ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಇಂದಿನಿಂದ ನಗದು ಪಾವತಿ ರದ್ದು: ಸಾರಿಗೆ ಸಚಿವಾಲಯ

ದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇಂದಿನಿಂದ (ಏಪ್ರಿಲ್ 10, ಶುಕ್ರವಾರ) ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

ಟೋಲ್ ಗೇಟ್‌ಗಳಲ್ಲಿನ ದೀರ್ಘ ಸರತಿ ಸಾಲನ್ನು ಕಡಿಮೆ ಮಾಡುವುದು ಮತ್ತು ಪ್ರಯಾಣಿಕರಿಗೆ ಹೆದ್ದಾರಿ ಪ್ರಯಾಣವನ್ನು ಸುಗಮಗೊಳಿಸುವ ಉದ್ದೇಶದಿಂದ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಗುರುವಾರ ಮಾಹಿತಿ ನೀಡಿದ ಸಚಿವಾಲಯದ ಅಧಿಕಾರಿಯೊಬ್ಬರು, ಇಂದಿನಿಂದ ಫಾಸ್ಟ್ಯಾಗ್ (FASTag) ಟೋಲ್ ಸಂಗ್ರಹದ ಪ್ರಾಥಮಿಕ ಮಾಧ್ಯಮವಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ವಾಹನವು ಚಾಲ್ತಿಯಲ್ಲಿರುವ ಅಥವಾ ಮಾನ್ಯವಾದ ಫಾಸ್ಟ್ಯಾಗ್ ಇಲ್ಲದೆ ಟೋಲ್ ಪ್ಲಾಜಾ ಪ್ರವೇಶಿಸಿದರೆ, ಬಳಕೆದಾರರು ಯುಪಿಐ (UPI) ಮೂಲಕ ಹಣ ಪಾವತಿಸಲು ಅವಕಾಶವಿದೆ. ಆದರೆ, ಅಂತಹ ಸಂದರ್ಭಗಳಲ್ಲಿ ಅನ್ವಯವಾಗುವ ಟೋಲ್ ಶುಲ್ಕದ 1.25 ಪಟ್ಟು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

“ವಾಹನ ಸವಾರರು ಮಾನ್ಯವಾದ ಫಾಸ್ಟ್ಯಾಗ್ ಇಲ್ಲದೆ ಟೋಲ್ ಪ್ಲಾಜಾ ಪ್ರವೇಶಿಸಿ, ಯುಪಿಐ ಮೂಲಕ ಶುಲ್ಕ ಪಾವತಿಸಲು ನಿರ್ಧರಿಸಿದರೆ, ಅವರು ನಿಗದಿತ ಶುಲ್ಕಕ್ಕಿಂತ 1.25 ಪಟ್ಟು ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ” ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ಯುಪಿಐ ಪಾವತಿಯನ್ನು ಕೇವಲ ಪರ್ಯಾಯ ಆಯ್ಕೆಯನ್ನಾಗಿ ನೀಡಲಾಗಿದೆಯೇ ಹೊರತು, ನಗದು ಪಾವತಿಗೆ ಇನ್ನು ಮುಂದೆ ಅವಕಾಶವಿರುವುದಿಲ್ಲ.

Related Articles

ಇತ್ತೀಚಿನ ಸುದ್ದಿಗಳು