SALO or 120 days of Sodom; ವಿಶ್ವದ ಅತ್ಯಂತ ವಿವಾದಾತ್ಮಕ ಸಿನಿಮಾ

“ಕೆಲವು ಸಿನಿಮಾಗಳೇ ಹಾಗೆ. ಒಂದು ಕ್ಷಣ ಪ್ರೇಕ್ಷಕನ ಹೃದಯವನ್ನು ಸಿಡಿಯುವಂತೆ ಮಾಡಿ ಬಿಡುತ್ತವೆ. ಅಂತಹಾ ಸಿನಿಮಾಗಳ ಸಾಲಿಗೆ ಸೇರುವ ಸಿನಿಮಾ “Salò, or the 120 Days of Sodom”…” ಮುರಳಿ ಮಾಲೂರು ಅವರ ಬರಹದಲ್ಲಿ

ಸರಿಸುಮಾರು 50 ವರ್ಷಗಳಾದರೂ ಈ ಸಿನಿಮಾ ಚರ್ಚೆಯಲ್ಲಿದೆ ಎಂಬುದು ಸಿನಿಮಾ ನೋಡಿದ ನಂತರ ಒಂದಷ್ಟು ಸಿನಿಮಾ ಬಗ್ಗೆ ಓದುವಾಗ ತಿಳಿಯಿತು. ಖಂಡಿತ ಸತ್ಯವೂ ಸಹ. ಏಕೆಂದರೆ ಈ ಸಿನಿಮಾ ಮನರಂಜನೆಯ ಸಿನಿಮಾ ಅಲ್ಲ ಬದಲಾಗಿ ಒಂದು ವ್ಯವಸ್ಥೆಯನ್ನು ಸಂಪೂರ್ಣವಾಗಿ ಬೆತ್ತಲಾಗಿಸಿದೆ.

ಬಹುಶಃ ಆ ಕಾರಣದಿಂದಲೇ ನಿರ್ದೇಶಕನ ಕೊಲೆಯಾಗಿರಬಹುದು ಎಂಬ ಅನುಮಾನ ಬಹಳಷ್ಟು ಪ್ರಜ್ಞಾವಂತರಲ್ಲಿ ಮೂಡಿದೆ!

ಮೊದಲಿಗೆ ಈ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡ ಎಲ್ಲಾ ನಟ, ನಟಿಯರಿಗೆ ಶರಣು ಶರಣಾರ್ಥಿ. ಈ ರೀತಿಯ ಸಿನಿಮಾ ಎಂಬುದನ್ನ ತಿಳಿದ ಮೇಲೂ ಒಪ್ಪಿಗೆಯನ್ನು ಸೂಚಿಸಿ ನಡಿಸಿರುವುದು ಖಂಡಿತ ಸಣ್ಣ ವಿಚಾರ ಅಲ್ಲವೇ ಅಲ್ಲ, ಅವರ ಧೈರ್ಯಕ್ಕೆ ಮೆಚ್ಚಲೇಬೇಕಿದೆ.

1975ರಲ್ಲಿ ಬಿಡುಗಡೆಯಾದ “Salò, or the 120 Days of Sodom” ಸಿನಿಮಾ ವಿಶ್ವ ಸಿನೆಮಾ ಇತಿಹಾಸದ ಅತ್ಯಂತ ವಿವಾದಾತ್ಮಕ ಚಿತ್ರಗಳಲ್ಲಿ ಒಂದು. ಇಟಾಲಿಯನ್ ನಿರ್ದೇಶಕ ಪಿಯರ್ ಪೌಲೊ ಪಾಸೋಲಿನಿ (Pier Paolo Pasolini) ನಿರ್ದೇಶಿಸಿರುವ ಈ ಸಿನಿಮಾ, ಫ್ರೆಂಚ್ ಲೇಖಕ ಮಾರ್ಕ್ವಿಸ್ ಡಿ ಸಾಡ್ ಅವರ The 120 Days of Sodom ಎಂಬ ಕೃತಿಯನ್ನು ಆಧರಿಸಿ ಮಾಡಿರುವಂತದ್ದು. ಬಿಡುಗಡೆಯಾದ ತಕ್ಷಣವೇ ಅನೇಕ ದೇಶಗಳಲ್ಲಿ ನಿಷೇಧಕ್ಕೆ ಒಳಗಾದ ಕೀರ್ತಿಯೂ ಈ ಸಿನಿಮಾಗೆ ಇದೆ ಮತ್ತು ನಿಷೇಧಕ್ಕೆ ಒಳಗಾದರೂ ಇಂದಿಗೂ ಚರ್ಚೆಯಲ್ಲಿದೆ.

ಚಿತ್ರದ ಕಥೆ ಶುರುವಾಗುವುದು ಎರಡನೇ ವಿಶ್ವಯುದ್ಧದ ಕೊನೆಯ ಹಂತದ ಇಟಲಿಯ ಫ್ಯಾಸಿಸ್ಟ್ ಆಡಳಿತದ ಹಿನ್ನೆಲೆಯಲ್ಲಿದೆ. ಅಧಿಕಾರ ಮತ್ತು ಹಣದ ಬಲ ಹೊಂದಿರುವ ನಾಲ್ವರು ಪ್ರಭಾವಿ ವ್ಯಕ್ತಿಗಳು, ಕೆಲ ಯುವ ಹುಡುಗರು ಮತ್ತು ಹುಡುಗಿಯರನ್ನು ಅಪಹರಣ ಮಾಡಿ ಒಂದು ಪ್ರತ್ಯೇಕವಾದ ಮನೆಯಲ್ಲಿ ಬಂಧಿಸುತ್ತಾರೆ. ಇವರ ನಿಯಂತ್ರಣದಲ್ಲಿ ಇರಿಸಿಕೊಳ್ಳುತ್ತಾರೆ.

ಸಿನಿಮಾದಲ್ಲಿ ಯುವಕರ ಮೇಲೆ ಮಾನಸಿಕ ಹಿಂಸೆ, ಕ್ರೂರವಾದ ಶಿಕ್ಷೆಗಳು, ಬಲವಂತವಾಗಿ ಅವರನ್ನು ಬಳಸಿಕೊಳ್ಳುವುದು, ದೈಹಿಕ ಹಿಂಸೆಯ ಜೊತೆಗೆ ಅವರಿಗೆ ಮಲ ಮೂತ್ರವನ್ನು ಬಲವಂತವಾಗಿ ತಿನ್ನಿಸುವುದು ಸೇರಿದಂತೆ ಹಲವು ರೀತಿಯ ಅಮಾನವೀಯ ದೌರ್ಜನ್ಯಗಳನ್ನ ಕಣ್ಣಿಗೆ ಕಟ್ಟುವಂತೆ ನಿರ್ದೇಶಕ ಯಾವುದೇ ರೀತಿಯ ಫಿಲ್ಟರ್‌ ಇಲ್ಲದೆ ತೋರಿಸಿದ್ದಾರೆ. ಈ ದೃಶ್ಯಗಳು ಬಹಳ ತೀವ್ರವಾಗಿ ಕಾಡುವುದರಿಂದ ಈ ಸಿನಿಮಾ ಇಂದಿಗೂ ಸಹಾ ಪ್ರೇಕ್ಷಕರಲ್ಲಿ ಆಕ್ರೋಶವನ್ನಷ್ಟೇ ಅಲ್ಲದೆ ಚಿಂತೆಗೀಡು ಮಾಡುತ್ತದೆ.

ಪಾಸೋಲಿನಿ ಈ ಹಿಂಸೆಯನ್ನ ಖಂಡಿತವಾಗಿಯೂ ಮನರಂಜನೆಗಾಗಿ ತೋರಿಸಿಲ್ಲ; ಅಧಿಕಾರದ ದುರುಪಯೋಗ ಮತ್ತು ಫ್ಯಾಸಿಸ್ಟ್ ವ್ಯವಸ್ಥೆಯ ಕ್ರೌರ್ಯವನ್ನು ಪ್ರತಿನಿಧಿಸುವ ರೂಪಕವಾಗಿ ಬಳಸಿದ್ದಾರೆ ಎಂಬುದಾಗಿ ಸಿನಿಮಾ ವಿಮರ್ಶಕರು ವಿಶ್ಲೇಷಿಸಿದ್ದಾರೆ.

Catherine Breillat ಎಂಬ ಫ್ರೆಂಚ್ ನಿರ್ದೇಶಕಿ “Salò ಎಂಬ ಸಿನಿಮಾ ಅತ್ಯಂತ ಧೈರ್ಯಶಾಲಿ ಮತ್ತು ನಿರ್ಭೀತ ಚಿತ್ರಗಳಲ್ಲಿ ಒಂದು, ಈ ಸಿನಿಮಾ ಸಮಾಜದ ಕಪಟ ನೈತಿಕತೆಯನ್ನು ಬಯಲಿಗೆಳೆಯುತ್ತದೆ” ಎಂದು ಆಭಿಪ್ರಾಯ ಪಟ್ಟಿದ್ದಾರೆ.

ಪಾಸೋಲಿನಿಯ ಪ್ರಕಾರ, ಫ್ಯಾಸಿಸಂ ಎಂಬುದು ಕೇವಲ ರಾಜಕೀಯವಲ್ಲ; ಅದು ಮನುಷ್ಯನನ್ನು ವಸ್ತುವನ್ನಾಗಿ ಪರಿವರ್ತಿಸುವ ವ್ಯವಸ್ಥೆ. ಸಿನಿಮಾದಲ್ಲಿರುವ ಯುವಕರು ಸಾಮಾನ್ಯ ಜನರನ್ನ ಪ್ರತಿನಿಧಿಸಿದರೆ, ಶೋಷಣೆ ಮಾಡುವ ನಾಲ್ಕು ಜನ ನಟರು ರಾಜಕೀಯ, ಧಾರ್ಮಿಕ, ಆರ್ಥಿಕ ಮತ್ತು ನ್ಯಾಯಾಂಗ ಅಧಿಕಾರದ ಸಂಕೇತಗಳಾಗಿದ್ದಾರೆ. ಹೀಗಾಗಿ ಈ ಸಿನಿಮಾವು ಅಧಿಕಾರವು ನಿಯಂತ್ರಣವಿಲ್ಲದೆ ಬೆಳೆಯುವಾಗ, ಮನುಷ್ಯನ ಗೌರವ ಹೇಗೆ ನಾಶವಾಗುತ್ತದೆ ಎಂಬುದನ್ನ ತೋರಿಸುವ ರಾಜಕೀಯ ರೂಪಕವಾಗಿದೆ ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ.

ಚಿತ್ರ ಬಿಡುಗಡೆಯಾಗುವ ಕೆಲವೇ ದಿನಗಳ ಮೊದಲು, ಅಂದರೆ 1975ರ ನವೆಂಬರ್ 2ರಂದು ಪಾಸೋಲಿನಿ ರೋಮ್ ಸಮೀಪದ ಒಸ್ಟಿಯಾ ಪ್ರದೇಶದಲ್ಲಿ ಶವವಾಗಿ ಸಿಗುತ್ತಾರೆ. ಅವರ ಮೃತದೇಹದ ಮೇಲೆ ತೀವ್ರವಾದ ಹಲ್ಲೆಯ ಗುರುತುಗಳು ಕಂಡುಬಂದಿರುತ್ತವೆ. ತನಿಖೆಯ ಆರಂಭದಲ್ಲಿ ಒಬ್ಬ ಯುವಕ ಕೊಲೆಯ ಹೊಣೆಯನ್ನು ಒಪ್ಪಿಕೊಂಡಿದ್ದರೂ, ತದನಂತರ ನೀಡಿದ ಹೇಳಿಕೆಗಳಿಂದ ಪ್ರಕರಣದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಮೊದಲಿಗೆ ತಾನೊಬ್ಬನೇ ಕೊಂದಿರುವುದಾಗಿ ಹೇಳಿಕೆಯನ್ನು ಕೊಟ್ಟು ನಂತರ ತನ್ನ ಜೊತೆ ಇನ್ನೂ ಇಬ್ಬರು ಇದ್ದರು ಎಂಬ ಹೇಳಿಕೆಯ್ನು ನೀಡುತ್ತಾನೆ. ರಾಜಕೀಯ ಕಾರಣಗಳಿಗಾಗಿ ಅವರನ್ನು ಕೊಲ್ಲಲಾಯಿತೇ? ಎಂಬ ಪ್ರಶ್ನೆ ಇವತ್ತಿಗೂ ಸಹ ಚರ್ಚೆಗೆ ಗ್ರಾಸವಾಗಿದೆ. ಆದರೆ ಅದರ ಬಗ್ಗೆ ಸ್ಪಷ್ಟವಾದ ಸಾಕ್ಷ್ಯಗಳು ಇದುವರೆಗೂ ದೊರೆತಿಲ್ಲ..

‘ಸಾಲೋ’ ಸಿನಿಮಾ ನೋಡುವಾಗ ಪ್ರೇಕ್ಷಕರಿಗೆ ಕ್ರೌರ್ಯ ಕಾಣಬಹುದು. ಆದರೆ ಅದರ ಮೂಲ ಉದ್ದೇಶ ಅಧಿಕಾರ, ಫ್ಯಾಸಿಸಂ ಮತ್ತು ಮಾನವನ ಕ್ರೌರ್ಯ ಹೇಗೆಲ್ಲಾ ಇದೆ ಎಂಬ ಜಗತ್ತನ್ನು ಪ್ರೇಕ್ಷಕನಿಗೆ ಪರಿಚಯಿಸುತ್ತಾ ಸಾಗುತ್ತದೆ.

ನಿರ್ದೇಶಕ ಪಾಸೋಲಿನಿ ತಮ್ಮ ಕೊನೆಯ ದಿನಗಳ ಸಂದರ್ಶನಗಳಲ್ಲಿ, ಆಧುನಿಕ ಸಮಾಜದಲ್ಲಿ ಅಧಿಕಾರವು ಜನರನ್ನು “ಉಪಭೋಗಿಸಬಹುದಾದ ವಸ್ತುಗಳನ್ನಾಗಿ” ಪರಿವರ್ತಿಸುತ್ತಿದೆ ಎಂಬ ಮಾತುಗಳನ್ನು ಆಡಿದ್ದಾರೆ. ಇವತ್ತಿಗೂ ಸಹಾ ಈ ಮಾತು ಪ್ರಸ್ತುತವೆನಿಸುತ್ತದೆ.

ಈ ಸಿನಿಮಾ ನೋಡಬಹುದೇ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದರೆ, ಖಂಡಿತವಗಿಯೂ ನೋಡಬಹುದು. ಆದರೆ ಕ್ರೌರ್ಯವನ್ನು ತಡೆದುಕೊಳ್ಳಬಲ್ಲ ಶಕ್ತಿ ನಿಮ್ಮಲ್ಲಿ ಇದ್ದರೆ ಮಾತ್ರ. ಈ ಮಟ್ಟಗಿನ ಕ್ರೌರ್ಯವನ್ನು ನೀವೂ ಯಾವುದೇ ಸಿನಿಮಾದಲ್ಲಿ ನೋಡಿರಲಾರಿರಿ.

Related Articles

ಇತ್ತೀಚಿನ ಸುದ್ದಿಗಳು