ಅಸಮರ್ಥರ ಕೈಯಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ಕೊಡುವುದು ಸಾಧ್ಯವಿಲ್ಲ, ಈಗಲೇ ಧರ್ಮೇಂದ್ರ ಪ್ರಧಾನ್‌ ಅವರನ್ನು ಕೆಳಗಿಳಿಸಿ: ಕಾಕ್ರೋಚ್‌ ಪಾರ್ಟಿ

ದೆಹಲಿ: ಫಲಿತಾಂಶದ ಪೋರ್ಟಲ್‌ನಲ್ಲಿ ಉಂಟಾದ ಕ್ಲೌಡ್ ಸ್ಟೋರೇಜ್ ಕಾನ್ಫಿಗರೇಶನ್ ಸಮಸ್ಯೆಯಿಂದಾಗಿ ‘ಜೆಇಇ ಅಡ್ವಾನ್ಸ್‌ಡ್-2026’ ಪರೀಕ್ಷ ಬರೆದಿದ್ದ ಅಭ್ಯರ್ಥಿಗಳ ವೈಯಕ್ತಿಕ ಮಾಹಿತಿ ಬಹಿರಂಗಗೊಂಡಿದೆ. ಈ ಗಂಭೀರ ಲೋಪವು ದೇಶದ ಶಿಕ್ಷಣ ವ್ಯವಸ್ಥೆ ಮತ್ತು ಡಿಜಿಟಲ್ ಮೂಲಸೌಕರ್ಯಗಳನ್ನು ಎಷ್ಟು ಅಸಮರ್ಥ ವ್ಯಕ್ತಿಗಳು ಮುನ್ನಡೆಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಗುರುವಾರ ತೀವ್ರವಾಗಿ ವಾಗ್ದಾಳಿ ನಡೆಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿ ಬಳಿಕ ದೇಶಾದ್ಯಂತ ವ್ಯಾಪಿಸಿರುವ ಈ ವಿದ್ಯಾರ್ಥಿ ಆಂದೋಲನದ ನಾಯಕರು, ಶಿಕ್ಷಣ ಕ್ಷೇತ್ರದಲ್ಲಿ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ ಸಚಿವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನವದೆಹಲಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಜೆಪಿ ನಾಯಕರು, ಈ ದೋಷದಿಂದಾಗಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಹೆಸರು, ಫೋನ್ ನಂಬರ್ ಮತ್ತು ಭಾವಚಿತ್ರಗಳು ಆನ್‌ಲೈನ್‌ನಲ್ಲಿ ಬಹಿರಂಗಗೊಂಡಿವೆ. ಇದು ವಿದ್ಯಾರ್ಥಿಗಳ ವೈಯಕ್ತಿಕ ಡೇಟಾ ಭದ್ರತೆ ಮತ್ತು ದೇಶದ ಪ್ರಮುಖ ಪರೀಕ್ಷಾ ವ್ಯವಸ್ಥೆಗಳ ನಿರ್ವಹಣೆಯ ಮೇಲೆ ತೀವ್ರ ಆತಂಕವನ್ನು ಮೂಡಿಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಭದ್ರತಾ ಲೋಪವನ್ನು ಖಂಡಿಸಿ ಜೂನ್ 6 ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ಈಗಾಗಲೇ ಪ್ರಕಟಿಸಿದೆ. ದೆಹಲಿ ಪೊಲೀಸರು ಈ ಪ್ರತಿಭಟನೆಗೆ ಅನುಮತಿ ನೀಡದಿದ್ದರೂ ಸಹ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತಮ್ಮ ಹೋರಾಟ ಮತ್ತು ಆಂದೋಲನ ಮುಂದುವರಿಯಲಿದೆ ಎಂದು ಪಕ್ಷದ ನಾಯಕರು ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು