ಗ್ರಾಮ ಪಂಚಾಯಿತಿ ಚುನಾವಣೆಗೆ ಮತ್ತೆ ವಿಳಂಬ: ಸದಸ್ಯರ ಮರುನಿಗದಿ ಕಾರ್ಯಕ್ಕೆ ಸರ್ಕಾರದಿಂದ ಹೈಕೋರ್ಟ್‌ಗೆ ಅವಧಿ ಬೇಡಿಕೆ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸದಸ್ಯರ ಸಂಖ್ಯೆಯನ್ನು ಜನಸಂಖ್ಯೆ ಆಧಾರದ ಮೇಲೆ ಮರುನಿಗದಿಪಡಿಸಲು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ನಾಲ್ಕು ವಾರಗಳ ಕಾಲಾವಕಾಶ ಕೋರಿದೆ.

ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ವಿಭಾಗೀಯ ಪೀಠದ ಮುಂದೆ ವಿಚಾರಣೆ ನಡೆಯಿತು. ಈ ವೇಳೆ, ಅವಧಿ ಮುಗಿದ ಸಾವಿರಾರು ಗ್ರಾಮ ಪಂಚಾಯಿತಿಗಳು ಮತ್ತು ನೂರಾರು ನಗರ ಸ್ಥಳೀಯ ಸಂಸ್ಥೆಗಳಿಗೆ ತಕ್ಷಣ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಬೇಕೆಂದು ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನೂ ಪೀಠ ಪರಿಗಣಿಸಿತು.

ಸರ್ಕಾರದ ಪರ ವಾದಿಸಿದ ವಕೀಲರು, ರಾಜ್ಯದಾದ್ಯಂತ 5,950 ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು 96 ಸಾವಿರಕ್ಕೂ ಅಧಿಕ ಸದಸ್ಯರಿದ್ದು, ಹೊಸ ಜನಸಂಖ್ಯಾ ಅಂಶಗಳನ್ನು ಪರಿಗಣಿಸಿ ಸದಸ್ಯರ ಸಂಖ್ಯೆಯನ್ನು ಮರುನಿಗದಿಪಡಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಈ ಕಾರ್ಯ ಪೂರ್ಣಗೊಳ್ಳಲು ಕನಿಷ್ಠ ನಾಲ್ಕು ವಾರಗಳ ಅವಧಿ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.

ಇದೇ ವೇಳೆ, ಸದಸ್ಯರ ಮರುನಿಗದಿ ಬಳಿಕ ಮೀಸಲಾತಿ ಹಂಚಿಕೆ ಪ್ರಕ್ರಿಯೆ ಕೈಗೊಳ್ಳಬೇಕಿದ್ದು, ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸಲು ಸುಮಾರು ಮೂರು ತಿಂಗಳು ಬೇಕಾಗಬಹುದು ಎಂದು ಸರ್ಕಾರ ಮಾಹಿತಿ ನೀಡಿತು.

ಜಿಲ್ಲಾಧಿಕಾರಿಗಳಿಂದ ಮಾಹಿತಿಯನ್ನು ಸಂಗ್ರಹಿಸುವುದು, ಕ್ಷೇತ್ರ ಮರುವಿಂಗಡಣಾ ಆಯೋಗದ ಪರಿಶೀಲನೆ ಹಾಗೂ ಸರ್ಕಾರದ ಅಂತಿಮ ನಿರ್ಧಾರ ಸೇರಿದಂತೆ ಹಂತ ಹಂತವಾಗಿ ಪ್ರಕ್ರಿಯೆ ಸಾಗಬೇಕಿರುವುದರಿಂದ ಕಾಲಾವಕಾಶ ಅಗತ್ಯವಾಗಿದೆ ಎಂದು ಸ್ಪಷ್ಟಪಡಿಸಲಾಯಿತು.

Related Articles

ಇತ್ತೀಚಿನ ಸುದ್ದಿಗಳು