ಸಿಜೆಪಿಗೆ ಹಿನ್ನಡೆ: ಎಕ್ಸ್ ಖಾತೆಯನ್ನು ತಕ್ಷಣವೇ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ನಿರಾಕರಣೆ

ದೆಹಲಿ: ಕಾಕ್ರೋಚ್ ಜನತಾ ಪಾರ್ಟಿ(CJP) ಎಕ್ಸ್ (ಟ್ವಿಟರ್) ಖಾತೆಯನ್ನು ತಕ್ಷಣವೇ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಮುಂದಿನ ಪರಿಣಾಮಗಳ ದೃಷ್ಟಿಯಿಂದ ಮತ್ತು ಸರ್ಕಾರದ ವಾದಗಳನ್ನು ಆಲಿಸಿದ ನಂತರವಷ್ಟೇ ಈ ರೀತಿಯ ಪರಿಹಾರವನ್ನು ನೀಡಲು ಸಾಧ್ಯ ಎಂದು ಜಸ್ಟಿಸ್ ಪುರುಷೇಂದ್ರ ಕುಮಾರ್ ಕೌರವ್ ತಿಳಿಸಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಜುಲೈ 6 ಕ್ಕೆ ಮುಂದೂಡಿದೆ.

ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಪ್ರಸ್ತುತ ವಿದೇಶದಲ್ಲಿದ್ದು, ಐಟಿ ನಿಯಮಗಳ ಅಡಿಯಲ್ಲಿ ರಚಿಸಲಾದ ಪರಿಶೀಲನಾ ಸಮಿತಿಯನ್ನು (Review Committee) ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂಪರ್ಕಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಈ ಪರಿಶೀಲನಾ ಸಮಿತಿಯು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಿ, ಐಟಿ ನಿಯಮಗಳ ಅಡಿಯಲ್ಲಿ ಯಾವುದೇ ವಿಷಯ ಅಥವಾ ಮಾಹಿತಿಯನ್ನು ನಿರ್ಬಂಧಿಸಲು (ಬ್ಲಾಕ್ ಮಾಡಲು) ಹೊರಡಿಸಲಾದ ಆದೇಶಗಳು ಕಾನೂನುಬದ್ಧವಾಗಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತದೆ ಎಂದು ಕೋರ್ಟ್ ವಿವರಿಸಿದೆ.

ಪರಿಶೀಲನೆಯ ನಂತರ ಸಮಿತಿಯು ಆ ನಿರ್ಬಂಧದ ಆದೇಶಗಳನ್ನು ರದ್ದುಗೊಳಿಸಿ, ಖಾತೆಯನ್ನು ಮರುಸ್ಥಾಪಿಸಲು ಆದೇಶ ಹೊರಡಿಸಬಹುದಾಗಿದೆ. ಮುಂದಿನ ವಿಚಾರಣೆಯ ದಿನಾಂಕದ ಒಳಗಾಗಿಯೇ ಪರಿಶೀಲನಾ ಸಮಿತಿಯು ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ, ತನ್ನ ನಿರ್ಧಾರವನ್ನು ದಾಖಲಿಸಬೇಕು ಎಂದು ಕೋರ್ಟ್ ಸೂಚಿಸಿದೆ.

ದೀಪ್ಕೆ ಅವರು ವರ್ಚುವಲ್ ಆಗಿ ಸಮಿತಿಯ ಮುಂದೆ ಹಾಜರಾಗಲು ನ್ಯಾಯಾಲಯ ಅನುಮತಿ ನೀಡಿದೆ. ಕೇಂದ್ರ ಸರ್ಕಾರವು ಮೇ 21 ರಂದು ಸಿಜೆಪಿಯ ಎಕ್ಸ್ ಖಾತೆಯನ್ನು ನಿರ್ಬಂಧಿಸಿತ್ತು.

Related Articles

ಇತ್ತೀಚಿನ ಸುದ್ದಿಗಳು