ಭಾರತ-ಬಾಂಗ್ಲಾ ಗಡಿ ಬೇಲಿ ನಿರ್ಮಾಣಕ್ಕೆ ವೇಗ: ಬಿಎಸ್‌ಎಫ್‌ಗೆ 142.8 ಎಕರೆ ಭೂಮಿ ಹಸ್ತಾಂತರಿಸಿದ ಪಶ್ಚಿಮ ಬಂಗಾಳ ಸರ್ಕಾರ

ಕೋಲ್ಕತಾ: ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಹೊರಠಾಣೆಗಳನ್ನು (ಔಟ್‌ಪೋಸ್ಟ್‌) ಸ್ಥಾಪಿಸಲು ಮತ್ತು ಮುಳ್ಳುತಂತಿ ಬೇಲಿ ಮೂಲಸೌಕರ್ಯ ಯೋಜನೆಗಳಿಗಾಗಿ ಪಶ್ಚಿಮ ಬಂಗಾಳ ಸರ್ಕಾರವು 142.79 ಎಕರೆ ಭೂಮಿಯನ್ನು ಗಡಿ ಭದ್ರತಾ ಪಡೆಗೆ (BSF) ಹಸ್ತಾಂತರಿಸಿದೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ.

ಮೇ 11 ರಂದು ನಡೆದ ಭಾಜಪ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ, ಗಡಿ ಬೇಲಿ ಮತ್ತು ಸಂಬಂಧಿತ ಮೂಲಸೌಕರ್ಯ ಯೋಜನೆಗಳಿಗಾಗಿ 45 ದಿನಗಳ ಒಳಗೆ 600 ಎಕರೆ ಭೂಮಿಯನ್ನು ವರ್ಗಾಯಿಸಲು ನಿರ್ಧರಿಸಲಾಗಿತ್ತು. ಈ ಹಸ್ತಾಂತರವು ಅದೇ ನಿರ್ಧಾರದ ಒಂದು ಭಾಗವಾಗಿದೆ.

“ಗಡಿ ಪ್ರದೇಶಗಳಲ್ಲಿ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ, ಬಿಎಸ್‌ಎಫ್ ಹೊರಠಾಣೆಗಳ ನಿರ್ಮಾಣ ಮತ್ತು ಮುಳ್ಳುತಂತಿ ಬೇಲಿ ಅಳವಡಿಕೆಗೆ ಅನುಕೂಲ ಮಾಡಿಕೊಡಲು ಪಶ್ಚಿಮ ಬಂಗಾಳ ಸರ್ಕಾರವು ತೀವ್ರತರವಾದ ಕ್ರಮಗಳನ್ನು ಕೈಗೊಂಡಿದೆ. ಈಗ ಹೆಚ್ಚುವರಿ ಭೂಮಿಯನ್ನು ಬಿಎಸ್‌ಎಫ್‌ಗೆ ಹಸ್ತಾಂತರಿಸಲಾಗಿದ್ದು, ಒಟ್ಟು ಹಸ್ತಾಂತರದ ಪ್ರಮಾಣವು 142.79 ಎಕರೆಗೆ ತಲುಪಿದೆ,” ಎಂದು ಸಿಎಂ ಬುಧವಾರ ತಡರಾತ್ರಿ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದರೊಂದಿಗೆ, ಒಂಬತ್ತು ಜಿಲ್ಲೆಗಳಾದ್ಯಂತ ಬಿಎಸ್‌ಎಫ್‌ಗೆ ವರ್ಗಾಯಿಸಲಾದ ಭೂಮಿಯ ವಿವರಗಳನ್ನು ಒಳಗೊಂಡಿರುವ ಜಿಲ್ಲಾವಾರು ಪಟ್ಟಿಯನ್ನೂ ಅವರು ಹಂಚಿಕೊಂಡಿದ್ದಾರೆ.

ಆ ಪಟ್ಟಿಯ ಪ್ರಕಾರ, ಕೂಚ್‌ಬೆಹಾರ್‌ನಲ್ಲಿ 22.92 ಎಕರೆ, ಜಲ್ಪೈಗುರಿಯಲ್ಲಿ 35.16 ಎಕರೆ, ಡಾರ್ಜಿಲಿಂಗ್‌ನಲ್ಲಿ 8.81 ಎಕರೆ, ಉತ್ತರ ದಿನಾಜಪುರದಲ್ಲಿ 2.84 ಎಕರೆ ಮತ್ತು ದಕ್ಷಿಣ ದಿನಾಜಪುರದಲ್ಲಿ 20.17 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ.

ಇದಲ್ಲದೆ, ಮಾಲ್ಡಾದಲ್ಲಿ 10.9 ಎಕರೆ, ಮುರ್ಷಿದಾಬಾದ್‌ನಲ್ಲಿ 38.8 ಎಕರೆ, ನದಿಯಾದಲ್ಲಿ 0.55 ಎಕರೆ ಮತ್ತು ಉತ್ತರ 24 ಪರಗಣ ಜಿಲ್ಲೆಯಲ್ಲಿ 2.6 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ.

ಈ ಯೋಜನೆಯ ಮೊದಲ ಹಂತದ ಭಾಗವಾಗಿ, ಐದು ಜಿಲ್ಲೆಗಳಾದ್ಯಂತ ಖರೀದಿಸಲಾದ 43 ಎಕರೆ ಭೂಮಿ ಮತ್ತು ಸರ್ಕಾರಿ ಸ್ವಾಮ್ಯದ (ವೆಸ್ಟೆಡ್) 31.9 ಎಕರೆ ಭೂಮಿಯ ಮಂಜೂರಾತಿ ಆದೇಶಗಳನ್ನು ಮೇ 20 ರಂದು ಬಿಎಸ್‌ಎಫ್‌ಗೆ ಹಸ್ತಾಂತರಿಸಲಾಗಿತ್ತು.

ವೇಗವಾಗಿ ಬೇಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವುದು ಮತ್ತು ಅಕ್ರಮ ವಲಸೆಯ ವಿರುದ್ಧ ಕಠಿಣ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವುದನ್ನು ಒಳಗೊಂಡಿರುವ ದ್ವಿಮುಖ ಕಾರ್ಯತಂತ್ರದ ಕುರಿತು ಕಳೆದ ವಾರ ಸುವೇಂದು ಅಧಿಕಾರಿ ಅವರು ಪ್ರಕಟಿಸಿದ್ದ ಪ್ರಮುಖ ನೀತಿಯ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಭಾರತದ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳವು ಬಾಂಗ್ಲಾದೇಶದೊಂದಿಗೆ ಅತ್ಯಂತ ಉದ್ದವಾದ 2,217 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿದೆ.

ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಪ್ರಕಾರ, ರಾಜ್ಯದಲ್ಲಿ ಈಗಾಗಲೇ ಸುಮಾರು 1,600 ಕಿಲೋಮೀಟರ್ ಗಡಿಗೆ ಬೇಲಿ ಹಾಕಲಾಗಿದ್ದು, ಇನ್ನುಳಿದ ಸುಮಾರು 600 ಕಿಲೋಮೀಟರ್ ಗಡಿಯಲ್ಲಿ ಯಾವುದೇ ಬೇಲಿ ಇರಲಿಲ್ಲ.

Related Articles

ಇತ್ತೀಚಿನ ಸುದ್ದಿಗಳು