ಐದು ರಾಜ್ಯಗಳ ಎಕ್ಸಿಟ್ ಪೋಲ್: ಅಸ್ಸಾಂ, ಬಂಗಾಳದಲ್ಲಿ ಬಿಜೆಪಿಗೆ ಮುನ್ನಡೆ; ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಯುಡಿಎಫ್ ಅಲೆ

ಬುಧವಾರ ಬಿಡುಗಡೆಯಾದ ವಿವಿಧ ಎಕ್ಸಿಟ್ ಪೋಲ್‌ಗಳು ಅಸ್ಸಾಂನಲ್ಲಿ ಬಿಜೆಪಿಯ ಭರ್ಜರಿ ಜಯವನ್ನು ಮತ್ತು ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ವಿರುದ್ಧ ಬಿಜೆಪಿಗೆ ಸ್ಪಷ್ಟ ಮುನ್ನಡೆಯನ್ನು ಅಂದಾಜಿಸಿವೆ. ಅದೇ ಸಮಯದಲ್ಲಿ, ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಮರಳಿ ಅಧಿಕಾರಕ್ಕೆ ಬರಲಿದೆ ಮತ್ತು ಕೇರಳದಲ್ಲಿ 10 ವರ್ಷಗಳ ನಂತರ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪುನರಾಗಮನ ಮಾಡಲಿದೆ ಎಂದು ಭವಿಷ್ಯ ನುಡಿದಿವೆ.

ಪುದುಚೇರಿಯಲ್ಲಿ ಎಐಎನ್ಆರ್‌ಸಿ (AINRC) ನೇತೃತ್ವದ ಎನ್‌ಡಿಎ ಸರ್ಕಾರವು ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಮುನ್ಸೂಚನೆ ನೀಡಿವೆ.

ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ 88-100 ಸ್ಥಾನಗಳು ಹಾಗೂ ಕಾಂಗ್ರೆಸ್ ಮತ್ತು ಅದರ ಪಾಲುದಾರರಿಗೆ 24-36 ಸ್ಥಾನಗಳು ಲಭಿಸಲಿವೆ ಎಂದು ಆಕ್ಸಿಸ್ ಮೈ ಇಂಡಿಯಾ ಅಂದಾಜಿಸಿದೆ. ಪೀಪಲ್ಸ್ ಪಲ್ಸ್ ಸಮೀಕ್ಷೆಯ ಪ್ರಕಾರ ಎನ್‌ಡಿಎ 68-72 ಸ್ಥಾನಗಳನ್ನು ಪಡೆಯಲಿದ್ದರೆ, ಕಾಂಗ್ರೆಸ್ ಮೈತ್ರಿಕೂಟವು 22-26 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಮ್ಯಾಟ್ರಿಜ್ ಸಮೀಕ್ಷೆಯು ಎನ್‌ಡಿಎಗೆ 85-95 ಮತ್ತು ಕಾಂಗ್ರೆಸ್‌ಗೆ 25-32 ಸ್ಥಾನಗಳನ್ನು ನೀಡಿದೆ. ಅಸ್ಸಾಂ ವಿಧಾನಸಭೆಯ ಒಟ್ಟು 126 ಸ್ಥಾನಗಳಲ್ಲಿ ಬಹುಮತಕ್ಕೆ 64 ಸ್ಥಾನಗಳ ಅಗತ್ಯವಿದೆ.

ಕೇರಳದಲ್ಲಿ ಆಕ್ಸಿಸ್ ಮೈ ಇಂಡಿಯಾ ಯುಡಿಎಫ್‌ಗೆ 78-90 ಸ್ಥಾನಗಳು, ಎಲ್‌ಡಿಎಫ್‌ಗೆ 49-62 ಮತ್ತು ಎನ್‌ಡಿಎಗೆ 0-3 ಸ್ಥಾನಗಳನ್ನು ಅಂದಾಜಿಸಿದೆ. ಪೀಪಲ್ಸ್ ಪಲ್ಸ್ ಪ್ರಕಾರ ಯುಡಿಎಫ್ 75-85 ಸ್ಥಾನಗಳನ್ನು ಮತ್ತು ಎಲ್‌ಡಿಎಫ್ 55-65 ಸ್ಥಾನಗಳನ್ನು ಪಡೆಯಲಿವೆ. ಮ್ಯಾಟ್ರಿಜ್ ಸಮೀಕ್ಷೆಯು ಎಲ್‌ಡಿಎಫ್‌ಗೆ 60-65, ಯುಡಿಎಫ್‌ಗೆ 70-75 ಮತ್ತು ಎನ್‌ಡಿಎಗೆ 3-5 ಸ್ಥಾನಗಳನ್ನು ನೀಡಿದೆ. ಕೇರಳದ 140 ಸ್ಥಾನಗಳಲ್ಲಿ ಬಹುಮತಕ್ಕೆ 71 ಸ್ಥಾನಗಳ ಅಗತ್ಯವಿದೆ.

ಪಶ್ಚಿಮ ಬಂಗಾಳದಲ್ಲಿ ಪೀಪಲ್ಸ್ ಪಲ್ಸ್ ಸಮೀಕ್ಷೆಯು ಟಿಎಂಸಿ 177-187 ಸ್ಥಾನಗಳನ್ನು ಮತ್ತು ಬಿಜೆಪಿ 95-110 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ. ಆದರೆ ಮ್ಯಾಟ್ರಿಜ್ ಸಮೀಕ್ಷೆಯು ಬಿಜೆಪಿಗೆ ಮುನ್ನಡೆ ನೀಡಿ 146-161 ಸ್ಥಾನಗಳನ್ನು ಅಂದಾಜಿಸಿದ್ದು, ಟಿಎಂಸಿಗೆ 125-140 ಸ್ಥಾನಗಳನ್ನು ನೀಡಿದೆ. ಪಿ-ಮಾರ್ಕ್ ಬಿಜೆಪಿಗೆ 150-175 ಮತ್ತು ಟಿಎಂಸಿಗೆ 118-138 ಸ್ಥಾನಗಳನ್ನು ಅಂದಾಜಿಸಿದೆ. ಬಂಗಾಳದ 294 ಸ್ಥಾನಗಳಲ್ಲಿ ಬಹುಮತಕ್ಕೆ 148 ಸ್ಥಾನಗಳು ಬೇಕಿವೆ.

ತಮಿಳುನಾಡಿನಲ್ಲಿ ಪೀಪಲ್ಸ್ ಪಲ್ಸ್ ಸಮೀಕ್ಷೆಯು ಡಿಎಂಕೆ ಮೈತ್ರಿಕೂಟಕ್ಕೆ 125-145 ಸ್ಥಾನಗಳು, ಎಐಎಡಿಎಂಕೆ-ಬಿಜೆಗೆ 65-80 ಸ್ಥಾನಗಳು ಮತ್ತು ಟಿವಿಕೆಗೆ (TVK) 18-24 ಸ್ಥಾನಗಳನ್ನು ಅಂದಾಜಿಸಿದೆ. ಮ್ಯಾಟ್ರಿಜ್ ಪ್ರಕಾರ ಡಿಎಂಕೆ-ಕಾಂಗ್ರೆಸ್ 122-132, ಎನ್‌ಡಿಎ 87-100 ಮತ್ತು ಟಿವಿಕೆ 10-12 ಸ್ಥಾನಗಳನ್ನು ಪಡೆಯಲಿವೆ. ತಮಿಳುನಾಡಿನ 234 ಸ್ಥಾನಗಳಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ.

ಹೆಚ್ಚಿನ ‌ಎಕ್ಸಿಟ್ ಪೋಲ್‌ಗಳು ಈ ಹಿಂದೆ ಹಲವು ಬಾರಿ ತಪ್ಪು ಅಂದಾಜುಗಳನ್ನು ನೀಡಿರುವ ಇತಿಹಾಸವನ್ನೂ ಹೊಂದಿವೆ.

ಪುದುಚೇರಿಯಲ್ಲಿ ಆಕ್ಸಿಸ್ ಮೈ ಇಂಡಿಯಾ ಎನ್‌ಡಿಎಗೆ 16-20 ಸ್ಥಾನಗಳು ಮತ್ತು ಡಿಎಂಕೆ-ಕಾಂಗ್ರೆಸ್‌ಗೆ 6-8 ಸ್ಥಾನಗಳನ್ನು ನೀಡಿದೆ. ನಟ ವಿಜಯ್ ನೇತೃತ್ವದ ಟಿವಿಕೆ 2-4 ಸ್ಥಾನಗಳನ್ನು ಪಡೆಯಬಹುದು ಎಂದು ಅದು ಹೇಳಿದೆ. ಪುದುಚೇರಿಯಲ್ಲಿ ಒಟ್ಟು 30 ಚುನಾಯಿತ ಸ್ಥಾನಗಳಿವೆ.

ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ, ಕೇರಳ ಮತ್ತು ಅಸ್ಸಾಂ ಸೇರಿದಂತೆ ಐದೂ ವಿಧಾನಸಭಾ ಚುನಾವಣೆಗಳ ಮತ ಎಣಿಕೆಯು ಮೇ 4 ರಂದು ನಡೆಯಲಿದೆ.

ಅಸ್ಸಾಂ, ಕೇರಳ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದಿದ್ದರೆ, ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಏಪ್ರಿಲ್ 9 ರಂದು ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ಮತದಾನ ನಡೆದಿತ್ತು. ಅಸ್ಸಾಂ (85.38%) ಮತ್ತು ಪುದುಚೇರಿ (89.83%) ತಮ್ಮ ಇತಿಹಾಸದಲ್ಲೇ ಅತ್ಯಧಿಕ ಮತದಾನದ ದಾಖಲೆಯನ್ನು ಮಾಡಿವೆ.

ಏಪ್ರಿಲ್ 23 ರಂದು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮೊದಲ ಹಂತದ ಮತದಾನ ನಡೆದಿತ್ತು. ತಮಿಳುನಾಡು (84.69%) ಸ್ವಾತಂತ್ರ್ಯದ ನಂತರ ತನ್ನ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಮತದಾನದ ದಾಖಲೆ ಮಾಡಿದೆ. ಪಶ್ಚಿಮ ಬಂಗಾಳದ ಮೊದಲ ಹಂತದಲ್ಲಿ ದಾಖಲೆಯ 91.78% ರಷ್ಟು ಮತದಾನವಾಗಿದೆ.

ಬಿಜೆಪಿಯು ಅಸ್ಸಾಂ ಮತ್ತು ಪುದುಚೇರಿಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಈ ಎರಡೂ ಕಡೆಗಳಲ್ಲಿ ಅಧಿಕಾರವನ್ನು ಮರಳಿ ಪಡೆಯಲು ಹೋರಾಟ ನಡೆಸುತ್ತಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಲಿ ಎಲ್‌ಡಿಎಫ್ ಸರ್ಕಾರವನ್ನು ಕಿತ್ತೊಗೆಯಲು ಪ್ರಯತ್ನಿಸುತ್ತಿದ್ದರೆ, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟವು ಎಐಎಡಿಎಂಕೆ-ಬಿಜೆಪಿ ಮತ್ತು ನಟ ವಿಜಯ್ ಅವರ ಹೊಸ ಪಕ್ಷ ಟಿವಿಕೆಯಿಂದ ಎದುರಾಗಿರುವ ಸವಾಲನ್ನು ಮೀರಿ ಅಧಿಕಾರ ಉಳಿಸಿಕೊಳ್ಳಲು ಮುಂದಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಿಜೆಪಿಯ ಸವಾಲನ್ನು ಹಿಮ್ಮೆಟ್ಟಿಸಿ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿದೆ.

Related Articles

ಇತ್ತೀಚಿನ ಸುದ್ದಿಗಳು