ದೇಶದ ಕಾರ್ಪೊರೇಟ್ ರಂಗವನ್ನೇ ನಡುಗಿಸಿದ ‘ರಾಜೇಶ್ ಎಕ್ಸ್‌ಪೋರ್ಟ್ಸ್’ ಮಹಾ ಹಗರಣ: ₹15.15 ಲಕ್ಷ ಕೋಟಿ ಆದಾಯ ಹೆಚ್ಚು ತೋರಿಸಿ ವಂಚನೆ!

ಹಣಕಾಸು ಹಗರಣಗಳನ್ನು ಎಷ್ಟು ಚಾಣಾಕ್ಷತನದಿಂದ ನಿರ್ವಹಿಸಬಹುದು ಎಂಬುದನ್ನು ಇತ್ತೀಚಿನ ‘ಲಕ್ಕಿ ಭಾಸ್ಕರ್’ ಚಲನಚಿತ್ರದಲ್ಲಿ ತೋರಿಸಲಾಗಿತ್ತು. 1980ರ ದಶಕದ ಶೇರ್ ಮಾರುಕಟ್ಟೆಯ ಹಗರಣದ ಕಿಂಗ್‌ಪಿನ್ ಹರ್ಷದ್ ಮೆಹ್ತಾ ಜೀವನವನ್ನು ಆಧರಿಸಿದ ಈ ಕಥೆಯಂತೆ, ವ್ಯವಸ್ಥೆಯ ಲೊಸುಗುಗಳನ್ನು ಬಳಸಿಕೊಂಡು ಬೃಹತ್ ಅಕ್ರಮ ಎಸಗುವ ‘ಲಕ್ಕಿ ಭಾಸ್ಕರ್’ಗಳು ಇಂದಿಗೂ ಹುಟ್ಟಿಕೊಳ್ಳುತ್ತಲೇ ಇದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಬೆಂಗಳೂರು ಮೂಲದ ಪ್ರಸಿದ್ಧ ಚಿನ್ನ ಮತ್ತು ಆಭರಣ ದೈತ್ಯ ಕಂಪನಿಯಾದ ‘ರಾಜೇಶ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್’ (REL) ಮಾಡಿರುವ ಮಹಾ ವಂಚನೆ ಈಗ ದೇಶಿ ಮತ್ತು ಅಂತಾರಾಷ್ಟ್ರೀಯ ಕಾರ್ಪೊರೇಟ್ ವಲಯವನ್ನು ಬೆಚ್ಚಿಬೀಳಿಸಿದೆ.

ಕಂಪನಿಯು ತನ್ನ ವಾಸ್ತವ ಆದಾಯಕ್ಕಿಂತ ಬರೋಬ್ಬರಿ ₹15.15 ಲಕ್ಷ ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ತೋರಿಸಿ, ಕೃತಕವಾಗಿ ಶೇರ್ ಮೌಲ್ಯವನ್ನು ಹೆಚ್ಚಿಸಿಕೊಂಡು ಹೂಡಿಕೆದಾರರನ್ನು ಹಾಗೂ ಸರ್ಕಾರಿ ವ್ಯವಸ್ಥೆಗಳನ್ನು ವಂಚಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ಈ ಕುರಿತು ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (SEBI) ಭಾಹ್ಯವಾಗಿ 109 ಪುಟಗಳ ಸುದೀರ್ಘ ವರದಿ ಬಿಡುಗಡೆ ಮಾಡಿದ್ದು, ಆರ್‌ಇಎಲ್ ಕಂಪನಿಯ ಪ್ರವರ್ತಕ ಹಾಗೂ ಹಾಲಿ ವ್ಯವಸ್ಥಾಪಕ ನಿರ್ದೇಶಕ (CMD) ರಾಜೇಶ್ ಮೆಹ್ತಾ ಅವರ ಮೇಲೆ ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸದಂತೆ ತಾತ್ಕಾಲಿಕ ನಿಷೇಧ ಹೇರಿದೆ.

ಆಶ್ಚರ್ಯದ ಸಂಗತಿಯೆಂದರೆ, ಈ ಇಡೀ ಹಗರಣವನ್ನು ಸರ್ಕಾರದ ಯಾವುದೇ ತನಿಖಾ ಸಂಸ್ಥೆಗಳಾಗಲಿ ಅಥವಾ ಗುಪ್ತಚರ ವಿಭಾಗವಾಗಲಿ ಪತ್ತೆಹಚ್ಚಿರಲಿಲ್ಲ. ಬದಲಿಗೆ, 2025ರಲ್ಲಿ ಸಾಮಾನ್ಯ ಹೂಡಿಕೆದಾರನೊಬ್ಬ ಇ-ಮೇಲ್ ಮೂಲಕ ನೀಡಿದ ಸಣ್ಣ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಸೆಬಿಗೆ ಈ ಹಿಮಾಲಯದಷ್ಟಿರುವ ವಂಚನೆಯ ಸತ್ಯ ದರ್ಶನವಾಗಿದೆ. ಸೆಬಿ ನೋಟಿಸ್ ನೀಡಿದರೂ ಕಂಪನಿ ಆಡಿಟ್ ರಿಪೋರ್ಟ್ ನೀಡದೆ ಅಸಹಕಾರ ತೋರಿತ್ತು.

ಕಾರ್ಪೊರೇಟ್ ವಂಚನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಿದೇಶಿ ಶೆಲ್ (ಖೋಟಾ) ಕಂಪನಿಗಳ ಜಾಲವನ್ನೇ ರಾಜೇಶ್ ಎಕ್ಸ್‌ಪೋರ್ಟ್ಸ್ ಕೂಡ ಬಳಸಿಕೊಂಡಿದೆ. 2015ರಲ್ಲಿ ಸ್ವಿಟ್ಜರ್ಲೆಂಡ್‌ನ ವಿಶ್ವದ ಅತಿ ದೊಡ್ಡ ಚಿನ್ನದ ರಿಫೈನರಿ ‘ವಲ್ಕಾಂಬಿ’ಯನ್ನು ಖರೀದಿಸಿದ್ದ ಈ ಸಂಸ್ಥೆ, ಅಲ್ಲಿಂದಲೇ ತನ್ನ ಅಕ್ರಮದ ಕಥೆ ನಡಿಸಿತ್ತು. ಕಂಪನಿಯ ನೂರಾರು ಕೋಟಿ ಆದಾಯವನ್ನು ಲಕ್ಷ ಕೋಟಿಗಳನ್ನಾಗಿ ಸುಳ್ಳು ಲೆಕ್ಕ ಪತ್ರಗಳ ಮೂಲಕ ಬಿಂಬಿಸಲಾಗಿತ್ತು. ಇಷ್ಟೇ ಅಲ್ಲದೆ ಸಿಎಂಡಿ ರಾಜೇಶ್ ಮೆಹ್ತಾ ಮತ್ತು ಸಂಸ್ಥೆಯ ಇತರ ಪ್ರಮುಖ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಕಂಪನಿಯ ಕೋಟ್ಯಂತರ ರೂಪಾಯಿ ನಿಧಿಯನ್ನು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದನ್ನು ಸೆಬಿ ಬಹಿರಂಗಪಡಿಸಿದೆ.

ಭಾರತದ ಕಾರ್ಪೊರೇಟ್ ಇತಿಹಾಸವನ್ನು ಗಮನಿಸಿದರೆ ಇಂತಹದೇ ಹಗರಣಗಳು ಈ ಹಿಂದೆಯೂ ನಡೆದಿವೆ. 2009ರಲ್ಲಿ ಅವಿಭಜಿತ ಆಂಧ್ರಪ್ರದೇಶದ ಹೆಮ್ಮೆಯ ಐಟಿ ಸಂಸ್ಥೆಯಾಗಿದ್ದ ‘ಸತ್ಯಂ ಕಂಪನಿ’ಯ ಬ್ಯಾಲೆನ್ಸ್ ಶೀಟ್‌ನಲ್ಲಿ ₹7,800 ಕೋಟಿ ರೂಪಾಯಿಗಳ ವ್ಯತ್ಯಾಸ ಕಂಡುಬಂದಿತ್ತು. ನಕಲಿ ಆದಾಯ ತೋರಿಸಿ ಶೇರ್ ಬೆಲೆ ಹೆಚ್ಚಿಸಿದ್ದ ಈ ಹಗರಣದಲ್ಲಿ ಸಂಸ್ಥೆಯ ಮುಖ್ಯಸ್ಥ ರಾಮಲಿಂಗರಾಜುಗೆ 7 ವರ್ಷ ಜೈಲು ಶಿಕ್ಷೆಯಾಗಿತ್ತು.

ಅದೇ ರೀತಿ 2023ರ ಜನವರಿಯಲ್ಲಿ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಗ್ರೂಪ್ ಆಫ್ ಕಂಪನೀಸ್‌ನ ಹಣಕಾಸು ಅಕ್ರಮಗಳು ಹಾಗೂ ಶೇರ್ ಮೌಲ್ಯದ ಕೃತಕ ಹೆಚ್ಚಳವನ್ನು ಸಾಕ್ಷ್ಯಸಹಿತ ಹೊರಗೆಡವಿದಾಗ ಅದಾನಿ ಸಾಮ್ರಾಜ್ಯದ ಲಕ್ಷ ಕೋಟಿ ರೂಪಾಯಿ ಧೂಳೀಪಟವಾಗಿತ್ತು. ಆದರೆ ಆ ಪ್ರಕರಣದಲ್ಲಿ ಕಣ್ಣೊರೆಸುವ ತನಿಖೆ ನಡೆಸಿದ ಸೆಬಿ ಕೊನೆಗೆ ಹಿಂಡನ್‌ಬರ್ಗ್ ಆರೋಪಗಳನ್ನು ತಳ್ಳಿಹಾಕಿತ್ತು.

ಮೋದಿ ಸರ್ಕಾರವೂ ಒಂದು ಹೆಜ್ಜೆ ಮುಂದೆ ಹೋಗಿ ಇದನ್ನು ಭಾರತದ ಮೇಲಿನ ವಾಣಿಜ್ಯ ದಾಳಿ ಎಂದು ಬಿಂಬಿಸಿ ಅದಾನಿ ಬೆನ್ನಿಗೆ ನಿಂತಿತ್ತು. ಇಂತಹ ನವ-ಉದಾರೀಕರಣದ ಆರ್ಥಿಕ ನೀತಿಗಳೇ ಹಗರಣಗಳ ಮೂಲವಾಗಿದ್ದು, ಜನಸಾಮಾನ್ಯರು ಸದಾ ಜಾಗರೂಕರಾಗಿರದಿದ್ದರೆ ಇಂತಹ ವ್ಯವಸ್ಥಿತ ವಂಚನೆಗಳಿಗೆ ಬಲಿಯಾಗುವುದು ಅನಿವಾರ್ಯವಾಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು