ಬೆಂಗಳೂರಿನಲ್ಲಿ ಹರಿದಾಡುತ್ತಿರುವ ‘ಜಾಂಬಿ ಡ್ರಗ್’ ವಿಡಿಯೋ ನಕಲಿ: ವದಂತಿ ಹಬ್ಬಿಸದಂತೆ ಮನವಿ ಮಾಡಿದ ಆಯುಕ್ತರು

ಬೆಂಗಳೂರು: ಸೋನಾ ಹೆಸರಿನ ‘ಜಾಂಬಿ ಡ್ರಗ್’ ಪ್ರಭಾವದಿಂದ ವ್ಯಕ್ತಿಯೊಬ್ಬ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರನ್ನು ದಾರಿ ತಪ್ಪಿಸುವಂತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಗುರುವಾರ ತಿಳಿಸಿದ್ದಾರೆ.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಬಾಗಲೂರು ಪೊಲೀಸರು, ನಿಟ್ಟೆ ಮೀನಾಕ್ಷಿ ತಾಂತ್ರಿಕ ಸಂಸ್ಥೆಯ ಬಳಿ ಆ ವ್ಯಕ್ತಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದರು. ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಆತನ ದೇಹದಲ್ಲಿ ಯಾವುದೇ ಮಾದಕ ದ್ರವ್ಯ ಅಥವಾ ಸೈಕೋಟ್ರೋಪಿಕ್ ಪದಾರ್ಥಗಳ ಅಂಶ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ನಗರ ಪೊಲೀಸರು ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಈ ವ್ಯಕ್ತಿ ಕೀಲುನೋವಿನಿಂದ (Arthritis) ಬಳಲುತ್ತಿದ್ದು, ವೈದ್ಯರು ಸೂಚಿಸಿದ ನೋವು ನಿವಾರಕ ಮಾತ್ರೆಗಳ ಜೊತೆಗೆ ಮದ್ಯಪಾನ ಮಾಡಿದ್ದರಿಂದ ವಿಡಿಯೋದಲ್ಲಿ ಕಂಡುಬಂದಂತೆ ಅಸಹಜ ಸ್ಥಿತಿಯಲ್ಲಿದ್ದ ಎಂದು ತಿಳಿದುಬಂದಿದೆ. ಹೆಚ್ಚಿನ ವಿಚಾರಣೆಯ ವೇಳೆ, ಈತ ಕಳೆದ ಮೂರು ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದು, ಇಲ್ಲೇ ವಾಸವಿದ್ದ ಎಂಬ ವಿಷಯ ಬಯಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪರಿಶೀಲಿಸದ ಅಥವಾ ದಾರಿ ತಪ್ಪಿಸುವ ವಿಷಯಗಳನ್ನು ಹಂಚಿಕೊಳ್ಳಬೇಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇಂತಹ ಪೋಸ್ಟ್‌ಗಳು ಸಾರ್ವಜನಿಕರಲ್ಲಿ ವಿನಾಕಾರಣ ಭೀತಿ ಹುಟ್ಟಿಸುತ್ತವೆ ಎಂದು ಅವರು ಎಚ್ಚರಿಸಿದ್ದಾರೆ. ಅಲ್ಲದೆ, ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು