6ನೇ ತರಗತಿಯಿಂದ ತ್ರಿಭಾಷಾ ಸೂತ್ರ ಕಡ್ಡಾಯ: ಸಿಬಿಎಸ್‌ಇ ಹೊಸ ಪಠ್ಯಕ್ರಮ ಪ್ರಕಟ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ತನ್ನ ಹೊಸ ಪಠ್ಯಕ್ರಮದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, 2026-27ರ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯಿಂದಲೇ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (NCF) ಶಿಫಾರಸುಗಳ ಅನ್ವಯ, ವಿದ್ಯಾರ್ಥಿಗಳು ಕಲಿಯುವ ಈ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಮೂಲದ್ದಾಗಿರಬೇಕು ಎಂಬುದು ಮುಖ್ಯ ನಿಯಮವಾಗಿದೆ.

ಈ ಹೊಸ ವ್ಯವಸ್ಥೆಯಡಿ ಭಾಷಾ ಕಲಿಕೆಯನ್ನು R1, R2 ಮತ್ತು R3 ಎಂಬ ಹಂತಗಳಾಗಿ ವಿಂಗಡಿಸಲಾಗಿದೆ. ವಿದೇಶಿ ಶಾಲೆಗಳಿಂದ ಹಿಂದಿರುಗುವ ವಿದ್ಯಾರ್ಥಿಗಳಿಗೆ, ಅವರು ಈ ಹಿಂದೆ ಓದಿದ ಮೂರನೇ ಭಾಷೆಯು ಪ್ರಸ್ತುತ ಶಾಲೆಯಲ್ಲಿ ಲಭ್ಯವಿಲ್ಲದಿದ್ದರೆ ಮಾತ್ರ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ ನೀಡಲಾಗುತ್ತದೆ. ಆದರೆ ಇಂತಹ ವಿದ್ಯಾರ್ಥಿಗಳು ಮಂಡಳಿಯು ನಿಗದಿಪಡಿಸಿದ ಎಲ್ಲಾ ವಿಷಯಗಳನ್ನು ಕಡ್ಡಾಯವಾಗಿ ಅಭ್ಯಸಿಸಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪಠ್ಯಕ್ರಮದಲ್ಲಿನ ಮತ್ತೊಂದು ಪ್ರಮುಖ ಬದಲಾವಣೆಯೆಂದರೆ, 9ನೇ ತರಗತಿಯ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ‘ಎರಡು ಹಂತದ’ (Two Levels) ಕಲಿಕಾ ವಿಧಾನವನ್ನು ಜಾರಿಗೆ ತರುತ್ತಿರುವುದು. ಇದು ವಿದ್ಯಾರ್ಥಿಗಳ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಪರೀಕ್ಷಾ ಮಟ್ಟವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಿದೆ.

Related Articles

ಇತ್ತೀಚಿನ ಸುದ್ದಿಗಳು