, ಒಂದೇ ಚಾನೆಲ್ ಇದ್ದಾಗ ಅದು ಪ್ರಸಾರ ಮಾಡುತ್ತಿದ್ದುದರಲ್ಲೇ ಆನಂದಿಸುತ್ತಿದ್ದ ನೆನಪುಗಳು, ವಿಸಿಆರ್ ಗೆ ಅದರದ್ದೇ ಆದಂತಹ ಕ್ಯಾಸೆಟ್ ಹಾಕಿಸಿ ಸಿನೇಮಾ ನೋಡುತ್ತಿರುವಾಗ ನೆರೆಹೊರೆಯ ಹುಡುಗರು, ಮಹಿಳೆಯರು ತಮ್ಮ ಕೆಲಸಗಳನ್ನು ಲಗುಬಗೆಯಿಂದ ಮುಗಿಸಿ ಬಂದು ಶಿಸ್ತಿನಿಂದ ಟಿವಿ ವೀಕ್ಷಿಸುತ್ತಿದ್ದ ಚಿತ್ರಣಗಳು ತಮ್ಮ ಚಿತ್ತಪಟಲದಲ್ಲಿ ಇನ್ನೂ ಅಚ್ಚಾಗಿ  ಉಳಿದಿದೆಯೆಂದು ಮೆಲುಕು ಹಾಕುತ್ತಾರೆ. ಅಂದು ಜನರಲ್ಲಿ ಇಷ್ಟೊಂದು ಒತ್ತಡದ ಬದುಕು ಇರಲಿಲ್ಲವೆಂದು ಅವರು ಮಾರ್ಮಿಕವಾಗಿ ಹೇಳುತ್ತಾರೆ. ಬದುಕು ಹಾಗೂ ಕಾಲಗಳಲ್ಲಿ ಬದಲಾವಣೆಗೊಳ್ಳುವ ರೀತಿಗಳನ್ನು ಇಂಚು ಇಂಚಾಗಿ ಕಂಡವರಿವರು. ಯಾಕೆಂದರೆ ಈಗಿನ್ನು ಮೂವತ್ತರ ಅಸುಪಾಸಿನಲ್ಲಿ ಇರುವವರು ಇಷ್ಟೊಂದು  ಕಾಣದವರಾದರೆ, ಅರವತ್ತು ದಾಟಿದವರು ಅಂದು ಎಲ್ಲೊ ಒಂದು ಕಡೆ  ಅವರದ್ದೇ ಬದುಕಿನ ಪರದಾಟದ ಓಟದಲ್ಲಿದ್ದವರು. ತಮ್ಮ ಇತಿಹಾಸದ ಬಗೆಗೆ ಹೇಳಿಕೊಳ್ಳಲು ಇಂದಿನ ನಲವತ್ತರ ಯುವ ಪೀಳಿಗೆಗಳಲ್ಲಿ ಇರಿಸಿಕೊಂಡ ಗೆಳೆತನ, ಸಲಿಗೆ ಅರವತ್ತರವರಿಗೆ ಅಸಾಧ್ಯವಾಗಬಹುದೆಂದರೆ ತಪ್ಪಾಗದು.

ಸಾರಾ ಅಲಿ ಪರ್ಲಡ್ಕ
ಬರಹಗಾರ್ತಿ

🔶 ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/GBc6sg7E2FQLuXblEdBxSi

ಇದನ್ನೂ ನೂಡಿ: ಫಲ ಜ್ಯೋತಿಷ್ಯ ಎಂದರೇನು? ಅದು ಎಲ್ಲಿಂದ ಹುಟ್ಟಿಕೊಂಡಿತು. ಜ್ಯೋತಿಷ್ಯವನ್ನು ವಿಜೃಂಭಿಸುತ್ತಿರುವ ಹಿಂದಿರುವ ಹುನ್ನಾರಗಳಿಗೆ ಕಾರಣಗಳೇನು ಎಂಬುದನ್ನು ವಿವರಿಸಿದ್ದಾರೆ ಪ್ರಖ್ಯಾತ ಗಣಿತಶಾಸ್ತ್ರಜ್ಞ ಪ್ರೊ.ಎಸ್.ಬಾಲಚಂದ್ರರಾವ್ ವಿವರಿಸಿದ್ದಾರೆ‌.

https://fb.watch/fOCHi3vzyS/

Related Articles

ಇತ್ತೀಚಿನ ಸುದ್ದಿಗಳು