ಸಾಮಾನ್ಯ ಜನರಿಗೆ ಜೂನ್ ಒನ್ ಶಾಕ್?: ಎಲ್‌ಪಿಜಿ ಸಿಲಿಂಡರ್, ವಿಮಾನ ಇಂಧನ ದರ ಪರಿಷ್ಕರಣೆಗೆ ತೈಲ ಕಂಪನಿಗಳ ಸಿದ್ಧತೆ

ಹೊಸದೆಹಲಿ: ದೇಶದಲ್ಲಿ ಪ್ರತಿ ತಿಂಗಳೂ ಹಣಕಾಸು ವ್ಯವಸ್ಥೆ ಹಾಗೂ ಸರ್ಕಾರದ ನೀತಿ ನಿಯಮಗಳು ಬದಲಾಗುತ್ತಿರುತ್ತವೆ. ಸಾಮಾನ್ಯವಾಗಿ ಪ್ರಮುಖ ಬದಲಾವಣೆಗಳನ್ನು ತಿಂಗಳ ಒಂದನೇ ತಾರೀಖಿನಿಂದಲೇ ಜಾರಿಗೆ ತರಲಾಗುತ್ತದೆ. ಇನ್ನು ಕೇವಲ ಎರಡು ದಿನಗಳಲ್ಲಿ ನಾವು ಜೂನ್ ತಿಂಗಳಿಗೆ ಕಾಲಿಡಲಿದ್ದು, ಜೂನ್ 1 ರಿಂದ ದೇಶದಲ್ಲಿ ಜಾರಿಗೆ ಬರಲಿರುವ ಕೆಲವು ಪ್ರಮುಖ ಆರ್ಥಿಕ ಬದಲಾವಣೆಗಳ ವಿವರ ಇಲ್ಲಿದೆ:

ಎಲ್‌ಪಿಜಿ ಸಿಲಿಂಡರ್ ಮತ್ತು ಇಂಧನ ದರ ನಿರ್ಧಾರ: ಕೇಂದ್ರ ಸರ್ಕಾರದ ನೀತಿಯ ಪ್ರಕಾರ, ತೈಲ ಕಂಪನಿಗಳು ಪ್ರತಿ ತಿಂಗಳ ಒಂದನೇ ತಾರೀಖಿನಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ನಿರ್ಧರಿಸುತ್ತವೆ. ವಾಣಿಜ್ಯ ಬಳಕೆಯ ಮತ್ತು ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆ ಪರಿಷ್ಕರಣೆಯನ್ನು ಜೂನ್ 1 ರಂದು ಘೋಷಿಸಲಾಗುವುದು. ಇದರೊಂದಿಗೆ ವಿಮಾನ ಹಾಗೂ ಹೆಲಿಕಾಪ್ಟರ್‌ಗಳಲ್ಲಿ ಬಳಸುವ ಏರ್ ಟರ್ಬೈನ್ ಫ್ಯೂಯೆಲ್ (ATF) ದರಗಳನ್ನೂ ಜೂನ್ 1 ರಂದೇ ನಿರ್ಧರಿಸಲಾಗುತ್ತದೆ.

ಪ್ರಸ್ತುತ ಮಧ್ಯಪ್ರಾಚ್ಯದಲ್ಲಿನ (ಮಿಡಲ್ ಈಸ್ಟ್) ಉದ್ವಿಗ್ನತೆಯಿಂದಾಗಿ ಗ್ಯಾಸ್ ಮತ್ತು ಎಟಿಎಫ್ ದರಗಳು ಈಗಾಗಲೇ ಹೆಚ್ಚಾಗಿದ್ದು, ಎಟಿಎಫ್ ದರ ಮತ್ತಷ್ಟು ಏರಿಕೆಯಾದರೆ ವಿಮಾನ ಪ್ರಯಾಣದ ಟಿಕೆಟ್ ದರಗಳೂ ದುಬಾರಿಯಾಗಲಿವೆ. ಸದ್ಯ ದೆಹಲಿಯಲ್ಲಿ ಒಂದು ಕಿಲೋ ಲೀಟರ್ ಎಟಿಎಫ್ ದರ 1,04,927 ರೂಪಾಯಿ ಆಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ನಗದು ಠೇವಣಿ ನಿಯಮ ಬದಲಾವಣೆ: ಎಚ್‌ಡಿಎಫ್‌ಸಿ (HDFC) ಬ್ಯಾಂಕ್ ಜೂನ್ 1 ರಿಂದ ನಗದು ಠೇವಣಿ ಮತ್ತು ಕೆಲವು ಖಾತೆಗಳ ನಿರ್ವಹಣಾ ನಿಯಮಗಳನ್ನು ಬದಲಾಯಿಸುತ್ತಿದೆ. ಸಣ್ಣ ಮುಖಬೆಲೆಯ ನೋಟುಗಳು ಮತ್ತು ನಾಣ್ಯಗಳ ಠೇವಣಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ತರಲಾಗುತ್ತಿದ್ದು, ಇವುಗಳ ಮೇಲೆ ಮಿತಿ ಹೇರುವ ಜೊತೆಗೆ ಹೆಚ್ಚುವರಿ ಶುಲ್ಕವನ್ನೂ ವಿಧಿಸುವ ಸಾಧ್ಯತೆಯಿದೆ.

ಹೊಸ ನಿಯಮಗಳ ಪ್ರಕಾರ, 20 ರೂಪಾಯಿ ಮುಖಬೆಲೆಯ ನೋಟುಗಳನ್ನು ಜಮಾವಣೆ ಮಾಡಬೇಕಾದರೆ ಆ ಒಟ್ಟು ಮೊತ್ತ 10,000 ರೂಪಾಯಿ ಮೀರಬಾರದು. ಹಾಗೆಯೇ, ನಾಣ್ಯಗಳನ್ನು ಠೇವಣಿ ಮಾಡಲು 5,000 ರೂಪಾಯಿ ಮಿತಿ ಇರಲಿದೆ. ಈ ಮಿತಿ ಮೀರಿದರೆ ಶೇಕಡಾ 2 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಅಲ್ಲದೆ, ಸಾಮಾನ್ಯ ನೋಟುಗಳ ಠೇವಣಿ ಮೇಲೆ ಶೇಕಡಾ 4 ರವರೆಗೆ ಮತ್ತು ನಾಣ್ಯಗಳ ಠೇವಣಿ ಮೇಲೆ ಶೇಕಡಾ 5 ರವರೆಗೆ ಶುಲ್ಕ ವಿಧಿಸುವ ಸಾಧ್ಯತೆಯಿದೆ.

ಸೋಲಾರ್ ಪ್ಯಾನಲ್ ಅಳವಡಿಕೆಗೆ ಹೊಸ ನಿಯಮ: ಸರ್ಕಾರಿ ಯೋಜನೆಗಳ ಮೂಲಕ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿಕೊಳ್ಳಲು ಜೂನ್ 1 ರಿಂದ ಹೊಸ ನಿಯಮಗಳು ಅನ್ವಯವಾಗಲಿವೆ. ಇನ್ಮುಂದೆ ಸರ್ಕಾರದಿಂದ ಅನುಮೋದಿಸಲ್ಪಟ್ಟ ಮತ್ತು ಮಾನ್ಯತೆ ಪಡೆದ ಸೋಲಾರ್ ಮಾಡ್ಯೂಲ್‌ಗಳು ಹಾಗೂ ಸೆಲ್‌ಗಳನ್ನು ಅಳವಡಿಸಿಕೊಂಡರೆ ಮಾತ್ರ ಸರ್ಕಾರದ ಸಬ್ಸಿಡಿ (ಸಹಾಯಧನ) ಲಭ್ಯವಾಗಲಿದೆ. ಗುಣಮಟ್ಟದ ಸೋಲಾರ್ ಪ್ಯಾನಲ್‌ಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಆದರೆ, ಈ ಹೊಸ ನಿಯಮದಿಂದಾಗಿ ಮಾರುಕಟ್ಟೆಯಲ್ಲಿ ಸೋಲಾರ್ ಪ್ಯಾನಲ್‌ಗಳ ಬೆಲೆ ಹೆಚ್ಚಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.

ಜೂನ್ ತಿಂಗಳಲ್ಲಿ ಬ್ಯಾಂಕ್ ರಜೆಗಳ ಮಹಾಪೂರ: ಜೂನ್ ತಿಂಗಳಿನಲ್ಲಿ ಬ್ಯಾಂಕುಗಳಿಗೆ ಹೆಚ್ಚಿನ ರಜೆಗಳು ಇರಲಿವೆ. ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಲ್ಲದೆ ಜೂನ್ 15, 25, 26, 29 ಮತ್ತು 30 ರಂದು ಬ್ಯಾಂಕುಗಳಿಗೆ ರಜೆ ಇರಲಿದೆ. ಇವುಗಳಲ್ಲಿ ಮೊಹರಂ, ಸಂತ್ ಗುರು ಕಬೀರ್ ಜಯಂತಿ ರಜೆಗಳೂ ಸೇರಿವೆ. ಇದರೊಂದಿಗೆ, ತೆಲಂಗಾಣ ರಾಜ್ಯಕ್ಕೆ ಸಂಬಂಧಿಸಿದಂತೆ ಜೂನ್ 2 ರಂದು ರಾಜ್ಯ ರಚನಾ ದಿನದ ನಿಮಿತ್ತ ಅಲ್ಲಿನ ಪ್ರಾದೇಶಿಕ ಬ್ಯಾಂಕುಗಳಿಗೆ ರಜೆ ಇರಲಿದ್ದು, ದೇಶದ ವಿವಿಧ ಭಾಗಗಳಲ್ಲಿ ಸ್ಥಳೀಯ ಹಬ್ಬಗಳಿಗೆ ಅನುಗುಣವಾಗಿ ರಜೆಗಳು ಅನ್ವಯವಾಗಲಿವೆ.

Related Articles

ಇತ್ತೀಚಿನ ಸುದ್ದಿಗಳು