ಮಕ್ಕಳ ಮೇಲೆ ಲೈಂಗಿಕ ಕಿರುಕುಳ: ವಚನಾನಂದರ ವಿಚಾರಣೆ, ವೈದ್ಯಕೀಯ ತಪಾಸಣೆ

ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಅವರ ವಿರುದ್ಧ ಮಠದ ವಿದ್ಯಾರ್ಥಿ ನಿಲಯದಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ಮುನ್ನೆಲೆಗೆ ಬಂದಿದ್ದು, ಹರಿಹರ ಗ್ರಾಮೀಣ ಪೊಲೀಸರು ಅವರನ್ನು ಠಾಣೆಗೆ ಕರೆತಂದು ಸುದೀರ್ಘ ವಿಚಾರಣೆ ನಡೆಸಿದ್ದಾರೆ. ನಂತರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಫೊರೆನ್ಸಿಕ್ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ದೂರಿನ ಹಿನ್ನೆಲೆ
2024ರ ಮಾರ್ಚ್ 20ರಂದು ಮಠದ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಹರಿಹರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣ ತನಿಖೆಗೆ ಮುಂದಾದರು.

ಪೊಲೀಸರು ವಚನಾನಂದ ಅವರನ್ನು ಠಾಣೆಗೆ ಕರೆತಂದು ಸರಣಿ ಪ್ರಶ್ನೆಗಳ ಮೂಲಕ ಸುದೀರ್ಘ ವಿಚಾರಣೆ ನಡೆಸಿದರು. ಪೊಲೀಸರು ಕೇಳಿದ 50ಕ್ಕೂ ಅಧಿಕ ಪ್ರಶ್ನೆಗಳಿಗೆ ಶ್ರೀಗಳು ಉತ್ತರಿಸಿದ್ದಾರೆ ಎಂದು ತಿಳಿದುಬಂದಿದೆ.

ವೈದ್ಯಕೀಯ ತಪಾಸಣೆ
ವಿಚಾರಣೆ ಮುಕ್ತಾಯದ ನಂತರ ವಚನಾನಂದರನ್ನು ನಗರದ ದಾಮೋದರ ಮಂಜುನಾಥ ಪೈ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಲಾಯಿತು. ವಚನಾನಂದರು ದೈಹಿಕವಾಗಿ ಸದೃಢರಾಗಿರುವುದು ತಪಾಸಣೆಯಲ್ಲಿ ದೃಢಪಟ್ಟಿದೆ. ಮುಂದಿನ ತನಿಖೆಗೆ ನೆರವಾಗುವ ನಿಟ್ಟಿನಲ್ಲಿ ಶ್ರೀಗಳ ಉಗುರು ಮತ್ತು ಕೂದಲು ಸೇರಿದಂತೆ ಅಗತ್ಯ ಮಾದರಿಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಫೊರೆನ್ಸಿಕ್ ವರದಿ ಬಂದ ನಂತರ ಮುಂದಿನ ತನಿಖೆ ಕ್ರಮ ನಿರ್ಧರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಚನಾನಂದರ ಪ್ರತಿಕ್ರಿಯೆ
ಮಠಕ್ಕೆ ಮರಳಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ವಚನಾನಂದ, “ನಾನು ಕಾನೂನನ್ನು ಗೌರವಿಸಿ ವಿಚಾರಣೆಗೆ ಸಹಕರಿಸಿದ್ದೇನೆ. ಸತ್ಯಕ್ಕೆ ಯಾವಾಗಲೂ ಜಯ” ಎಂದು ಹೇಳಿದರು. ಪ್ರಕರಣ ಸದ್ಯ ತನಿಖೆಯ ಹಂತದಲ್ಲಿದ್ದು, ಫೊರೆನ್ಸಿಕ್ ವರದಿ ಹಾಗೂ ಮುಂದಿನ ತನಿಖೆಯ ಆಧಾರದ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮೂಲಗಳು ಹೇಳುತ್ತವೆ.

Related Articles

ಇತ್ತೀಚಿನ ಸುದ್ದಿಗಳು