ಜೂನ್ 6 ರಂದು ಅಭಿಜೀತ್ ದೀಪ್ಕೆ ದೆಹಲಿ ಆಗಮನ: ‘ಕಾಕ್ರೋಚ್ ಜನತಾ ಪಾರ್ಟಿ’ ಹೋರಾಟಕ್ಕೆ ಬೆಂಬಲ ಹಸ್ತ ಚಾಚಿದ ಸೋನಮ್ ವಾಂಗ್‌ಚುಕ್


ನೀಟ್ (NEET-UG) ಪರೀಕ್ಷೆಯ ಪೇಪರ್ ಸೋರಿಕೆ ಮತ್ತು ಸಿಬಿಎಸ್‌ಇ ಪರೀಕ್ಷೆಗಳ ವಿವಾದದ ಹಿನ್ನೆಲೆಯಲ್ಲಿ ದೇಶದ ವಿದ್ಯಾರ್ಥಿಗಳಲ್ಲಿ ತೀವ್ರ ಆಸಮಾಧಾನ ಉಂಟಾಗಿದ್ದು, ಇದರ ತಾರ್ಕಿಕ ಅಂತ್ಯಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಈಗ ನೇರ ಹೋರಾಟಕ್ಕೆ ಧುಮುಕಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜೂನ್ 6 ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಪ್ರಸ್ತುತ ಅಮೆರಿಕದ ಬೋಸ್ಟನ್‌ನಲ್ಲಿರುವ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಹಾಗೂ ಯುವ ಸಾಮಾಜಿಕ ಕಾರ್ಯಕರ್ತ ಅಭಿಜೀತ್ ದೀಪ್ಕೆ ಅವರು ಜೂನ್ 6 ರಂದು ಶನಿವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದು, ಅಲ್ಲಿಂದ ಬೆಂಬಲಿಗರೊಂದಿಗೆ ನೇರವಾಗಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ಪ್ರತಿಭಟನೆಗೆ ಕಾನೂನುಬದ್ಧ ಅನುಮತಿ ಕೋರಲಿದ್ದಾರೆ.

ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಸರ್ಕಾರದ ವಿರುದ್ಧ ಸಂವಿಧಾನಬದ್ಧವಾಗಿ ಧ್ವನಿ ಎತ್ತಲು ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ಅವರು ದೇಶದ ಯುವಜನತೆಗೆ ಕರೆ ನೀಡಿದ್ದಾರೆ.
ಈ ಮಹತ್ವದ ಯುವ ಹೋರಾಟಕ್ಕೆ ಲಡಾಖ್‌ನ ಪ್ರಸಿದ್ಧ ಶಿಕ್ಷಣ ಸುಧಾರಕ ಹಾಗೂ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರು ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ವಾಂಗ್‌ಚುಕ್, ಆರಂಭದಲ್ಲಿ ಈ ಕಾಕ್ರೋಚ್ ಜನತಾ ಪಾರ್ಟಿಯು ವಿದೇಶಿ ಶಕ್ತಿಗಳ ಪಿತೂರಿಯೇ ಎಂದು ತಮಗೆ ಸಂಶಯವಿತ್ತು, ಆದರೆ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಹಂಚಿಕೊಂಡ ದತ್ತಾಂಶಗಳು ಮತ್ತು ಅವರೊಂದಿಗೆ ನಡೆಸಿದ ಸುದೀರ್ಘ ಚರ್ಚೆಯ ನಂತರ ಈ ಚಳವಳಿಯು ಅತ್ಯಂತ ದೇಶಭಕ್ತಿಯಿಂದ ಕೂಡಿದೆ ಹಾಗೂ ಭಾರತೀಯ ಯುವಕರ ನೈಜ ಆಕ್ರೋಶದ ಸಂಕೇತವಾಗಿದೆ ಎಂಬುದು ತಮಗೆ ಮನವರಿಕೆಯಾಗಿದೆ ಎಂದು ಹೇಳಿದ್ದಾರೆ.

ದೇಶದ ಶಿಕ್ಷಣ ವ್ಯವಸ್ಥೆ ಮತ್ತು ಪರೀಕ್ಷಾ ಪ್ರಕ್ರಿಯೆಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಲೋಪಗಳು ಸಂಭವಿಸಿದಾಗ ಯಾವುದೇ ಗೌರವಾನ್ವಿತ ಶಿಕ್ಷಣ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು, ಅದು ಪ್ರಜಾಪ್ರಭುತ್ವದ ಆಶಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರವು ಜೂನ್ 5 ರ ಒಳಗಾಗಿ ಈ ವಿಷಯದಲ್ಲಿ ಯಾವುದೇ ಕಠಿಣ ಕ್ರಮ ಕೈಗೊಳ್ಳದಿದ್ದರೆ ಅಥವಾ ಶಿಕ್ಷಣ ಸಚಿವರ ರಾಜೀನಾಮೆ ಪಡೆಯದಿದ್ದರೆ, ತಾವು ಖುದ್ದಾಗಿ ಜೂನ್ 6 ರಂದು ದೆಹಲಿಗೆ ಆಗಮಿಸಿ ಅಭಿಜೀತ್ ದೀಪ್ಕೆ ನೇತೃತ್ವದ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಸೋನಮ್ ವಾಂಗ್‌ಚುಕ್ ಕೇಂದ್ರ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಹೆಸರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ಪರೀಕ್ಷಾ ಅಕ್ರಮಗಳ ವಿಚಾರಣೆಯ ಸಂದರ್ಭದಲ್ಲಿ ನಿರುದ್ಯೋಗಿ ಯುವಕರನ್ನು ಉದ್ದೇಶಿಸಿ ಆಡಿದ್ದರೆನ್ನಲಾದ ‘ಜಿರಳೆಗಳು’ (Cockroaches) ಎಂಬ ವ್ಯಂಗ್ಯಭರಿತ ಟೀಕೆಯಿಂದ ಹುಟ್ಟಿಕೊಂಡಿದ್ದು, ದೇಶದ ಯುವ ಸಮೂಹವು ಅದೇ ನಿಂದನೆಯನ್ನು ತಮ್ಮ ಹೋರಾಟದ ಅಸ್ತ್ರವನ್ನಾಗಿ ಮಾಡಿಕೊಂಡಿದೆ.

ಪ್ರಸ್ತುತ ಈ ಜಿರೆಳೆ ಸೈನ್ಯದ ಆನ್‌ಲೈನ್ ಅರ್ಜಿಗೆ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹಿ ಹಾಕಿದ್ದು, ಸೋನಮ್ ವಾಂಗ್‌ಚುಕ್ ಅವರಂತಹ ಪ್ರಮುಖ ವ್ಯಕ್ತಿಯ ಬೆಂಬಲ ಸಿಕ್ಕಿರುವುದರಿಂದ ಈ ಹೋರಾಟವು ಈಗ ರಾಷ್ಟ್ರಮಟ್ಟದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು