ದೆಹಲಿ ತಲುಪಿದ ‘ಕಾಕ್ರೋಚ್ ಪಾರ್ಟಿ’ ಸಂಸ್ಥಾಪಕ ಅಭಿಜೀತ್: ತ್ರಿವರ್ಣ ಧ್ವಜ, ನೋಟ್‌ಬುಕ್ ಹಿಡಿದು ಜಂತರ್ ಮಂತರ್‌ಗೆ ಬರುವಂತೆ ಪ್ರತಿಭಟನಾಕಾರರಿಗೆ ಕರೆ

ನೀಟ್, ಸಿಬಿಎಸ್‌ಇ ಹಾಗೂ ವಿವಿಧ ಪ್ರಮುಖ ಪರೀಕ್ಷೆಗಳ ಅಕ್ರಮ ಹಾಗೂ ಪೇಪರ್ ಲೀಕ್ ಹಗರಣವನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿರುವ ಆನ್‌ಲೈನ್ ಆಂದೋಲನದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಶನಿವಾರ ದೇಶ ರಾಜಧಾನಿಗೆ ಆಗಮಿಸಿದ್ದಾರೆ.

ಅಮೆರಿಕದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿರುವ ಕುರಿತು ತಮ್ಮ ‘ಎಕ್ಸ್’ (X) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅಭಿಜೀತ್, ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರನ್ನು ಭೇಟಿಯಾಗಲು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರು ಅತ್ಯಂತ ಶಿಸ್ತು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿರುವ ಅವರು, ಪ್ರತಿಭಟನಾಕಾರರು ತಮ್ಮೊಂದಿಗೆ ಕಡ್ಡಾಯವಾಗಿ ರಾಷ್ಟ್ರಧ್ವಜ ಹಾಗೂ ಒಂದು ನೋಟ್‌ಬುಕ್ ತರಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಜಂತರ್ ಮಂತರ್ ಕಡೆಗೆ ಬರುವ ಮಾರ್ಗದಲ್ಲಿ ಸಿಗುವ ಪೊಲೀಸರಿಗೆ ಹೂವುಗಳನ್ನು ನೀಡುವ ಮೂಲಕ ತಮ್ಮ ಶಾಂತಿ ಹಾಗೂ ಪ್ರೀತಿಯ ಸಂದೇಶವನ್ನು ಸಾರಬೇಕು ಎಂದು ಅವರು ಬೆಂಬಲಿಗರಿಗೆ ತಿಳಿಸಿದ್ದಾರೆ. ಮತ್ತೊಂದೆಡೆ, ಈ ಆಂದೋಲನಕ್ಕೆ ಬೆಂಬಲ ಸೂಚಿಸಿರುವ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್, ಒಂದು ವೇಳೆ ಪೊಲೀಸರು ಪ್ರತಿಭಟನೆಯ ನೇತೃತ್ವ ವಹಿಸಿರುವ ಅಭಿಜೀತ್ ದೀಪ್ಕೆ ಅವರನ್ನು ಬಂಧಿಸಿದರೆ, ತಾವು ಆರು ವಾರಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್మేಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಈ ಆನ್‌ಲೈನ್ ಒಕ್ಕೂಟವು ಜಂತರ್ ಮಂತರ್ ಚಲೋ ಹಮ್ಮಿಕೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು