ಹಾಸ್ಟೆಲ್‌ನಲ್ಲಿ ಕೊಲೆ ಆರೋಪಿಗೆ ಆಶ್ರಯ – ಬೆಚ್ಚಿಬಿದ್ದ ಅಧಿಕಾರಿಗಳು

ಹಾಸನ: ವರುಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಸಂಗತಿಗಳು ಒಂದರ ಹಿಂದೆ ಒಂದಾಗಿ ಬೆಳಕಿಗೆ ಬರುತ್ತಿದ್ದು, ಕೊಲೆಗೈದ ಆರೋಪಿಗಳಲ್ಲಿ ಒಬ್ಬನು ಸರ್ಕಾರಿ ಎಸ್‌ಸಿ/ಎಸ್‌ಟಿ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ.

ಮಾ.12ರಂದು ನಡೆದ ಕ್ರೂರ ಹತ್ಯೆಯಲ್ಲಿ ಭಾಗಿಯಾಗಿದ್ದ ಪೃಥ್ವಿಕ್ ಎಂಬ ಆರೋಪಿ, ಕೃತ್ಯ ಎಸಗಿದ ಬಳಿಕ ಹಾಸನ ನಗರದ ಸರ್ಕಾರಿ ಹಾಸ್ಟೆಲ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನು, ಕೊಲೆಗೈಯಲು ಬಳಸಿದ ಮಾರಕಾಸ್ತ್ರಗಳು ಹಾಗೂ ರಕ್ತ ಸಿಕ್ತ ಬಟ್ಟೆಗಳನ್ನು ಸಹ ಹಾಸ್ಟೆಲ್‌ನಲ್ಲೇ ಅಡಗಿಸಿಟ್ಟಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಹೊರಬಿದ್ದಿದೆ. ಪ್ರಕರಣದ ಹಿನ್ನೆಲೆ ನೋಡಿದರೆ, ಶಶಾಂಕ್ ಮತ್ತು ವರುಣ್ ನಡುವಿನ ಹಣಕಾಸಿನ ವಿವಾದವೇ ಈ ಹತ್ಯೆಗೆ ಮೂಲ ಕಾರಣ ಎಂದು ತಿಳಿದುಬಂದಿದೆ. ಮಾ.11ರಂದು ವರುಣ್ ಅನ್ನು ಅಪಹರಿಸಿ, ಮಾ.12ರಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹತ್ಯೆಗೈದು ಶವವನ್ನು ಸುಟ್ಟಿರುವುದು ಪ್ರಕರಣದ ಕ್ರೂರತೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಈ ಪ್ರಕರಣದಲ್ಲಿ ಸುಮಾರು 20 ವರ್ಷ ವಯಸ್ಸಿನ ಎಂಟು ಯುವಕರು ಭಾಗಿಯಾಗಿರುವುದು ತಿಳಿದುಬಂದಿದ್ದು, ಪೊಲೀಸರು ಹಾಸ್ಟೆಲ್ ಮೇಲೆ ದಾಳಿ ನಡೆಸಿ ಪ್ರಮುಖ ಸಾಕ್ಷ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಹಾಸ್ಟೆಲ್‌ಗಳನ್ನೇ ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿರುವ ಸಂಗತಿ ಬೆಳಕಿಗೆ ಬಂದಿರುವುದು ಸಮಾಜದಲ್ಲಿ ಆತಂಕ ಮೂಡಿಸಿದೆ. ಈ ಘಟನೆ ಹಿನ್ನೆಲೆಯಲ್ಲಿ ಸರ್ಕಾರಿ ವಸತಿನಿಲಯಗಳ ಭದ್ರತೆ, ಮೇಲ್ವಿಚಾರಣೆ ಹಾಗೂ ನಿಯಂತ್ರಣ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶಿಸ್ತು ಕಾಪಾಡಲು ಸಂಬಂಧಿಸಿದ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು