ಮನುಷ್ಯ ಹಾರಿ ಹೋಗುವಷ್ಟು ವೇಗದ ಗಾಳಿ! ಉತ್ತರ ಪ್ರದೇಶದಲ್ಲಿ ಬಿರುಗಾಳಿ ಅಟ್ಟಹಾಸಕ್ಕೆ 104 ಮಂದಿ ಬಲಿ

ದೆಹಲಿ: ದೇಶದಲ್ಲಿ ವಿಚಿತ್ರ ಹವಾಮಾನ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಬಿಸಿಲ ಬೇಗೆ ಜನರನ್ನು ಹೈರಾಣಾಗಿಸುತ್ತಿದ್ದರೆ, ಇನ್ನೊಂದೆಡೆ ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಭೀಕರ ಈದುರು ಗಾಳಿ ಹಾಗೂ ಅಕಾಲಿಕ ಮಳೆ ವಿಪರೀತ ಹಾನಿ ಉಂಟುಮಾಡುತ್ತಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮತ್ತು ಅಯೋಧ್ಯೆ ಸೇರಿದಂತೆ 31 ಜಿಲ್ಲೆಗಳಲ್ಲಿ ಗುರುವಾರ ಸಂಭವಿಸಿದ ಪ್ರತ್ಯೇಕ ಅವಘಡಗಳಲ್ಲಿ ಬರೋಬ್ಬರಿ 104 ಜನರು ಸಾವನ್ನಪ್ಪಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ಅತಿ ಹೆಚ್ಚು ಸಾವು: ವರದಿಗಳ ಪ್ರಕಾರ, ಪ್ರಯಾಗ್‌ರಾಜ್ ಜಿಲ್ಲೆಯೊಂದರಲ್ಲೇ 21 ಜನರು ಮೃತಪಟ್ಟಿದ್ದರೆ, ಭದೋಹಿಯಲ್ಲಿ 17 ಜನರು ಬಲಿಯಾಗಿದ್ದಾರೆ. ಬರೇಲಿ ಜಿಲ್ಲೆಯಲ್ಲಿ ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಬೀಸಿದ ಬಿರುಗಾಳಿಗೆ ಯುವಕನೊಬ್ಬ ಕಬ್ಬಿಣದ ಶೀಟ್ ಸಮೇತ ಗಾಳಿಯಲ್ಲಿ ಹಾರಿ ಹೋಗಿ ದೂರದ ಗದ್ದೆಯಲ್ಲಿ ಬಿದ್ದಿರುವ ಭೀಕರ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವ್ಯಾಪಕ ಹಾನಿ: ನಗರ ಪ್ರದೇಶಗಳಲ್ಲಿ ಅಂಗಡಿಗಳ ಮೇಲಿನ ಶೀಟ್‌ಗಳು ಹಾರಿ ಬಿದ್ದಿವೆ. ಗ್ರಾಮೀಣ ಭಾಗಗಳಲ್ಲಿ ಬೃಹತ್ ಮರಗಳು ಮತ್ತು ವಿದ್ಯುತ್ ಕಂಬಗಳು ವಾಹನಗಳ ಮೇಲೆ ಉರುಳಿ ಬಿದ್ದ ಪರಿಣಾಮ ಸಾವು-ನೋವು ಸಂಭವಿಸಿದೆ. ಈ ವಿಕೋಪದಲ್ಲಿ ಸುಮಾರು 53 ಜನರು ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶದ ಪರಿಹಾರ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಮಳೆ ಮತ್ತು ಗಾಳಿಯ ಆರ್ಭಟಕ್ಕೆ ಕೇವಲ ಮನುಷ್ಯರಷ್ಟೇ ಅಲ್ಲದೆ, 100ಕ್ಕೂ ಹೆಚ್ಚು ಜಾನುವಾರುಗಳು ಸಹ ಮೃತಪಟ್ಟಿವೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದ್ದು, ಹಾನಿಯ ಅಂದಾಜು ಮಾಡಲಾಗುತ್ತಿದೆ. ಇದೇ ವೇಳೆ ನೆರೆಯ ರಾಜಸ್ಥಾನದಲ್ಲಿ ತೀವ್ರವಾದ ಬಿಸಿಗಾಳಿ (Heatwave) ಜನರನ್ನು ತತ್ತರಿಸುವಂತೆ ಮಾಡಿದೆ.


Related Articles

ಇತ್ತೀಚಿನ ಸುದ್ದಿಗಳು