ದೇಶದಲ್ಲಿ ಹೆಚ್ಚುತ್ತಿದೆ ಕಸ್ಟಡಿ ಸಾವುಗಳ ಸರಣಿ: ಕೇವಲ 74 ದಿನಗಳಲ್ಲಿ 170 ಮಂದಿ ಸಾವು

ದೆಹಲಿ: ಭಾರತದಲ್ಲಿ ಕಸ್ಟಡಿ ಸಾವುಗಳ ಸಂಖ್ಯೆ ಕಳವಳಕಾರಿ ರೀತಿಯಲ್ಲಿ ಏರಿಕೆಯಾಗುತ್ತಿದ್ದು, ಈ ವರ್ಷದ ಜನವರಿ 1ರಿಂದ ಮಾರ್ಚ್ 15ರವರೆಗಿನ ಕೇವಲ 74ದಿನಗಳ ಅವಧಿಯಲ್ಲಿ ದೇಶಾದ್ಯಂತ ಒಟ್ಟು ೧೭೦ ಕಸ್ಟಡಿ ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ನೀಡಿದ ಅಂಕಿಅಂಶಗಳ ಆಧಾರದ ಮೇಲೆ ಸಚಿವಾಲಯವು ಈ ವಿವರಗಳನ್ನು ಬಹಿರಂಗಪಡಿಸಿದೆ.

ಕಳೆದ ಐದು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ, ಕಸ್ಟಡಿ ಸಾವುಗಳ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಕಳೆದ 2024-25ನೇ ಸಾಲಿನಲ್ಲಿ 140ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ ಕೇವಲ ಎರಡೂವರೆ ತಿಂಗಳಲ್ಲೇ ಆ ಸಂಖ್ಯೆ 170ಕ್ಕೆ ತಲುಪಿರುವುದು ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರತೆಯನ್ನು ಎತ್ತಿ ತೋರಿಸುತ್ತಿದೆ. 2021ರಿಂದ 2026ರವರೆಗಿನ ರಾಜ್ಯವಾರು ದತ್ತಾಂಶಗಳು ಪೋಲೀಸ್ ಮತ್ತು ನ್ಯಾಯಾಂಗ ಬಂಧನದಲ್ಲಿರುವವರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿವೆ.

ರಾಜ್ಯವಾರು ಅಂಕಿಅಂಶಗಳ ಪ್ರಕಾರ, ಈ ವರ್ಷ ಬಿಹಾರದಲ್ಲಿ ಅತಿ ಹೆಚ್ಚು ಅಂದರೆ 19ಕಸ್ಟಡಿ ಸಾವುಗಳು ಸಂಭವಿಸಿವೆ. ರಾಜಸ್ಥಾನದಲ್ಲಿ 18 ಮತ್ತು ಉತ್ತರ ಪ್ರದೇಶದಲ್ಲಿ 15 ಪ್ರಕರಣಗಳು ವರದಿಯಾಗಿವೆ. ಪಂಜಾಬ್, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ತಲಾ 14 ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ 4 ಸಾವುಗಳು ಸಂಭವಿಸಿದ್ದರೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಯಾವುದೇ ಕಸ್ಟಡಿ ಸಾವುಗಳು ವರದಿಯಾಗಿಲ್ಲ ಎಂಬುದು ಗಮನಾರ್ಹ.

ದಕ್ಷಿಣ ಭಾರತದ ರಾಜ್ಯಗಳ ಪರಿಸ್ಥಿತಿಯನ್ನು ಗಮನಿಸಿದರೆ, ತಮಿಳುನಾಡಿನಲ್ಲಿ 7, ತೆಲಂಗಾಣದಲ್ಲಿ 5 ಹಾಗೂ ಕರ್ನಾಟಕ ಮತ್ತು ಕೇರಳದಲ್ಲಿ ತಲಾ 3 ಕಸ್ಟಡಿ ಸಾವುಗಳು ದಾಖಲಾಗಿವೆ. ಒಡಿಶಾದಲ್ಲಿ 9 ಮತ್ತು ಪಶ್ಚಿಮ ಬಂಗಾಳದಲ್ಲಿ 7 ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ ಮಿಜೋರಾಂ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.

ಈ ಹಿಂದಿನ ವರ್ಷಗಳ ಅಂಕಿಅಂಶಗಳನ್ನು ಗಮನಿಸಿದಾಗ, 2021-22ರಲ್ಲಿ 176, 2022-23ರಲ್ಲಿ 163 ಮತ್ತು 2023-24ರಲ್ಲಿ 157 ಕಸ್ಟಡಿ ಸಾವು ಪ್ರಕರಣಗಳು ದಾಖಲಾಗಿದ್ದವು. ಆದರೆ ಪ್ರಸಕ್ತ ಸಾಲಿನ ಆರಂಭಿಕ ದಿನಗಳಲ್ಲೇ ಈ ಪ್ರಮಾಣವು ಹಿಂದಿನ ವರ್ಷಗಳ ಒಟ್ಟು ಮೊತ್ತವನ್ನು ಮೀರಿಸುವ ಲಕ್ಷಣಗಳನ್ನು ತೋರಿಸುತ್ತಿದೆ. ಮಾನವ ಹಕ್ಕುಗಳ ಕಾರ್ಯಕರ್ತರು ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿದ್ದು, ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯವು ಈ ದತ್ತಾಂಶವನ್ನು ಸಂಸತ್ತಿನಲ್ಲಿ ಮಂಡಿಸುವ ಮೂಲಕ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆಯ ಸಂದೇಶ ನೀಡಿದೆ. ಬಂಧಿತರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಕಸ್ಟಡಿಯಲ್ಲಿ ನಡೆಯುವ ದೌರ್ಜನ್ಯಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಮಾನವ ಹಕ್ಕುಗಳ ಆಯೋಗವು ಈ ಹಿಂದೆಯೇ ಶಿಫಾರಸು ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು