ತಾರಕಕ್ಕೇರಿದ ಹರಿಹರ ಮಠದ ವಿವಾದ: ವಚನಾನಂದ ಸ್ವಾಮಿ ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರೆಂಬ ಆರೋಪ

ಹರಿಹರದ ಪಂಚಮಸಾಲಿ ಮಠದಲ್ಲಿ ಉಂಟಾಗಿರುವ ಒಳಜಗಳ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪೀಠದ ಟ್ರಸ್ಟಿ ಚಂದ್ರಶೇಖರ ಪೂಜಾರ ಅವರು ವಚನಾನಂದ ಸ್ವಾಮೀಜಿ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.

ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೂಜಾರ, “ವಚನಾನಂದ ಸ್ವಾಮೀಜಿಗೆ ನೈತಿಕತೆ ಇದ್ದರೆ ತಕ್ಷಣವೇ ಮಠವನ್ನು ತೊರೆಯಬೇಕು. ಇಲ್ಲದಿದ್ದರೆ ಅವರನ್ನು ಮಠದಿಂದ ಹೇಗೆ ತೆರವುಗೊಳಿಸಬೇಕೆಂಬುದೂ ನಮಗೆ ತಿಳಿದಿದೆ” ಎಂದು ಎಚ್ಚರಿಕೆ ನೀಡಿದರು.

ಪಂಚಮಸಾಲಿ ಪೀಠಾಧ್ಯಕ್ಷರಾಗಿದ್ದ ವಚನಾನಂದ ಶ್ರೀಗಳನ್ನು ಈಗಾಗಲೇ ಪೀಠದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದ ಅವರು, “ಅವರ ಆಚಾರ-ವಿಚಾರ, ನಡೆ-ನುಡಿಗಳನ್ನು ತಿದ್ದಿಕೊಳ್ಳಲು ಹಲವಾರು ಬಾರಿ ಸೂಚಿಸಿದ್ದರೂ ಸ್ಪಂದನೆ ಸಿಗಲಿಲ್ಲ. ಈ ಹಿನ್ನೆಲೆ ಪೀಠದಿಂದ ದೂರ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ” ಎಂದರು.

ಮಠದಲ್ಲಿ ವಾಸಿಸುತ್ತಿದ್ದ ಮಕ್ಕಳ ಬಗ್ಗೆ ಮಾತನಾಡಿದ ಅವರು, “ಹಿಂದೆ ಸುಮಾರು 60 ಮಕ್ಕಳು ವಸತಿಯುತ ಶಿಕ್ಷಣ ಪಡೆಯುತ್ತಿದ್ದರು. ಇದೀಗ ಆ ಸಂಖ್ಯೆ ಕೇವಲ 6ಕ್ಕೆ ಇಳಿದಿದೆ. ಮಕ್ಕಳ ಮೇಲೆ ಅವಾಚ್ಯವಾಗಿ ವರ್ತನೆ ನಡೆಸಲಾಗಿದೆ ಎಂಬ ಆರೋಪಗಳಿಂದ ಪೋಷಕರು ಅಸಮಾಧಾನಗೊಂಡಿದ್ದು, ಕೆಲವರು ಮಠ ತೊರೆದಿದ್ದಾರೆ” ಎಂದು ಹೇಳಿದರು.

ಅಪ್ರಾಪ್ತ ಮಕ್ಕಳ ವಿಷಯದಲ್ಲಿ ಗಂಭೀರ ಆರೋಪಗಳು ಕೇಳಿಬಂದಿರುವುದಾಗಿ ತಿಳಿಸಿದ ಪೂಜಾರ, “ಕೆಲ ಪೋಷಕರು ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಲು ಮುಂದಾಗಿದ್ದರು. ಆದರೆ ಮಠದ ಗೌರವ ಕಾಪಾಡುವ ಉದ್ದೇಶದಿಂದ ಅವರನ್ನು ತಡೆಯಲಾಯಿತು” ಎಂದು ಹೇಳಿದರು.

ಇನ್ನೊಂದೆಡೆ, ಟ್ರಸ್ಟ್ ವಿರುದ್ಧ ಸಮಾಜದ ಕೆಲವರನ್ನು ಪ್ರಚೋದಿಸಿ ಚಳವಳಿ ನಡೆಸಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು. “ಮಠದಲ್ಲಿ ಸಭೆ ನಡೆಸಿ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ವಿರುದ್ಧ ಮಾತನಾಡಿರುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟರು.

ಹಣಕಾಸು ಅಕ್ರಮದ ಆರೋಪಗಳನ್ನೂ ಪೂಜಾರ ತಳ್ಳಿಹಾಕಿ, “ನಾವು ಫೋರ್ಜರಿ ಸಹಿ ಮಾಡಿ ಹಣ ದುರುಪಯೋಗ ಮಾಡಿದ್ದೇವೆ ಎಂಬ ಆರೋಪ ಸುಳ್ಳು. ಅದನ್ನು ಸಾಬೀತುಪಡಿಸಲು ಸ್ವಾಮೀಜಿಗೆ ಒಂದು ವರ್ಷಾವಕಾಶ ನೀಡುತ್ತೇವೆ. ಸಾಬೀತು ಮಾಡಿದರೆ 10 ಪಟ್ಟು ಹಣ ಕಟ್ಟಲು ಸಿದ್ಧ” ಎಂದು ಸವಾಲು ಹಾಕಿದರು.

Related Articles

ಇತ್ತೀಚಿನ ಸುದ್ದಿಗಳು