ದೇಶದಲ್ಲಿ ನಕ್ಸಲಿಸಂ ಬಹುತೇಕ ಅಂತ್ಯಗೊಂಡಿದೆ: ಅಮಿತ್ ಶಾ

ದೆಹಲಿ: ಭಾರತದಲ್ಲಿ ನಕ್ಸಲಿಸಂ ತನ್ನ ಕೊನೆಯುಸಿರು ಎಳೆಯುತ್ತಿದೆ ಮತ್ತು ಮಾವೋವಾದಿ ಹಿಂಸಾಚಾರದ ಕೇಂದ್ರಬಿಂದುವಾಗಿದ್ದ ಛತ್ತೀಸ್‌ಗಢದ ಬಸ್ತಾರ್‌ನಿಂದ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ಕಿತ್ತೊಗೆಯಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಘೋಷಿಸಿದ್ದಾರೆ.

ದೇಶದಿಂದ ನಕ್ಸಲಿಸಂ ನಿರ್ಮೂಲನೆ ಮಾಡಲು ಮೋದಿ ಸರ್ಕಾರ ವಿಧಿಸಿದ್ದ ಮಾರ್ಚ್ 31ರ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಲೋಕಸಭೆಯಲ್ಲಿ 90 ನಿಮಿಷಗಳ ಕಾಲ ಅವರು ‘ನಕ್ಸಲ್ ಮುಕ್ತ ಭಾರತ’ದ ಕುರಿತು ಮಾತನಾಡಿದರು. ಅವರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ:

ಬಸ್ತಾರ್ ಈಗ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ಈ ಯಶಸ್ಸಿನ ಶ್ರೇಯಸ್ಸು ಭದ್ರತಾ ಪಡೆಗಳು, ರಾಜ್ಯ ಪೊಲೀಸರು ಮತ್ತು ಸ್ಥಳೀಯ ಬುಡಕಟ್ಟು ಸಮುದಾಯಕ್ಕೆ ಸಲ್ಲುತ್ತದೆ. “ದೇಶದಲ್ಲಿ ನಕ್ಸಲಿಸಂ ಬಹುತೇಕ ಅಳಿಸಿಹೋಗಿದೆ. ಈ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಂಡ ನಂತರ ನಾವು ದೇಶಕ್ಕೆ ತಿಳಿಸುತ್ತೇವೆ. ಆದರೆ ಇಂದು ಭಾರತವು ನಕ್ಸಲ್ ಮುಕ್ತವಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ,” ಎಂದು ಅವರು ತಿಳಿಸಿದರು.

ಸ್ವಾತಂತ್ರ್ಯದ ನಂತರ ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷವು ಬುಡಕಟ್ಟು ಜನರ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ ಎಂದು ಅಮಿತ್ ಶಾ ಆರೋಪಿಸಿದರು. “60 ವರ್ಷಗಳ ಕಾಲ ಕಾಂಗ್ರೆಸ್ ಬುಡಕಟ್ಟು ಜನರಿಗೆ ಮನೆ, ಶಾಲೆ ಅಥವಾ ಮೊಬೈಲ್ ಟವರ್‌ಗಳನ್ನು ನೀಡಲಿಲ್ಲ. ಆದರೆ ಈಗ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ನಕ್ಸಲೀಯರು ಬುಡಕಟ್ಟು ಜನರನ್ನು ದಾರಿ ತಪ್ಪಿಸಿ ಅಂಧಕಾರದಲ್ಲಿಟ್ಟಿದ್ದರು. ಜನರು ಸುಶಿಕ್ಷಿತರಾದರೆ ತಮ್ಮ ಸಿದ್ಧಾಂತಕ್ಕೆ ಬೆಂಬಲ ಸಿಗುವುದಿಲ್ಲ ಎಂಬ ಭಯದಿಂದ ಅವರನ್ನು ಶಾಲೆ, ಬ್ಯಾಂಕ್ ಮತ್ತು ಆರೋಗ್ಯ ಕೇಂದ್ರಗಳಿಂದ ದೂರ ಇಡಲಾಗಿತ್ತು,” ಎಂದು ಅವರು ಕಿಡಿಕಾರಿದರು.

ನಕ್ಸಲೈಟ್‌ಗಳನ್ನು ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಅಥವಾ ಬಿರ್ಸಾ ಮುಂಡಾ ಅವರೊಂದಿಗೆ ಹೋಲಿಸುವುದನ್ನು ಅಮಿತ್ ಶಾ ತೀವ್ರವಾಗಿ ಖಂಡಿಸಿದರು. “ಭಗತ್ ಸಿಂಗ್ ಮತ್ತು ಬಿರ್ಸಾ ಮುಂಡಾ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿದರು. ಆದರೆ ನಕ್ಸಲೈಟ್‌ಗಳು ಸಂವಿಧಾನವನ್ನು ಉಲ್ಲಂಘಿಸಿ ಆಯುಧಗಳನ್ನು ಹಿಡಿದು ಅಮಾಯಕ ಜನರನ್ನು ಕೊಲ್ಲುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ,” ಎಂದು ಅವರು ಹೇಳಿದರು.

ಸರ್ಕಾರದ ಕರೆಯ ಮೇರೆಗೆ ಈವರೆಗೆ 4,800 ನಕ್ಸಲೀಯರು ಶರಣಾಗಿದ್ದಾರೆ ಮತ್ತು 2,000ಕ್ಕೂ ಹೆಚ್ಚು ಮಂದಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು. ನಕ್ಸಲ್ ಮುಕ್ತ ಭಾರತಕ್ಕಾಗಿ ಪ್ರಾಣತ್ಯಾಗ ಮಾಡಿದ ಸಾವಿರಾರು ಯೋಧರಿಗೆ ಅವರು ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ ವಿರೋಧ ಪಕ್ಷಗಳ ವಿರುದ್ಧ ಅಮಿತ್ ಶಾ ಹರಿಹಾಯ್ದರು. 2011ರ ‘ಸಲ್ವಾ ಜುಡುಂ’ ಪ್ರಕರಣದಲ್ಲಿ ಸರ್ಕಾರಿ ಹೋರಾಟವನ್ನು ಕಾನೂನುಬಾಹಿರ ಎಂದು ಘೋಷಿಸಿದ ಸುದರ್ಶನ್ ರೆಡ್ಡಿ ಅವರ ತೀರ್ಪನ್ನು ಖಂಡಿಸಿದ ಅವರು, ಅಂತಹವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವುದು ದೇಶದ ಕಾನೂನು ಸುವ್ಯವಸ್ಥೆಗೆ ಮಾರಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು