ಸಿಎಂಆರ್‌ಎಲ್ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸ, ಪುತ್ರಿ ವೀಣಾ ಸಂಸ್ಥೆಯ ಮೇಲೆ ಇಡಿ ದಾಳಿ

ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸಗಳು ಹಾಗೂ ಅವರ ಪುತ್ರಿ ವೀಣಾ ಟಿ. ಅವರ ಐಟಿ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬುಧವಾರ (ಮೇ 27) ಮುಂಜಾನೆಯಿಂದಲೇ ಏಕಕಾಲದಲ್ಲಿ ಭಾರಿ ದಾಳಿ ನಡೆಸಿದ್ದಾರೆ.

ಸಿಎಂಆರ್‌ಎಲ್ (CMRL) ಕಂಪನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಟಿ. ಹಾಗೂ ಅವರ ಬೆಂಗಳೂರು ಮೂಲದ ‘ಎಕ್ಸಾಲಾಜಿಕ್ ಸೊಲ್ಯೂಷನ್ಸ್’ ಸಂಸ್ಥೆಯು ‘ಕೊಚ್ಚಿನ್ ಮಿನರಲ್ಸ್ ಅಂಡ್ ರುಟೈಲ್ಸ್ ಲಿಮಿಟೆಡ್’ (CMRL) ಎಂಬ ಗಣಿಗಾರಿಕೆ ಕಂಪನಿಯೊಂದಿಗೆ ನಡೆಸಿದೆ ಎನ್ನಲಾದ ಆರ್ಥಿಕ ವಹಿವಾಟುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ವರದಿಗಳ ಪ್ರಕಾರ, ಕಣ್ಣೂರಿನಲ್ಲಿರುವ ಪಿಣರಾಯಿ ವಿಜಯನ್ ಅವರ ಸ್ವಂತ ಮನೆ, ತಿರುವನಂತಪುರಂನಲ್ಲಿರುವ ಅವರ ಬಾಡಿಗೆ ನಿವಾಸ ಹಾಗೂ ಬೆಂಗಳೂರಿನಲ್ಲಿರುವ ವೀಣಾ ಅವರ ಕಚೇರಿ ಸೇರಿದಂತೆ ಒಟ್ಟು ಹತ್ತು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಮುಂಜಾನೆಯಿಂದಲೇ ತಪಾಸಣೆ ನಡೆಸುತ್ತಿದ್ದಾರೆ. ಇದೇ ವೇಳೆ ಇಡಿ ಅಧಿಕಾರಿಗಳು ವೀಣಾ ಅವರ ಹೇಳಿಕೆಯನ್ನೂ ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆದಾಯ ತೆರಿಗೆ ಮಧ್ಯಂತರ ಇತ್ಯರ್ಥ ಮಂಡಳಿಯ (ITISB) ವರದಿಯ ಪ್ರಕಾರ, ಈ ಗಣಿಗಾರಿಕೆ ಸಂಸ್ಥೆಯು ಮಾಜಿ ಮುಖ್ಯಮಂತ್ರಿಗಳ ಪುತ್ರಿ ಮತ್ತು ಅವರ ಐಟಿ ಸಂಸ್ಥೆಗೆ ಒಟ್ಟು 1.72 ಕೋಟಿ ರೂಪಾಯಿಗಳನ್ನು ಪಾವತಿಸಿದೆ ಎನ್ನಲಾಗಿತ್ತು. ಅಲ್ಲದೆ, ಗಂಭೀರ ವಂಚನೆ ತನಿಖಾ ಕಚೇರಿ (SFIO) ಸಹ ವೀಣಾ ಅವರು ವಿವಾದಿತ ಗಣಿಗಾರಿಕೆ ಸಂಸ್ಥೆಯಿಂದ 2.70 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಪತ್ತೆಹಚ್ಚಿತ್ತು. ಈ ಇಡಿ ನಡಾವಳಿಗಳನ್ನು ರದ್ದುಗೊಳಿಸುವಂತೆ ಕೋರಿ ಸಿಎಂಆರ್‌ಎಲ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದ ಮರುದಿನವೇ ಈ ದಾಳಿಗಳು ನಡೆದಿವೆ.

ರಾಜಕೀಯ ದ್ವೇಷದ ನಡೆ: ಸಿಪಿಐ(ಎಂ) ಆಕ್ರೋಶ ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ಸರ್ಕಾರವು ರಾಜಕೀಯ ದ್ವೇಷ ಸಾಧಿಸಲು ಈ ದಾಳಿ ನಡೆಸುತ್ತಿದೆ ಎಂದು ಸಿಪಿಐ(ಎಂ) ತೀವ್ರವಾಗಿ ಆಕ್ಷೇಪಿಸಿದೆ. ಇದರ ವಿರುದ್ಧ ರಾಜ್ಯದಾದ್ಯಂತ ಪಕ್ಷವು ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ಇದು ದೇಶದ ಪ್ರಮುಖ ವಿರೋಧ ಪಕ್ಷದ ನಾಯಕನ ಮೇಲೆ ಬಿಜೆಪಿ ಸರ್ಕಾರ ನಡೆಸುತ್ತಿರುವ ಉದ್ದೇಶಪೂರ್ವಕ ದಾಳಿಯಾಗಿದೆ. ಇಂತಹ ಕ್ರಮಗಳಿಂದ ಪಿಣರಾಯಿ ವಿಜಯನ್ ಅವರನ್ನಾಗಲಿ ಅಥವಾ ಸಿಪಿಐ(ಎಂ) ಪಕ್ಷವನ್ನಾಗಲಿ ಹೆದರಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಅಲ್ಲದೆ, ಕೇರಳದ ಪ್ರಸ್ತುತ ಯುಡಿಎಫ್ (UDF) ಸರ್ಕಾರವೂ ಈ ದಾಳಿಗೆ ಭಾಗಿಯಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ವಿಶೇಷವೆಂದರೆ, ಕೇರಳದ ಪ್ರಸ್ತುತ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ಮರುದಿನವೇ ಈ ದಾಳಿಗಳು ಸಂಭವಿಸಿವೆ.

Related Articles

ಇತ್ತೀಚಿನ ಸುದ್ದಿಗಳು