ಎಫ್‌ಸಿಆರ್‌ಎ ತಿದ್ದುಪಡಿ ತಂದ ಫಜೀತಿ: ಪ್ರತಿಪಕ್ಷಗಳ ತೀವ್ರ ವಿರೋಧಕ್ಕೆ ಮಣಿದ ಕೇಂದ್ರ ಸರ್ಕಾರ

ದೆಹಲಿ: ಎನ್‌ಜಿಒಗಳು ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ವಿದೇಶದಿಂದ ಬರುವ ದೇಣಿಗೆಯನ್ನು ನಿಯಂತ್ರಿಸುವ ವಿವಾದಾತ್ಮಕ ‘ಎಫ್‌ಸಿಆರ್‌ಎ (FCRA) ತಿದ್ದುಪಡಿ ಮಸೂದೆ-2026’ ಮಂಡನೆಯಿಂದ ಕೇಂದ್ರ ಸರ್ಕಾರ ಸದ್ಯಕ್ಕೆ ಹಿಂದೆ ಸರಿದಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ ಮತ್ತು ಕೇರಳ ವಿಧಾನಸಭಾ ಚುನಾವಣೆಯ ರಾಜಕೀಯ ಲೆಕ್ಕಾಚಾರದಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಸೂದೆಯ ಪ್ರಕಾರ, ವಿದೇಶಿ ದೇಣಿಗೆ ಪಡೆಯುವ ಸಂಸ್ಥೆಗಳ ಪರವಾನಗಿ ರದ್ದಾದರೆ, ಆ ಹಣದಿಂದ ನಿರ್ಮಿಸಲಾದ ಶಾಲೆ, ಆಸ್ಪತ್ರೆ ಮತ್ತು ಆಸ್ತಿಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆಯಲು ಅವಕಾಶವಿತ್ತು. ಇದನ್ನು “ಕರಾಳ ಶಾಸನ” ಎಂದು ಕರೆದಿದ್ದ ಪ್ರತಿಪಕ್ಷಗಳು, ಇದು ಅಲ್ಪಸಂಖ್ಯಾತ ಸಂಸ್ಥೆಗಳನ್ನು ಹತ್ತಿಕ್ಕುವ ಸಂಚು ಎಂದು ಆರೋಪಿಸಿ ಪಾರ್ಲಿಮೆಂಟ್ ಆವರಣದಲ್ಲಿ ಧರಣಿ ನಡೆಸಿದ್ದವು. ಬುಧವಾರ ಮಸೂದೆಯ ಮೇಲೆ ಚರ್ಚೆ ನಡೆಯಬೇಕಿತ್ತಾದರೂ, ಮಂಗಳವಾರವೇ ಸರ್ಕಾರ ಇದನ್ನು ಹಿಂಪಡೆಯುವುದಾಗಿ ಘೋಷಿಸಿತು.

ವಿಶೇಷವಾಗಿ ಕೇರಳದಲ್ಲಿ ವಿದೇಶಿ ದೇಣಿಗೆಯಿಂದ ನಡೆಯುತ್ತಿರುವ ಹಲವಾರು ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಈ ಮಸೂದೆಯಿಂದ ಆತಂಕಕ್ಕೀಡಾಗಿದ್ದವು. ಕ್ಯಾಥೋಲಿಕ್ ಬಿಷಪ್‌ಗಳ ಒಕ್ಕೂಟ (CBCI) ಈ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿತ್ತು. ಈ ಮಸೂದೆಯನ್ನು ಅಂಗೀಕರಿಸಿದರೆ ಕೇರಳ ಚುನಾವಣೆಯಲ್ಲಿ ಕ್ರೈಸ್ತ ಮತದಾರರು ಬಿಜೆಪಿಯಿಂದ ದೂರವಾಗಬಹುದು ಎಂಬ ಭೀತಿಯಿಂದ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಶರಣಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್ ಮತ್ತು ಎಡಪಕ್ಷಗಳು ಚರ್ಚ್ ನಾಯಕರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದವು. ಸರ್ಕಾರದ ಈ ದಿಢೀರ್ ನಿರ್ಧಾರವು ಪ್ರತಿಪಕ್ಷಗಳ ಒಗ್ಗಟ್ಟಿಗೆ ಸಂದ ಜಯ ಎಂದು ಬಣ್ಣಿಸಲಾಗುತ್ತಿದ್ದು, ಚುನಾವಣೆ ಮುಗಿಯುವವರೆಗೆ ಈ ವಿವಾದಾತ್ಮಕ ಬಿಲ್ ಅನ್ನು ಅಟ್ಟಕ್ಕೇರಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು