ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿ, ಬದಲಾವಣೆ ಬೇಕಿದ್ದರೆ ಖರ್ಗೆ ಬರಲಿ: ದಲಿತ ಸಿಎಂ ಪರ ರಾಯರೆಡ್ಡಿ ಒಲವು

ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ವಯಸ್ಸಿನ ಕಾರಣದಿಂದಾಗಿ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಳ್ಳಲು ಆಸಕ್ತಿ ಹೊಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಖರ್ಗೆ ಅವರೊಂದಿಗೆ ಇತ್ತೀಚೆಗೆ ನಡೆಸಿದ ಮಾತುಕತೆಯನ್ನು ನೆನಪಿಸಿಕೊಂಡ ರಾಯರೆಡ್ಡಿ, “ನಾನು ಅವರಿಗೆ ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಆಡಳಿತಾತ್ಮಕ ವಿಷಯಗಳ ಬಗ್ಗೆ ವಿವರಿಸಿದೆ. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಪರಿಣಾಮಕಾರಿ ಆಡಳಿತವನ್ನು ನೀಡುವುದು ಅತ್ಯಂತ ಮುಖ್ಯ ಎಂಬುದನ್ನು ಒತ್ತಿಹೇಳಿದೆ.

ಈ ನಿರ್ಣಾಯಕ ಹಂತದಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಬದಲಾಯಿಸಬೇಡಿ ಎಂದು ವಿನಂತಿಸಿದೆ. ಒಂದು ವೇಳೆ ನಾಯಕತ್ವ ಬದಲಾವಣೆ ಅನಿವಾರ್ಯವೇ ಆದಲ್ಲಿ, ಅತ್ಯಂತ ಹಿರಿಯ ನಾಯಕರಾಗಿ ನೀವೇ (ಖರ್ಗೆ) ಮುಖ್ಯಮಂತ್ರಿಯಾಗಬೇಕು ಎಂದು ಸಲಹೆ ನೀಡಿದೆ. ಆದರೆ, ಖರ್ಗೆ ಅವರು ತಮ್ಮ ವಯಸ್ಸಿನ ಕಾರಣದಿಂದಾಗಿ ತಮಗೆ ಸಿಎಂ ಆಗಲು ಇಷ್ಟವಿಲ್ಲ ಎಂದು ಹೇಳಿದರು. ಈ ಕುರಿತು ರಾಹುಲ್ ಗಾಂಧಿ ಮತ್ತು ತಾವೇ ಸೇರಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು” ಎಂದಿದ್ದಾರೆ.

ಉಳಿದ ಅವಧಿಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಬ್ಯಾಟ್ ಮಾಡಿರುವ ರಾಯರೆಡ್ಡಿ, “ನನ್ನ ಪ್ರಕಾರ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದು ನನಗೆ ಇಷ್ಟವಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ. ಆದರೆ ಸಿದ್ದರಾಮಯ್ಯ ಮುಂದುವರಿದರೆ ರಾಜ್ಯದ ಪರಿಸ್ಥಿತಿ ಚೆನ್ನಾಗಿರಲಿದೆ. ಇಲ್ಲದಿದ್ದರೆ, ಅವರ ಸುದೀರ್ಘ ಅನುಭವ ಮತ್ತು ಹಿರಿತನದ ಆಧಾರದ ಮೇಲೆ ಖರ್ಗೆ ಅವರೇ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಬರಬೇಕು, ಆ ಮೂಲಕ ರಾಜ್ಯಕ್ಕೊಬ್ಬ ದಲಿತ ಮುಖ್ಯಮಂತ್ರಿ ಸಿಕ್ಕಂತಾಗುತ್ತದೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ರಾಜ್ಯ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಮಾತನಾಡಿದ ರಾಯರೆಡ್ಡಿ, ಸಂಪುಟದಲ್ಲಿ ಬದಲಾವಣೆ ಮಾಡುವ ಕುರಿತು ಸಿಎಂ ಮತ್ತು ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ ಎಂದಿದ್ದಾರೆ. “ಸಂಪುಟಕ್ಕೆ ಸೇರ್ಪಡೆಗೊಳ್ಳಬೇಕಾದ ಹಲವು ಹಿರಿಯ ನಾಯಕರು ಪಕ್ಷದಲ್ಲಿದ್ದಾರೆ. ನಾನು ಕೂಡ ಏಳು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಸಂಪುಟ ಪುನಾರಚನೆಯಿಂದ ಅಧಿಕಾರ ಹಂಚಿಕೆಯಾಗುವುದಲ್ಲದೆ, ಪಕ್ಷಕ್ಕೆ ಹೊಸ ಶಕ್ತಿ ಬರಲಿದೆ. ಇದು ಜನರಿಗೆ ಅನುಕೂಲವಾಗುವ ವಿಭಿನ್ನ ಆಡಳಿತ ಶೈಲಿಗೆ ನಾಂದಿ ಹಾಡಲಿದೆ” ಎಂದು ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ನೀತಿಗಳನ್ನು ಸಮರ್ಥಿಸಿಕೊಂಡ ರಾಯರೆಡ್ಡಿ, ಸಬ್ಸಿಡಿಗಳನ್ನು ನೀಡುವಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ನೆನಪಿಸಿದ್ದಾರೆ. “ಯಾವುದೇ ಭ್ರಷ್ಟಾಚಾರವಿಲ್ಲದೆ ನೇರ ನಗದು ವರ್ಗಾವಣೆ (DBT) ಮೂಲಕ ಸುಮಾರು 1.2 ಲಕ್ಷ ಕೋಟಿ ರೂಪಾಯಿಗಳನ್ನು ಜನರಿಗೆ ತಲುಪಿಸಲಾಗಿದೆ. ಸುಮಾರು 1.25 ಕೋಟಿ ಮಹಿಳೆಯರು ಪ್ರತಿ ತಿಂಗಳು 2,000 ರೂಪಾಯಿಗಳನ್ನು ಪಡೆಯುತ್ತಿದ್ದರೆ, 4.4 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ” ಎಂದು ಸರ್ಕಾರದ ಸಾಧನೆಗಳನ್ನು ಅವರು ಪಟ್ಟಿ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು