ಜಮೀರ್ ಅಹ್ಮದ್ ಗೆ ಸಚಿವ ಸ್ಥಾನ ನೀಡಿ – ಡಿಸಿಎಂ ಪರಂ

ತುಮಕೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ (DK Shivakumar) ಹೊಸ ಸಚಿವ ಸಂಪುಟದಲ್ಲಿ ಪ್ರಭಾವಿ ಅಲ್ಪಸಂಖ್ಯಾತ ಮುಖಂಡ ಜಮೀರ್ ಅಹ್ಮದ್ ಖಾನ್ (Zameer Ahmed khan) ಅವರಿಗೆ ಅವಕಾಶ ಸಿಗದಿರುವುದು ಪ್ರಸ್ತುತ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಯ ನಡುವೆ, ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (Parameshwar) ಅವರು ಜಮೀರ್ ಅಹ್ಮದ್ ಖಾನ್ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಜಮೀರ್ ಅವರು ಸಚಿವ ಸ್ಥಾನಕ್ಕೆ ಸಂಪೂರ್ಣ ಅರ್ಹರಾಗಿದ್ದು, ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪರಮೇಶ್ವರ್ ಪ್ರತಿಪಾದಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದಲ್ಲಿ ಅತ್ಯಂತ ಜನಪ್ರಿಯ ಮತ್ತು ಸಮರ್ಥ ನಾಯಕರಾಗಿರುವ ಜಮೀರ್ ಅವರು, ಈ ಹಿಂದಿನ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು ಎಂಬುದನ್ನು ಡಿಸಿಎಂ ನೆನಪಿಸಿಕೊಂಡಿದ್ದಾರೆ. ಮೊದಲ ಹಂತದಲ್ಲಿ ಅವರಿಗೆ ಸ್ಥಾನ ಸಿಗದಿರಲು ಕಾರಣ ತಿಳಿದಿಲ್ಲವಾದರೂ, ಎರಡನೇ ಹಂತದ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಹೈಕಮಾಂಡ್ ಈ ಬೇಡಿಕೆಯನ್ನು ಸಕಾರಾತ್ಮಕವಾಗಿ ಪರಿಗಣಿಸಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ, ದಾವಣಗೆರೆ ಉಪಚುನಾವಣೆ ವೇಳೆ ಪಕ್ಷದ ಅಭ್ಯರ್ಥಿ ವಿರುದ್ಧ ಮತದಾರರ ಮೇಲೆ ಪ್ರಭಾವ ಬೀರಿದ ಆರೋಪ ಮತ್ತು ಆಡಿಯೋ ವಿವಾದದ ಹಿನ್ನೆಲೆಯಲ್ಲಿ ಜಮೀರ್ ಅವರನ್ನು ಸಂಪುಟದಿಂದ ದೂರ ಇಡಲಾಗಿದೆ ಎಂಬ ರಾಜಕೀಯ ಮಾತುಗಳೂ ಕೇಳಿಬರುತ್ತಿವೆ. ಆದಾಗ್ಯೂ, ಮುಂಬರುವ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆಗಳಿದ್ದು, ಹೈಕಮಾಂಡ್ ತೆಗೆದುಕೊಳ್ಳುವ ಅಂತಿಮ ತೀರ್ಮಾನದ ಕಡೆಗೆ ಎಲ್ಲರ ಗಮನ ನೆಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು