ತಮಿಳುನಾಡು ರಾಜಕೀಯ ಹೈಡ್ರಾಮಾ: ವಿಜಯ್‌ಗೆ ಮಣೆ ಹಾಕಲು ರಾಜ್ಯಪಾಲರಿಗೆ ಹೆಚ್ಚಿದ ಒತ್ತಡ; ಡಿಎಂಕೆ ಮಹತ್ವದ ಸಭೆ

ಚೆನ್ನೈ/ದೆಹಲಿ: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಜಟಿಲವಾಗುತ್ತಿದ್ದು, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ‘ತಮಿಳಗ ವೆಟ್ರಿ ಕಳಗಂ’ (TVK) ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂಬ ಕೂಗು ಬಲವಾಗುತ್ತಿದೆ. ಈ ನಡುವೆ, ನಿರ್ಗಮಿತ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವು ತನ್ನ ಮುಂದಿನ ನಿರ್ಣಾಯಕ ನಡೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸ್ಟಾಲಿನ್ ಅವರಿಗೆ ಪೂರ್ಣ ಅಧಿಕಾರ ನೀಡಿದೆ.

ತಮಿಳುನಾಡು ಮತ್ತೆ ಚುನಾವಣೆಯನ್ನು ಎದುರಿಸಲು ಸಿದ್ಧವಿಲ್ಲದ ಕಾರಣ ಸ್ಥಿರ ಸರ್ಕಾರ ರಚನೆಗೆ ಸಹಕರಿಸುವುದಾಗಿ ಡಿಎಂಕೆ ತಿಳಿಸಿದೆ. ಆದರೆ, ದ್ರಾವಿಡ ಸಿದ್ಧಾಂತಕ್ಕೆ ಧಕ್ಕೆ ತರುವ ಕೋಮುವಾದಿ ಶಕ್ತಿಗಳಿಗೆ ರಾಜ್ಯದಲ್ಲಿ ಸ್ಥಳಾವಕಾಶ ನೀಡುವುದಿಲ್ಲ ಎಂದು ಪಕ್ಷವು ಸ್ಪಷ್ಟಪಡಿಸಿದೆ. ಎಐಎಡಿಎಂಕೆ ಬೆಂಬಲದೊಂದಿಗೆ ಪರ್ಯಾಯ ಸರ್ಕಾರ ರಚಿಸುವ ಸಾಧ್ಯತೆಗಳ ಬಗ್ಗೆಯೂ ಡಿಎಂಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ.

ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು “118 ಶಾಸಕರ ಬೆಂಬಲ ಪತ್ರ ತರುವಂತೆ” ವಿಜಯ್ ಅವರಿಗೆ ಸೂಚಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಸಂವಿಧಾನದ ಪ್ರಕಾರ ಬಹುಮತವನ್ನು ವಿಧಾನಸಭೆಯಲ್ಲೇ ಸಾಬೀತುಪಡಿಸಬೇಕೇ ಹೊರತು ರಾಜ್ಯಪಾಲರ ಮುಂದೆ ಅಲ್ಲ ಎಂದು ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ) ಮತ್ತು ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ಗಣ್ಯರು ರಾಜ್ಯಪಾಲರ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.

ಕಳೆದ ಎರಡು ದಶಕಗಳಿಂದ ಡಿಎಂಕೆ ಜೊತೆಗಿದ್ದ ಕಾಂಗ್ರೆಸ್ (5 ಸ್ಥಾನ), ಇದೀಗ ಮೈತ್ರಿ ಕಡಿದುಕೊಂಡು ವಿಜಯ್ ಅವರಿಗೆ ಬೆಂಬಲ ಘೋಷಿಸಿದೆ. ಕಾಂಗ್ರೆಸ್ ಬೆಂಬಲದೊಂದಿಗೆ ವಿಜಯ್ ಅವರ ಸಂಖ್ಯಾಬಲ 113ಕ್ಕೆ ಏರಿದ್ದು, ಅಧಿಕಾರಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆ ತಲುಪಲು ಇನ್ನೂ 6 ಶಾಸಕರ ಬೆಂಬಲದ ಅಗತ್ಯವಿದೆ. ವಿಜಯ್ ಅವರಿಗೆ ಅವಕಾಶ ನೀಡದ ರಾಜ್ಯಪಾಲರ ಕ್ರಮದ ವಿರುದ್ಧ ಇಂದು (ಮೇ 8) ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸಜ್ಜಾಗಿದೆ.

ಈ ನಡುವೆ, ಎಐಎಡಿಎಂಕೆಯ 28 ಶಾಸಕರು ರೆಸಾರ್ಟ್ ಸೇರಿದ್ದಾರೆ ಎಂಬ ವರದಿಯನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಕಚೇರಿ ತಳ್ಳಿಹಾಕಿದೆ. ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಮತ್ತು ಎಲ್ಲಾ ಶಾಸಕರು ಪಕ್ಷದ ನಾಯಕತ್ವದ ಜೊತೆಗಿದ್ದಾರೆ ಎಂದು ಎಐಎಡಿಎಂಕೆ ಸ್ಪಷ್ಟಪಡಿಸಿದೆ. ರಾಜಭವನವು ಅತಿ ದೊಡ್ಡ ಪಕ್ಷಕ್ಕೆ ಮೊದಲು ಅವಕಾಶ ನೀಡುವ ಸಾಂಪ್ರದಾಯಿಕ ಶಿಷ್ಟಾಚಾರವನ್ನು ಪಾಲಿಸುವುದೇ ಅಥವಾ ರಾಷ್ಟ್ರಪತಿ ಆಳ್ವಿಕೆಗೆ ಹಾದಿ ಮಾಡಿಕೊಡುವುದೇ ಎಂಬುದು ಕುತೂಹಲ ಮೂಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು