ಪಕ್ಷ ವಿರೋಧಿ ಚಟುವಟಿಕೆ ತಲೆದಂಡ – ಜಮೀರ್‌ ಸಚಿವ ಸ್ಥಾನಕ್ಕೂ ಕುತ್ತು?

ಬೆಂಗಳೂರು : ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ದವಾಗಿ ಕೆಲಸ ಮಾಡಿದ ಆರೋಪದ ಮೇಲೆ ಇಬ್ಬರು ನಾಯಕರ ತಲೆದಂಡವಾಗಿದೆ. ಜೊತೆಗೆ ಈಗ ಸಚಿವ ಜಮೀರ್‌ ಅಹ್ಮದ್‌ ( Zameer Ahmed)  ಅವರ ವಿರುದ್ದವೂ ಕಾಂಗ್ರೆಸ್‌ ಪಕ್ಷ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆಗಳು ದಟ್ಟವಾಗಿದೆ.

ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್‌ ಜಬ್ಬಾರ್‌ ಈಗಾಗಲೇ ರಾಜೀನಾಮೆ ನೀಡಿದ್ದರೆ, ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಲು ಎಂಎಲ್‌ಸಿ ನಜೀರ್‌ ಅಹ್ಮದ್‌ ಗೆ ಡೆಡ್‌ ಲೈನ್‌ ನೀಡಲಾಗಿದೆ. ಈಗ ಸಚಿವ ಜಮೀರ್‌ ಅಹ್ಮದ್‌ ಅವರ ವಿರುದ್ದ ಶಿಸ್ತುಕ್ರಮ ಮಾತ್ರ ಬಾಕಿ ಉಳಿದಂತಾಗಿದೆ.

ಶಿಸ್ತುಕ್ರಮದ ಕುರಿತು ಗೃಹಸಚಿವ ಜಿ. ಪರಮೇಶ್ವರ್‌ ಪ್ರತಿಕ್ರಿಯಿಸಿ, ಜಮೀರ್‌ ಅಹ್ಮದ್‌ ಅವರು ಅಬ್ದುಲ್ ಜಬ್ಬಾರ್ ಟಿಕೆಟ್ ಕೇಳಿದ್ದರು ಅವರಿಗೆ ಟಿಕೆಟ್ ಸಿಗಲಿಲ್ಲ. ಚುನಾವಣೆಯಲ್ಲಿ ಹೆಚ್ಚು ಭಾಗವಹಿಸಲಿಲ್ಲ ಅನ್ನೋದು ಅವರ ಮೇಲಿರುವ ಆಪಾದನೆಯಾಗಿದೆ. ಜಬ್ಬಾರ್‌ ಅವರು ಅಲ್ಪಸಂಖ್ಯಾತ ಘಟಕಕ್ಕೆ ರಾಜೀನಾಮೆಯನ್ನು ಕೊಟ್ಟಿದ್ದು, ರಾಜೀನಾಮೆ ಅಂಗೀಕಾರ ಕೂಡ ಆಗಿದೆ. ಶೀಘ್ರದಲ್ಲೇ ಹೊಸದಾಗಿ ಒಂದು ಸಮಿತಿಯನ್ನು ಮಾಡುತ್ತಾರೆ. ಈ ನಡುವೆ ಮೈನಾರಿಟಿ ನಾಯಕರ ನಡುವೆ ಮಾತುಕತೆಗಳು ಆಗ್ತಾ ಇದೆ. ಇದನ್ನು ನಾನು ಕೂಡ ಗಮನಿಸಿದ್ದೇನೆ. ಇದನ್ನು ಕೆಪಿಸಿಸಿ ಅಧ್ಯಕ್ಷರು ಸರಿ ಮಾಡುತ್ತಾರೆ ಎಂದಿದ್ದಾರೆ.

ಚುನಾವಣೆಗಳು ಬಂದಾಗ ಇಂಥಾ ಬೆಳವಣಿಗೆಗಳು ಸ್ವಾಭಾವಿಕ. ದಾವಣಗೆರೆ ಬೆಳವಣಿಗೆ ಹೊಸದೇನು ಅಲ್ಲ. ಯಾರಿಗೆ ಆಸಕ್ತಿ ಇರುವುದಿಲ್ಲವೋ ಅವರು ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ. ಜಮೀರ್ ಅವರನ್ನು ಕೇರಳ ಚುನಾವಣೆಯ ಪ್ರಚಾರಕ್ಕೆ ನೇಮಿಸಿದ್ದರು. ನಾನೇ ಅವರೊಂದಿಗೆ ಮಾತನಾಡಿದ್ದೆ. ದಾವಣಗೆರೆಗೆ ಬಂದು ಕ್ಯಾಂಪೇನ್ ಮಾಡಬೇಕು ಎಂದು ನಾನೇ ಹೇಳಿದ್ದೆ. ಕೆಸಿ ವೇಣುಗೋಪಾಲ್ ಅವರು ಸೂಚನೆ ಕೊಟ್ಟಿದ್ದಾರೆ ಇಲ್ಲಿದ್ದೇನೆ. ಅವರು ಕಳಿಸಿಕೊಟ್ಟರೆ ಬರ್ತೀನಿ ಎಂದು ಹೇಳಿದ್ದರು.  ಮುಖ್ಯಮಂತ್ರಿಗಳು ಮಾತನಾಡಿದ ಮೇಲೆ ಬರಬೇಕು ಎಂದಿದ್ದರು. ಹಾಗಾಗಿ ದಾವಣಗೆರೆ ಬಂದು ಅವರಿಗೆ ಗೊತ್ತಿರೋ ರೀತಿಯಲ್ಲಿ ಪ್ರಚಾರ ಮಾಡಿದರು ಎಂದು ಜಿ. ಪರಮೇಶ್ವರ್‌ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು