ಜೈಭೀಮ್ ಹಬ್ಬಕ್ಕೆ ಹಾಸನ ಸಜ್ಜು ಭರ್ಜರಿ ಸಿದ್ಧತೆ – ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್ 

ಹಾಸನ: ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನೋತ್ಸವದ ಅಂಗವಾಗಿ ಏಪ್ರಿಲ್ 19ರಂದು ಭಾನುವಾರ ಮಧ್ಯಾಹ್ನ 1.00 ಗಂಟೆಗೆ ನಗರದ ಮಹಾವೀರ ಸರ್ಕಲ್‌ನಲ್ಲಿ ಜೈಭೀಮ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್ ಅವರು ತಿಳಿಸಿದರು.

ಈ ಅಂಗವಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣಾ ಕಾರ್ಯಕ್ರಮ, ಅರ್ಹ ವಿಕಲಚೇತನರಿಗೆ ವೀಲ್‌ಚೇರ್ ವಿತರಣೆ, ಸಮಾಜ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಹಮ್ಮಿಕೊಳ್ಳಲಾಗಿದೆ. ಒಟ್ಟು 10 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು. ವೀಲ್‌ಚೇರ್ ಅಗತ್ಯವಿರುವ ವಿಕಲಚೇತನರು ಮುಂಚಿತವಾಗಿ ಸಂಘಕ್ಕೆ ಅರ್ಜಿ ಸಲ್ಲಿಸಿದರೆ ಪರಿಗಣಿಸಲಾಗುವುದು ಎಂದು ತಿಳಿಸಿದರು.

ಜೈಭೀಮ್ ಬ್ರಿಗೇಡ್ ಕಳೆದ ಹಲವು ವರ್ಷಗಳಿಂದ ಶೋಷಿತರ, ದಮನಿತರ ಪರ ಹೋರಾಟ ನಡೆಸುತ್ತಿದ್ದು, ಅಂಬೇಡ್ಕರ್ ಜಯಂತಿಯ ಅಂಗವಾಗಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ ಎಂದು ತಿಳಿಸಿದರು. ಈ ವರ್ಷ ವೀಲ್‌ಚೇರ್ ವಿತರಣೆ ಹಾಗೂ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯಧನ ನೀಡುವ ಕಾರ್ಯಕ್ರಮ ಕೂಡ ಸೇರಿಸಲಾಗಿದೆ ಎಂದರು.ಸುಮಾರು 5000 ಮಂದಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ರಾಜೇಶ್, ಜಿಲ್ಲಾ ಕಾರ್ಯಾಧ್ಯಕ್ಷ ಚಂದ್ರಶೇಖರ್, ತಾಲ್ಲೂಕು ಅಧ್ಯಕ್ಷ ಶಂಕರ್, ಪ್ರಧಾನ ಕಾರ್ಯದರ್ಶಿ ಸ್ವಾಮಿ, ಉಪಾಧ್ಯಕ್ಷ ಸಚಿನ್, ಕಾರ್ಯದರ್ಶಿ ಪ್ರಸಾದ್, ದಲಿತ ಮುಖಂಡ ರಂಗಣ್ಣ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರದೀಪ್ ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು