ಜಾರ್ಖಂಡ್‌: ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಾವೋವಾದಿಗಳು ಬಲಿ

ರಾಂಚಿ: ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ನಾಲ್ವರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ಕೆರೆಡಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಟುಕಾ ಅರಣ್ಯ ಪ್ರದೇಶದಲ್ಲಿ ಈ ಗುಂಡಿನ ಚಕಮಕಿ ನಡೆದಿದೆ. ಹತರಾದ ಮಾವೋವಾದಿಗಳ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಬರ್ಕಗಾಂವ್ ಎಸ್‌ಡಿಪಿಒ ಪವನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಗೌಪ್ಯ ಮಾಹಿತಿಯ ಮೇರೆಗೆ ಪೊಲೀಸರು ಮತ್ತು ಕೋಬ್ರಾ ಬೆಟಾಲಿಯನ್ ಜವಾನರು ಜಂಟಿಯಾಗಿ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಮಾವೋವಾದಿಗಳು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಜವಾನರು ನಡೆಸಿದ ದಾಳಿಯಲ್ಲಿ ನಾಲ್ವರು ನಕ್ಸಲೀಯರು ಬಲಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಯಾವುದೇ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಮತ್ತು ಪಡೆಗಳು ಸುರಕ್ಷಿತವಾಗಿವೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಎನ್‌ಕೌಂಟರ್ ನಡೆದ ಸ್ಥಳದಿಂದ ಪೊಲೀಸರು ನಾಲ್ಕು ಮೃತದೇಹಗಳ ಜೊತೆಗೆ ಮಾವೋವಾದಿಗಳಿಗೆ ಸೇರಿದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಡಿನಲ್ಲಿ ಇನ್ನುಳಿದ ಮಾವೋವಾದಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಈ ಕಾರ್ಯಾಚರಣೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು