ಯೋಗಿ ಆದಿತ್ಯನಾಥ್ ಆಡಳಿತದ 9 ವರ್ಷ: ಉತ್ತರ ಪ್ರದೇಶದಲ್ಲಿ ಎನ್‌ಕೌಂಟರ್‌ಗೆ 289 ಅಪರಾಧಿಗಳು ಬಲಿ

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಕಳೆದ ಒಂಬತ್ತು ವರ್ಷಗಳಿಂದ ಅಪರಾಧ ಮತ್ತು ಅಪರಾಧಿಗಳ ವಿರುದ್ಧ ಹಮ್ಮಿಕೊಂಡಿರುವ ನಿರಂತರ ದಮನಕಾರಿ ಕಾರ್ಯಾಚರಣೆಯ ಭಾಗವಾಗಿ, ಒಟ್ಟು 289 ಕುಖ್ಯಾತ ಅಪರಾಧಿಗಳನ್ನು ಪೊಲೀಸ್ ಎನ್‌ಕೌಂಟರ್‌ಗಳಲ್ಲಿ ಹೊಡೆದುರುಳಿಸಲಾಗಿದೆ. ಈ ಕುರಿತು ಉತ್ತರ ಪ್ರದೇಶ ಸರ್ಕಾರವು ಸೋಮವಾರ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.

ಈ ಒಂಬತ್ತು ವರ್ಷಗಳ ಅವಧಿಯಲ್ಲಿ ಉತ್ತರ ಪ್ರದೇಶ ಪೊಲೀಸರು ಒಟ್ಟು 17,043 ಎನ್‌ಕೌಂಟರ್ ಕಾರ್ಯಾಚರಣೆಗಳನ್ನು ನಡೆಸಿದ್ದು, 34,253 ಅಪರಾಧಿಗಳನ್ನು ಬಂಧಿಸಿದ್ದಾರೆ. ಈ ಎನ್‌ಕೌಂಟರ್‌ಗಳಲ್ಲಿ ಸುಮಾರು 11,834 ಅಪರಾಧಿಗಳು ಗಾಯಗೊಂಡಿದ್ದಾರೆ. ಇದೇ ವೇಳೆ, ಕರ್ತವ್ಯದ ಸಾಲಿನಲ್ಲಿ 18 ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದು, 1,852 ಪೊಲೀಸರು ಗಾಯಗೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ರಾಜ್ಯದಲ್ಲೇ ಅತ್ಯಂತ ಹೆಚ್ಚು ಎನ್‌ಕೌಂಟರ್‌ಗಳು ಮೀರತ್ ವಲಯದಲ್ಲಿ ದಾಖಲಾಗಿವೆ. ಇಲ್ಲಿ ಪೊಲೀಸರು 4,813 ಕಾರ್ಯಾಚರಣೆಗಳನ್ನು ನಡೆಸಿದ್ದು, 8,921 ಅಪರಾಧಿಗಳನ್ನು ಬಂಧಿಸಿದ್ದಾರೆ ಮತ್ತು 3,513 ಅಪರಾಧಿಗಳು ಗಾಯಗೊಂಡಿದ್ದಾರೆ. ಮೀರತ್ ವಲಯವೊಂದರಲ್ಲೇ 97 ರೌಡಿಗಳನ್ನು ಸ್ಥಳದಲ್ಲೇ ಹೊಡೆದುರುಳಿಸಲಾಗಿದೆ. ಈ ಕಾರ್ಯಾಚರಣೆಗಳ ವೇಳೆ 477 ಪೊಲೀಸರು ಗಾಯಗೊಂಡಿದ್ದು, ಇಬ್ಬರು ಹುತಾತ್ಮರಾಗಿದ್ದಾರೆ.

ಎನ್‌ಕೌಂಟರ್‌ಗಳ ಪಟ್ಟಿಯಲ್ಲಿ ವಾರಾಣಸಿ ವಲಯ ಎರಡನೇ ಸ್ಥಾನದಲ್ಲಿದ್ದು, ಇಲ್ಲಿ ನಡೆದ 1,292 ಎನ್‌ಕೌಂಟರ್‌ಗಳಲ್ಲಿ 2,426 ಅಪರಾಧಿಗಳನ್ನು ಬಂಧಿಸಿ, 29 ಜನರನ್ನು ಎನ್‌ಕೌಂಟರ್ ಮಾಡಲಾಗಿದೆ. ಆಗ್ರಾ ವಲಯವು 2,494 ಎನ್‌ಕೌಂಟರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, 5,845 ಅಪರಾಧಿಗಳ ಬಂಧನ ಹಾಗೂ 24 ಅಪರಾಧಿಗಳ ಎನ್‌ಕೌಂಟರ್ ನಡೆದಿದೆ.

ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಬರೇಲಿ ವಲಯದಲ್ಲಿ 21, ಲಕ್ನೋ ವಲಯದಲ್ಲಿ 20 ಅಪರಾಧಿಗಳನ್ನು ಹತ್ಯೆ ಮಾಡಲಾಗಿದೆ. ಕಮಿಷನರೇಟ್‌ಗಳ ಪೈಕಿ ಘಾಜಿಯಾಬಾದ್ ಕಂತಿಷನರೇಟ್‌ನಲ್ಲಿ ಅತ್ಯಧಿಕ ಅಂದರೆ 18 ಅಪರಾಧಿಗಳನ್ನು ಕೊಲ್ಲಲಾಗಿದೆ. ರಾಜ್ಯ ರಾಜಧಾನಿ ಲಕ್ನೋ ಕಮಿಷನರೇಟ್ ವ್ಯಾಪ್ತಿಯಲ್ಲಿ 12 ಅಪರಾಧಿಗಳನ್ನು ಹೊಡೆದುರುಳಿಸಲಾಗಿದೆ.

ಉಳಿದಂತೆ ಕಾನ್ಪುರ ವಲಯದಲ್ಲಿ 12, ಪ್ರಯಾಗ್‌ರಾಜ್ ವಲಯದಲ್ಲಿ 11, ಆಗ್ರಾ ಕಮಿಷನರೇಟ್‌ನಲ್ಲಿ 10, ಗೌತಮ್ ಬುದ್ಧ ನಗರದಲ್ಲಿ 9, ಗೋರಖ್‌ಪುರ ವಲಯದಲ್ಲಿ 8, ವಾರಾಣಸಿ ಕಮಿಷನರೇಟ್‌ನಲ್ಲಿ 8, ಪ್ರಯಾಗ್‌ರಾಜ್ ಕಮಿಷನರೇಟ್‌ನಲ್ಲಿ 6 ಹಾಗೂ ಕಾನ್ಪುರ ಕಮಿಷನರೇಟ್ ವ್ಯಾಪ್ತಿಯಲ್ಲಿ ನಾಲ್ಕು ಅಪರಾಧಿಗಳನ್ನು ಎನ್‌ಕೌಂಟರ್ ಮಾಡಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತದಲ್ಲಿ ಉತ್ತರ ಪ್ರದೇಶ ಪೊಲೀಸರು ಅಪರಾಧಗಳ ವಿರುದ್ಧ ‘ಶೂನ್ಯ ಸಹಿಷ್ಣುತೆ’ (ಜೀರೋ ಟಾಲರೆನ್ಸ್) ನೀತಿಯನ್ನು ಜಾರಿಗೆ ತಂದಿದ್ದಾರೆ. ಎನ್‌ಕೌಂಟರ್‌ಗಳ ಜೊತೆಗೆ ಅಪರಾಧಿಗಳ ಆಸ್ತಿ ಮುಟ್ಟುಗೋಲು, ಗ್ಯಾಂಗ್‌ಸ್ಟರ್ ಆಕ್ಟ್ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಯಂತಹ (NSA) ಕಠಿಣ ಕಾನೂನುಗಳನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ.

ಪೊಲೀಸರ ಈ ಕಠಿಣ ಕ್ರಮಗಳಿಂದಾಗಿ ಅಪರಾಧಿಗಳು ರಾಜ್ಯ ತೊರೆಯುವಂತಾಗಿದ್ದು, ಉತ್ತರ ಪ್ರದೇಶವು ಭಯಮುಕ್ತ ಮತ್ತು ಸುರಕ್ಷಿತ ರಾಜ್ಯವಾಗಿ ಗುರುತಿಸಿಕೊಳ್ಳುತ್ತಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು