ಜನಸಾಮಾನ್ಯನಿಗೆ ಮತ್ತೆ ಬೆಲೆ ಏರಿಕೆ ಬಿಸಿ: ಸಾಬೂನು, ಬಿಸ್ಕತ್ತು, ಆಹಾರ ಪದಾರ್ಥಗಳ ದರ ಹೆಚ್ಚಳಕ್ಕೆ ಕಂಪನಿಗಳ ಸಿದ್ಧತೆ

ದೆಹಲಿ: ‘ಏನನ್ನೂ ಕೊಳ್ಳುವಂತಿಲ್ಲ, ಏನನ್ನೂ ತಿನ್ನುವಂತಿಲ್ಲ’ ಎನ್ನುವಂತಹ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗುತ್ತಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಎಫ್‌ಎಂಸಿಜಿ (FMCG) ಕಂಪನಿಗಳು ದರ ಹೆಚ್ಚಳದ ಮೂಲಕ ಮತ್ತೊಂದು ಶಾಕ್ ನೀಡಲು ಮುಂದಾಗಿವೆ.

ದೈನಂದಿನ ಬಳಕೆಯ ಸಾಬೂನು, ಡಿಟರ್ಜೆಂಟ್, ಬಿಸ್ಕತ್ತು ಮತ್ತು ಪ್ಯಾಕೇಜ್ಡ್ ಆಹಾರ ಪದಾರ್ಥಗಳ ಬೆಲೆ ಶೀಘ್ರದಲ್ಲೇ ಏರಿಕೆಯಾಗಲಿದೆ. ಕಚ್ಚಾ ತೈಲ ಬೆಲೆ ಏರಿಕೆ, ಪ್ಯಾಕೇಜಿಂಗ್ ಮತ್ತು ಇಂಧನ ವೆಚ್ಚದ ಹೆಚ್ಚಳ ಹಾಗೂ ಜಾಗತಿಕ ರಾಜಕೀಯ ಅಸ್ಥಿರತೆಗಳ ಕಾರಣದಿಂದಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ತಯಾರಿಕಾ ಸಂಸ್ಥೆಗಳು ತಿಳಿಸಿವೆ.

ಯಾವ ಕಂಪನಿಗಳಿಂದ ಎಷ್ಟರ ಮಟ್ಟಿಗೆ ಏರಿಕೆ?

  • ಬ್ರಿಟಾನಿಯಾ: ತನ್ನ ಉತ್ಪನ್ನಗಳ ಬೆಲೆಯನ್ನು ಶೇ. 20 ರಷ್ಟು ಹೆಚ್ಚಿಸುವುದಾಗಿ ಕಂಪನಿ ಘೋಷಿಸಿದೆ.
  • ಡಾಬರ್ ಇಂಡಿಯಾ: ಈಗಾಗಲೇ ಉತ್ಪನ್ನಗಳ ಬೆಲೆಯನ್ನು ಶೇ. 4 ರಷ್ಟು ಹೆಚ್ಚಿಸಿರುವುದಾಗಿ ತಿಳಿಸಿದೆ.
  • ಹಿಂದುಸ್ತಾನ್ ಯೂನಿಲಿವರ್ (HUL): ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಾಬೂನು ಮತ್ತು ಡಿಟರ್ಜೆಂಟ್ ದರ ಹೆಚ್ಚಳ ಮಾಡುವುದು ಅನಿವಾರ್ಯ ಎಂದು ಕಂಪನಿಯ ಸಿಎಫ್‌ಒ ನಿರಂಜನ್ ಗುಪ್ತಾ ಹೇಳಿದ್ದಾರೆ.
  • ಮಾರಿಕೋ: ಪ್ಯಾರಾಶೂಟ್ ಮತ್ತು ಸಫೋಲಾದಂತಹ ಬ್ರ್ಯಾಂಡ್‌ಗಳ ಬೆಲೆಯನ್ನು ಈಗಾಗಲೇ ಶೇ. 6-7 ರಷ್ಟು ಏರಿಕೆ ಮಾಡಿದೆ.
  • ನೆಸ್ಲೆ ಇಂಡಿಯಾ: ಮುಂದಿನ ಎರಡು ತಿಂಗಳುಗಳಲ್ಲಿ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಲಿದ್ದು, ಬೆಲೆ ಏರಿಕೆಯ ಮುನ್ಸೂಚನೆ ನೀಡಿದೆ.

ಹಲವು ಕಂಪನಿಗಳು ಬೆಲೆ ಏರಿಸುವ ಬದಲು, ಸಣ್ಣ ಪ್ಯಾಕೆಟ್‌ಗಳ (10 ಅಥವಾ 15 ರೂ.) ತೂಕವನ್ನು ಕಡಿಮೆ ಮಾಡಲು (Quantity reduction) ನಿರ್ಧರಿಸಿವೆ.

ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾಧ್ಯತೆ: ಈಗಾಗಲೇ ಕಮರ್ಷಿಯಲ್ ಎಲ್‌ಪಿಜಿ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಏರಿಸಿರುವ ಕೇಂದ್ರ ಸರ್ಕಾರ, ಶೀಘ್ರದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮ ಭಾರತದ ಮೇಲೂ ಬೀಳಲಿದೆ.

ಚುನಾವಣೆಗಳ ಕಾರಣದಿಂದಾಗಿ ತೈಲ ಬೆಲೆಯನ್ನು ಸ್ಥಿರವಾಗಿಟ್ಟಿದ್ದ ಸರ್ಕಾರ, ಈಗ ತೈಲ ಕಂಪನಿಗಳ ನಷ್ಟದ ನೆಪವೊಡ್ಡಿ ಬೆಲೆ ಏರಿಕೆಗೆ ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ. ಇದು ಸಂಭವಿಸಿದರೆ ಸಾರಿಗೆ ವೆಚ್ಚ ಹೆಚ್ಚಾಗಿ, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಮತ್ತೆ ಏರಿಕೆಯಾಗುವುದು ಖಚಿತ.

Related Articles

ಇತ್ತೀಚಿನ ಸುದ್ದಿಗಳು