ಹೋರ್ಮುಜ್ ಪರಿಣಾಮ – ರಾಜ್ಯದಲ್ಲಿ ರಸಗೊಬ್ಬರಕ್ಕಾಗಿ ಪರದಾಟ

ಬೆಂಗಳೂರು : ಅಮೆರಿಕ-ಇಸ್ರೇಲ್ ಮತ್ತು ಇರಾನ್(America-Israel and Iran) ನಡುವಿನ ಜಾಗತಿಕ ಯುದ್ಧದ ಭೀಕರ ಪರಿಣಾಮ ಈಗ ನೇರವಾಗಿ ಕರ್ನಾಟಕದ(Karnataka) ಕೃಷಿ(Agriculture) ವಲಯದ ಮೇಲೆ ಬಿದ್ದಿದೆ. ಹೊರ್ಮುಜ್ ಜಲಸಂಧಿಯ ದಿಗ್ಬಂಧನದಿಂದಾಗಿ ರಸಗೊಬ್ಬರ ಆಮದು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮುಂಬರುವ ಬಿತ್ತನೆ ಹಂಗಾಮಿಗೆ ರಾಜ್ಯದಲ್ಲಿ ಬರೋಬ್ಬರಿ 18.64 ಲಕ್ಷ ಟನ್ ರಸಗೊಬ್ಬರದ ಕೊರತೆ ಎದುರಾಗಿದ್ದು, ಇದು ರೈತರು ಮತ್ತು ಕೃಷಿ ಇಲಾಖೆಯನ್ನು ತೀವ್ರ ಆತಂಕಕ್ಕೆ ತಳ್ಳಿದೆ.

ಈ ವರ್ಷ 30.05 ಲಕ್ಷ ಟನ್‌ ರಸಗೊಬ್ಬರಕ್ಕೆ ರೈತರಿಂದ ಬೇಡಿಕೆ ವ್ಯಕ್ತವಾಗಿದೆ. ಮೇ 29ರವರೆಗೆ 11.41 ಲಕ್ಷ ಟನ್ ಮಾತ್ರ ಸಂಗ್ರಹವಾಗಿದೆ. ಇದರಲ್ಲಿ ಯೂರಿಯಾ, ಡಿಎಪಿ, ಕಾಂಪ್ಲೆಕ್ಸ್, ಪೊಟ್ಯಾಷ್, ಸೂಪ‌ರ್ ಪಾಸ್ಪೆಟ್ ಹಾಗೂ ಇತರೆ ಗೊಬ್ಬರಗಳೂ ಸೇರಿವೆ.
ಕೆಲ ವರ್ಷಗಳಿಂದ ಚೀನಾ ರಫ್ತು ವಹಿವಾಟು ನಿಲ್ಲಿಸಿದೆ. ಮಧ್ಯಪ್ರಾಚ್ಯ ದೇಶಗಳಾದ ಒಮನ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಜೋರ್ಡಾನ್, ಇಸ್ರೇಲ್ ದೇಶಗಳನ್ನೇ ರಾಜ್ಯ ರಸಗೊಬ್ಬರಕ್ಕಾಗಿ ಅವಲಂಬಿಸಿದೆ. ಅಲ್ಲಿ ಯುದ್ಧದ ಕರಿನೆರಳಿನಿಂದ ಇಲ್ಲಿ ಸಮಸ್ಯೆಯಾಗಿದೆ.
ಕೊರತೆ ನೀಗಿಸಲು ಹರಸಾಹಸ: ರಸಗೊಬ್ಬರ ಬಳಕೆ ಪ್ರಮಾಣ ಕಡಿಮೆ ಮಾಡಿ; ಭೂಮಿಯ ಫಲವತ್ತತೆ ಕಾಪಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಅದಕ್ಕೆ ಪರ್ಯಾಯ ಮಾರ್ಗಗಳನ್ನೂ ಕೇಂದ್ರ ಸರ್ಕಾರ ಸೂಚಿಸಿದೆ.

ಯಾವ ಯಾವ ಗೊಬ್ಬರಗಳ ಕೊರತೆ ಇದೆ?

ಯೂರಿಯಾ ಮತ್ತು ಡಿಎಪಿ ಅಭಾವ: ರೈತರಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಯೂರಿಯಾ, ಡಿಎಪಿ (DAP) ಮತ್ತು ಪೊಟ್ಯಾಶ್ ಗೊಬ್ಬರಗಳ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದೆ. ಭಾರತವು ತನ್ನ ರಸಗೊಬ್ಬರ ಮತ್ತು ಕಚ್ಚಾ ವಸ್ತುಗಳಿಗಾಗಿ ಮಧ್ಯಪ್ರಾಚ್ಯ ದೇಶಗಳನ್ನು ಹೆಚ್ಚಾಗಿ ಅವಲಂಬಿಸಿದೆ. ಆದರೆ ಕಡಲ ಮಾರ್ಗಗಳು ಮುಚ್ಚಲ್ಪಟ್ಟಿರುವುದರಿಂದ ರಸಗೊಬ್ಬರ ಹೊತ್ತ ಹಡಗುಗಳು ಭಾರತದ ಬಂದರುಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ.

ರಾಜ್ಯ ಸರ್ಕಾರವು ಕೇಂದ್ರ ಪೆಟ್ರೋಲಿಯಂ ಮತ್ತು ರಸಗೊಬ್ಬರ ಸಚಿವಾಲಯಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆದ್ಯತೆಯ ಮೇರೆಗೆ ರಸಗೊಬ್ಬರ ಹಡಗುಗಳನ್ನು ದೇಶಕ್ಕೆ ತರಲು ‘ರಹಸ್ಯ ಕಾರ್ಯತಂತ್ರ’ ರೂಪಿಸುತ್ತಿದೆ.ಕಾಳಸಂತೆ ಭೀತಿ: ಗೊಬ್ಬರದ ಕೊರತೆಯನ್ನೇ ಬಂಡವಾಳ ಮಾಡಿಕೊಂಡು ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ (ಕಾಳಸಂತೆ) ಆತಂಕ ಎದುರಾಗಿದ್ದು, ಕೃಷಿ ಇಲಾಖೆಯು ಕಠಿಣ ನಿಗಾ ವಹಿಸಿದೆ.

Related Articles

ಇತ್ತೀಚಿನ ಸುದ್ದಿಗಳು