LPG ಗೃಹ ಬಳಕೆ ಗ್ಯಾಸ್ ಬೆಲೆ ಮತ್ತೆ ಏರಿಕೆ: ಸಾಮಾನ್ಯ ಜನರ ಜೇಬಿಗೆ ಮತ್ತೆ ಕತ್ತರಿ ಹಾಕಿದ ಸರ್ಕಾರ

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲೆದೋರಿರುವ ಬಿಕ್ಕಟ್ಟಿನ ನೇರ ಪರಿಣಾಮ ಭಾರತದ ಸಾಮಾನ್ಯ ಗ್ರಾಹಕರ ಮೇಲೆ ಬಿದ್ದಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ 14.2 ಕೆಜಿಗೆ 29 ರೂಪಾಯಿಗಳಷ್ಟು ಹೆಚ್ಚಿಸಲಾಗಿದ್ದು, ಈ ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.

ಈ ಹೊಸ ಬೆಲೆ ಏರಿಕೆಯ ಪರಿಣಾಮವಾಗಿ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 913 ರೂ.ನಿಂದ 942 ರೂ.ಗೆ ಜಿಗಿದಿದೆ. ಕಳೆದ ಮಾರ್ಚ್ 7ರಂದು 60 ರೂಪಾಯಿ ಏರಿಕೆ ಮಾಡಿದ ನಂತರ, ಕೇವಲ ಮೂರು ತಿಂಗಳ ಅಂತರದಲ್ಲಿ ಮತ್ತೆ ದರ ಹೆಚ್ಚಿಸಲಾಗಿದೆ. ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷ ಮತ್ತು ಅಸ್ಥಿರತೆಯೇ ಈ ಸರಣಿ ದರ ಏರಿಕೆಗೆ ಮೂಲ ಕಾರಣ ಎನ್ನಲಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿವೆ. ಈ ಬೆಲೆ ಪರಿಷ್ಕರಣೆಗೂ ಮುನ್ನ ಪ್ರತಿ ಎಲ್‌ಪಿಜಿ ಸಿಲಿಂಡರ್ ಮಾರಾಟದಲ್ಲಿ ಸುಮಾರು 703 ರೂಪಾಯಿ ನಷ್ಟ ಉಂಟಾಗುತ್ತಿತ್ತು ಎಂದು ಉದ್ಯಮ ಮೂಲಗಳು ತಿಳಿಸಿವೆ. 29 ರೂ. ಹೆಚ್ಚಿಸಿದ ನಂತರವೂ ನಿಜವಾದ ವೆಚ್ಚ ಮತ್ತು ಮಾರಾಟದ ಬೆಲೆಯ ನಡುವಿನ ಅಂತರ ಇನ್ನೂ ಭಾರಿ ಪ್ರಮಾಣದಲ್ಲಿ ಉಳಿದಿದೆ.

ಪೆಟ್ರೋಲ್, ಡೀಸೆಲ್, ಸಿಎನ್‌ಜಿಗೂ ತಟ್ಟಿದ ಬಿಸಿ
ಅಡುಗೆ ಅನಿಲ ಮಾತ್ರವಲ್ಲ, ಎಲ್ಲ ಇಂಧನಗಳ ಬೆಲೆ ಏರಿಕೆಯ ಭರಾಟೆಯಲ್ಲಿ ಸಾಗಿದೆ. ಮೇ ಮಧ್ಯಭಾಗದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 7.50 ರೂ. ಹೆಚ್ಚಾಗಿದ್ದರೆ, ಸಿಎನ್‌ಜಿ ದರ ಕಿಲೋಗ್ರಾಂಗೆ 6 ರೂಪಾಯಿ ತನಕ ಏರಿದೆ. ಬೆಲೆ ಪರಿಷ್ಕರಣೆಯ ನಂತರವೂ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 11 ರೂ. ಮತ್ತು ಡೀಸೆಲ್‌ಗೆ 33.6 ರೂ. ನಷ್ಟ ಅನುಭವಿಸುತ್ತಿರುವುದು ಕಂಪನಿಗಳ ಮೇಲಿನ ಒತ್ತಡ ಎಷ್ಟು ತೀವ್ರವಾಗಿದೆ ಎಂಬುದನ್ನು ತೋರಿಸುತ್ತದೆ.

ಸರ್ಕಾರ ಅಂತಾರಾಷ್ಟ್ರೀಯ ಬೆಲೆ ಏರಿಕೆಯ ಪೂರ್ಣ ಹೊರೆಯನ್ನು ಗ್ರಾಹಕರ ಮೇಲೆ ಹಾಕಿದೆ. ಪಶ್ಚಿಮ ಏಷ್ಯಾದ ಅನಿಶ್ಚಿತ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲೂ ಇಂಧನ ಬೆಲೆಗಳ ಮೇಲೆ ಒತ್ತಡ ಕಾಯಂ ಆಗಿ ಉಳಿಯಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು